ಸುಳ್ಯ: ಜೇಸಿಐ ಸುಳ್ಯ ಪಯಸ್ವಿನಿ (ರಿ.) ಘಟಕದ ಜೇಸಿಐ ಸಪ್ತಾಹ ‘ಸುಸ್ನಿಲ-2026’ ರ ಅಂಗವಾಗಿ ಸುಳ್ಯದ ಮೆಟ್ರಿಕ್ ನಂತರದ ವಿದ್ಯಾರ್ಥಿನಿ ನಿಲಯದ ವಿದ್ಯಾರ್ಥಿಗಳಿಗೆ ‘ಮುಟ್ಟು ಗುಟ್ಟಲ್ಲ: ಹದಿಹರೆಯದ ಹೆಜ್ಜೆಗೆ ಆರೋಗ್ಯದ ಮಾಹಿತಿ’ ಎಂಬ ವಿಶೇಷ ತರಬೇತಿ ಕಾರ್ಯಾಗಾರವನ್ನು ಇತ್ತೀಚೆಗೆ ಆಯೋಜಿಸಲಾಗಿತ್ತು.

ಜೇಸಿಐ ಸುಳ್ಯ ಪಯಸ್ವಿನಿಯ ಪೂರ್ವಾಧ್ಯಕ್ಷರಾದ ಜೇಸಿ ಹೆಚ್.ಜಿ.ಎಫ್. ರಂಜಿತ್ ಕುಕ್ಕೆಟ್ಟಿ ಅವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಘಟಕಾಧ್ಯಕ್ಷೆ ಜೆಎಫ್ಎಂ ಲತಾಶ್ರೀ ಸುಪ್ರೀತ್ ಮೋಂಟಡ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಸುಳ್ಯ ತಾಲೂಕಿನ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶ್ರೀಮತಿ ಪ್ರಮೀಳಾ ಟಿ. ಅವರು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ, ಹದಿಹರೆಯದ ಹೆಣ್ಣುಮಕ್ಕಳ ಆರೋಗ್ಯ ಸಮಸ್ಯೆಗಳು ಹಾಗೂ ಮುಟ್ಟಿನ ದಿನಗಳಲ್ಲಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನಮುಟ್ಟುವ ರೀತಿಯಲ್ಲಿ ಮಾಹಿತಿ ನೀಡಿ, ತರಬೇತಿ ನಡೆಸಿಕೊಟ್ಟರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ತಾಲೂಕು ಗೌಡ ಮಹಿಳಾ ಘಟಕದ ಅಧ್ಯಕ್ಷೆ ಶ್ರೀಮತಿ ವಿನುತಾ ಪಾತಿಕಲ್ಲು ಅವರು ಜೇಸಿಐ ಸಂಸ್ಥೆಯ ಇಂತಹ ಸಾಮಾಜಿಕ ಕಾಳಜಿಯ ಕಾರ್ಯಕ್ರಮಕ್ಕೆ ಪ್ರಶಂಸೆ ವ್ಯಕ್ತಪಡಿಸಿ ಶುಭ ಹಾರೈಸಿದರು.
ವೇದಿಕೆಯಲ್ಲಿ ಸಪ್ತಾಹ ನಿರ್ದೇಶಕ ವಿನೋದ್ ಮೂಡಗದ್ದೆ ಸಪ್ತಾಹದ ವರದಿ ಮಂಡಿಸಿದರು. ಗುರುಪ್ರಸಾದ್ ನಾಯಕ್ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರೆ, ಸ್ನಿಗ್ಧ ಮೋಂಟಡ್ಕ ಜೇಸಿ ವಾಣಿ ವಾಚಿಸಿದರು. ಕಾರ್ಯಕ್ರಮ ಸಂಯೋಜಕಿ ಶೋಭ ಅಶೋಕ್ ತರಬೇತಿದಾರರನ್ನು ಪರಿಚಯಿಸಿದರು. ಕಾರ್ಯದರ್ಶಿ ತಾರಾ ಚೂಂತಾರು ವಂದನಾರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಪೂರ್ವ ವಲಯಾಧ್ಯಕ್ಷ ಪಿಪಿಪಿ ಅಶೋಕ್ ಚೂಂತಾರು, ನಿಲಯ ಮೇಲ್ವಿಚಾರಕಿ ಹೇಮಲತಾ, ವಿದ್ಯಾರ್ಥಿನಿ ನಿಲಯದ ಸಿಬ್ಬಂದಿ ವರ್ಗದವರು, ಜೇಸಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
