LATEST NEWS

ಖ್ಯಾತ ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್‌ಗೆ ‘ಸಾಧಕ ರತ್ನ ಪ್ರಶಸ್ತಿ’

ಮಂಗಳೂರು: ಮಂಗಳೂರು, ಕಾಸರಗೋಡು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕರ್ನಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಜಂಟಿ ಆಶ್ರಯದಲ್ಲಿ ಸೆಪ್ಟೆಂಬರ್ 27ರ ಭಾನುವಾರದಂದು ಕೇರಳದ ಕೊಚ್ಚಿಯ ಕಲೂರ್ ಗೋಕುಲಂ ಪಾರ್ಕ್ ಕನ್ವೆನ್ಷನ್ ಸೆಂಟರ್‌ನಲ್ಲಿ ಭವ್ಯ ‘ಕೇರಳ ಕರ್ನಾಟಕ ಜಾನಪದ ಉತ್ಸವ’ ಆಯೋಜಿಸಲಾಗಿದೆ. ಈ ಸಾಂಸ್ಕೃತಿಕ ಮಹಾಸಂಗಮದಲ್ಲಿ ನಾಡಿನ ಖ್ಯಾತ ಕ್ರೀಡಾ ಅಂಕಣಕಾರ ಜಗದೀಶ್ಚಂದ್ರ ಅಂಚನ್ ಸೂಟರ್ ಪೇಟೆ ಅವರಿಗೆ ಪ್ರತಿಷ್ಠಿತ ‘ಸಾಧಕ ರತ್ನ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು.

ಜಗದೀಶ್ಚಂದ್ರ ಅಂಚನ್ ಅವರು ಕ್ರೀಡಾ ಪತ್ರಿಕೋದ್ಯಮ ಕ್ಷೇತ್ರದಲ್ಲಿ ಕಳೆದ ಮೂರು ದಶಕಗಳಿಂದ ಸಕ್ರಿಯವಾಗಿ ಗುರುತಿಸಿಕೊಂಡಿದ್ದಾರೆ. ಇವರ ವಿಶಿಷ್ಟ ಕ್ರೀಡಾ ಬರವಣಿಗೆ ಮತ್ತು ಲೇಖನಗಳು ಕ್ರೀಡಾ ಲೋಕಕ್ಕೆ ಅಪಾರ ಕೊಡುಗೆ ನೀಡಿವೆ. ಇವರ ಸುದೀರ್ಘ ಸಾಧನೆಯನ್ನು ಗುರುತಿಸಿ ಈಗಾಗಲೇ ಹಲವಾರು ಪ್ರತಿಷ್ಠಿತ ರಾಜ್ಯ ಮತ್ತು ಅಂತರ್ ರಾಜ್ಯ ಪ್ರಶಸ್ತಿಗಳು ಇವರ ಮುಡಿಗೇರಿವೆ.

ಕ್ರೀಡಾ ಬರವಣಿಗೆಗಾಗಿ ಇವರಿಗೆ 2013ರಲ್ಲಿ ‘ಮೀಡಿಯಾ ಅವಾರ್ಡ್’, 2014ರಲ್ಲಿ ‘ಸಮಾಜ ರತ್ನ’ ರಾಜ್ಯ ಪ್ರಶಸ್ತಿ, 2016ರಲ್ಲಿ ‘ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ’ ಹಾಗೂ ‘ಲಯನ್ಸ್ ರಾಜ್ಯೋತ್ಸವ ಪ್ರಶಸ್ತಿ’, 2018ರಲ್ಲಿ ‘ಗಡಿನಾಡ ರಾಜ್ಯೋತ್ಸವ ಪ್ರಶಸ್ತಿ’, 2019ರಲ್ಲಿ ‘ಜಾನಪದ ಲೋಕ ರಾಜ್ಯ ಪ್ರಶಸ್ತಿ’ ಹಾಗೂ ‘ನಮ್ಮ ಕುಡ್ಲ ಸಾಧಕ ಪ್ರಶಸ್ತಿ’ ಲಭಿಸಿದೆ.

ಅಲ್ಲದೆ, 2020ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಸಮ್ಮೇಳನದಲ್ಲಿ ‘ಕೆ.ಎ.ನೆಟ್ಟಕಲ್ಲಪ್ಪ ರಾಜ್ಯ ಪ್ರಶಸ್ತಿ’, 2021ರಲ್ಲಿ ‘ಸಿದ್ಧಗಂಗಾಶ್ರೀ ರಾಜ್ಯ ಪ್ರಶಸ್ತಿ’, 2022ರಲ್ಲಿ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಕಾಸರಗೋಡು ಘಟಕದಿಂದ ‘ಕೆ.ಆರ್.ಟ್ಯಾಗೋರ್ ದತ್ತಿ ನಿಧಿ ಪ್ರಶಸ್ತಿ’, 2023ರಲ್ಲಿ ‘ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಪುರಸ್ಕಾರ’ ಮತ್ತು ‘ಸಾಧನಾ ಪ್ರಶಸ್ತಿ’, 2024ರಲ್ಲಿ ‘ಕರ್ನಾಟಕ ಕಲಾಶ್ರೀ ಪ್ರಶಸ್ತಿ’ ಹಾಗೂ 2026ರಲ್ಲಿ ‘ಜಾನಪದ ರತ್ನ ಪ್ರಶಸ್ತಿ’, ಅಂತರ್ ರಾಜ್ಯ ಮಟ್ಟದ ‘ಕನ್ನಡ ಪಯಸ್ವಿನಿ ಅವಾರ್ಡ್’ ಮತ್ತು ‘ಬಸವಶ್ರೀ ಪ್ರಶಸ್ತಿ’ಗಳು ಇವರಿಗೆ ಸಂದಿವೆ.

ಪ್ರಸ್ತುತ ಕರಾವಳಿ ಹಾಗೂ ಗಡಿನಾಡಿನ ಕೀರ್ತಿಯನ್ನು ಹೆಚ್ಚಿಸಿರುವ ಇವರಿಗೆ ಕೊಚ್ಚಿಯ ಜಾನಪದ ಉತ್ಸವದಲ್ಲಿ ‘ಸಾಧಕ ರತ್ನ ಪ್ರಶಸ್ತಿ’ ನೀಡಿ ಗೌರವಿಸುತ್ತಿರುವುದು ಸಾಂಸ್ಕೃತಿಕ ಮತ್ತು ಕ್ರೀಡಾ ವಲಯದಲ್ಲಿ ಸಂತಸ ಮೂಡಿಸಿದೆ ಎಂದು ಆಯೋಜಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share News