ಮಂಗಳೂರು, ಮಾರ್ಚ್ 31:ದೇರಳಕಟ್ಟೆಯ ಪ್ರದೇಶದಲ್ಲಿ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳು ನೀಡುತ್ತಿರುವ ಸೇವೆಗಳ ಮಹತ್ವದ ವಿಸ್ತರಣೆಯಾಗಿ, ಹೊಸ ವಾಣಿಜ್ಯ ಗುರುತಾದ “ಫಾದರ್ ಮುಲ್ಲರ್ ಕಾಂಪ್ಲೆಕ್ಸ್ ವಾಣಿಜ್ಯ ಸಂಕೀರ್ಣವನ್ನು ಇಂದು ಅಧಿಕೃತವಾಗಿ ಉದ್ಘಾಟಿಸಲಾಯಿತು.

ಉದ್ಘಾಟನೆ ಮತ್ತು ಆಶೀರ್ವಾದವನ್ನು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ಅಧ್ಯಕ್ಷರಾದ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ಮಾನ್ಹಾ ಅವರು ನೆರವೇರಿಸಿದರು. ಪ್ರಾರ್ಥನಾ ಸೇವೆಯ ವೇಳೆ, ಬಿಷಪ್ ಅವರು ದೇವರ ವಾಕ್ಯವನ್ನು ಚಿಂತನೆಗೈದು, ಈ ಹೊಸ ಕಟ್ಟಡವನ್ನು ದೇವರಿಗೆ ಸಮರ್ಪಿಸಿ, ನಮಗೆ ದೊರೆತ ಪ್ರತಿಭೆಗಳು ಮತ್ತು ಕೃಪೆಯನ್ನು ಹೆಚ್ಚಿಸುವ ಸಾಧನವಾಗಿರಲಿ ಎಂದು ಒತ್ತಿಹೇಳಿದರು.

ಫಾದರ್ ಮುಲ್ಲರ್ ಚಾರಿಟೇಬಲ್ ಸಂಸ್ಥೆಗಳ ನಿರ್ದೇಶಕರಾದ ವಂದನೀಯ ಫಾದರ್ ಫೌಸ್ಟಿನ್ ಲುಕಾಸ್ ಲೋಬೊ ಅವರು ತಮ್ಮ ಸ್ವಾಗತ ಭಾಷಣದಲ್ಲಿ ಈ ಹೊಸ ಫಾದರ್ ಮುಲ್ಲರ್ ಕಾಂಪ್ಲೆಕ್ಸ್ ಸಮಾಜಕ್ಕೆ ಕರುಣೆಯ ಸೇವೆಯ ಬೆಳಕಾಗಿ ನಿಂತು, ತನ್ನ ಧೈಯದ ಮೂಲಕ ದೇವರನ್ನು ಮಹಿಮೆಪಡಿಸುವುದಾಗಿ ಹೇಳಿದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಕರ್ನಾಟಕ ವಿಧಾನಸಭೆಯ ಮಾನ್ಯ ಸಭಾಧ್ಯಕ್ಷರಾದ ಶ್ರೀ ಯು.ಟಿ. ಖಾದರ್ ಅವರು ತಮ್ಮ ಭಾಷಣದಲ್ಲಿ ಆರ್ಥಿಕವಾಗಿ ಹಿಂದುಳಿದ ವ್ಯಾಪಾರಿಗಳಿಗೆ ಜೀವನೋಪಾಯದ ಅವಕಾಶಗಳನ್ನು ಸೃಷ್ಟಿಸಿರುವುದಕ್ಕೆ ಪ್ರಶಂಸಿಸಿದರು. ಸಮಾಜದಲ್ಲಿ ಏಕತೆ ಮತ್ತು ಸಹಕಾರದ ಮನೋಭಾವ ಅಗತ್ಯವಿದೆ ಎಂದು ಅವರು ಒತ್ತಿಹೇಳಿ, ಮುಂದಿನ ಪೀಳಿಗೆಗೆ ಉತ್ತಮ ಭವಿಷ್ಯವನ್ನು ರೂಪಿಸುವುದಕ್ಕೆ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೊಟೇಕಾರ್ ಪಟ್ಟಣ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ದಿವ್ಯ ಸತೀಶ್ ಶೆಟ್ಟಿ ಅವರು ಗಣ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ತಮ್ಮ ಸಂದೇಶದಲ್ಲಿ ಸಂಸ್ಥೆಯನ್ನು ಅಭಿನಂದಿಸಿ, ಸಮಾಜ ಸೇವೆಯಲ್ಲಿ ಯಾವಾಗಲು ಕೋರಿಕೆಯಾದಾಗ ಮುಂದೆ ಬಂದು ಸೇವೆ ಸಲ್ಲಿಸಿರುವುದಕ್ಕಾಗಿ ಕೃತಜ್ಞತೆಯನ್ನು ವ್ಯಕ್ತಪಡಿಸಿದರು.

ಕಟ್ಟಡದ ನಿರ್ಮಾಣದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಕೊಡುಗೆ ನೀಡಿದ ಎಲ್ಲಾ ವ್ಯಕ್ತಿಗಳನ್ನು ಅವರ ಪರಿಶ್ರಮಕ್ಕೆ ಗೌರವ ಸೂಚಕವಾಗಿ ಸನ್ಮಾನಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅತಿ ವಂದನೀಯ ಡಾ. ಪೀಟರ್ ಪಾಲ್ ಸಲ್ವಾನ್ಹಾ ಅವರು ತಮ್ಮ ಸಮಾಪನ ಸಂದೇಶದಲ್ಲಿ ಮಾನವ ದೇಹದಲ್ಲಿನ ವಿಭಿನ್ನ ಅಂಗಗಳು ತಮ್ಮದೇ ಆದ ಕಾರ್ಯಗಳನ್ನು ನಿರ್ವಹಿಸುವಂತೆ, ಸಮಾಜದಲ್ಲಿನ ನಾಯಕರಿಗೂ ಸಮಾಜದ ಒಳಿತಿಗಾಗಿ ವಿಭಿನ್ನ ಪಾತ್ರಗಳು ಇವೆ ಎಂದು ಒತ್ತಿಹೇಳಿದರು.

ಫಾದರ್ ಮುಲ್ಲರ್ ಹೋಮಿಯೋಪಥಿಕ್ ಮೆಡಿಕಲ್ ಕಾಲೇಜಿನ ಆಡಳಿತಾಧಿಕಾರಿಯಾದ ವಂದನೀಯ ಫಾದರ್ ಡೊನಾಲ್ಡ್ ನಿಲೇಶ್ ಕ್ರಾಸ್ತಾ ಅವರು ವಂದನಾ ಮಾತುಗಳನ್ನು ಅರ್ಪಿಸಿ, ದೇವರಿಗೆ ಹಾಗೂ ತಮ್ಮ ಬ್ಯುಸಿ ವೇಳಾಪಟ್ಟಿಯ ನಡುವೆಯೂ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿದ ಎಲ್ಲರಿಗೂ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರು. ಜೊತೆಗೆ, ಈ ಹೊಸ ಕಟ್ಟಡದ ನಿರ್ಮಾಣದಲ್ಲಿ ಶ್ರಮಿಸಿದ ಪ್ರತಿಯೊಬ್ಬರ ಸಮರ್ಪಿತ ಪ್ರಯತ್ನಗಳನ್ನು ಹೃತ್ತೂರ್ವಕವಾಗಿ ಕೊಂಡಾಡಿದರು.

ಸಹ ಸಂಸ್ಥೆಯ ಆಡಳಿತ ವರ್ಗವೂ ಕಾರ್ಯಕ್ರಮದಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದು,ಆಡಳಿತಾಧಿಕಾರಿಗಳಾ ದ ವಂದನೀಯ ಫಾದರ್ ಅಶ್ವಿನ್ ಲಾರೆನ್ಸ್ ಕ್ರಾಸ್ತಾ ಹಾಗೂ ಫಾದರ್ ಮುಲ್ಲರ್ ಹೋಮಿಯೋಪಥಿಕ್ ಫಾರ್ಮಾಸ್ಯುಟಿಕಲ್ ವಿಭಾಗದ ಆಡಳಿತಾಧಿಕಾರಿ ಗಳಾದ ವಂದನೀಯ ಫಾದರ್ ನೆಲ್ಸನ್ ಧೀರಜ್ ಪಾಯಾಸ್ ಉಪಸ್ಥಿತರಿದ್ದರು.

ಶ್ರೀ ಶೋಹಾದ್ ಅವರು ಕಾರ್ಯಕ್ರಮವನ್ನು ಪರಿಣಾಮಕಾರಿಯಾಗಿ ನಿರ್ವಹಿಸಿ, ಮಾಸ್ಟರ್ ಆಫ್ ಸೆರಿಮನಿ (MC) ಆಗಿ ಸೇವೆ ಸಲ್ಲಿಸಿದರು.

ಹೊಸದಾಗಿ ಉದ್ಘಾಟಿಸಲಾದ ಈ ಕಾಂಪ್ಲೆಕ್ಸ್ ದೇರಳಕಟ್ಟೆಯಲ್ಲಿ ಸಮುದಾಯ ಆಧಾರಿತ ಸೇವೆಗಳನ್ನು ವಿಸ್ತರಿಸಲು ರೂಪಿಸಲಾದ ಮಹತ್ವದ ಯೋಜನೆಯಾಗಿದ್ದು, ಆರೋಗ್ಯ ಸೇವೆ ಮತ್ತು ಸಮಾಜಮುಖಿ ಚಟುವಟಿಕೆಗಳಲ್ಲಿ ಸಂಸ್ಥೆಯ ದೀರ್ಘಕಾಲದ ಪರಂಪರೆಯನ್ನು ಮತ್ತಷ್ಟು ಬಲಪಡಿಸುವ ಉದ್ದೇಶ ಹೊಂದಿದೆ ವ್ಯಕ್ತಪಡಿಸಿದರು.









