ಮಂಗಳೂರು, ಜುಲೈ 16: ಮಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ 19 ಬಾಂಗ್ಲಾ ಪ್ರಜೆಗಳ ಬಂಧನವಾಗಿದ್ದು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ನೇತೃತ್ವದ ಪೊಲೀಸ್ ಇಲಾಖೆಗೆ ಸಮಸ್ತ ಸಾರ್ವಜನಿಕರ ಪರವಾಗಿ ಅಭಿನಂದನೆಗಳು. ಇದು ಸಂಪೂರ್ಣವಾಗಿ ಪೊಲೀಸ್ ಇಲಾಖೆಯ ಕಾರ್ಯಾಚರಣೆಯಾಗಿದ್ದು, ಎಳ್ಳಷ್ಟೂ ರಾಜ್ಯ ಕಾಂಗ್ರೆಸ್ ಸರ್ಕಾರದ ಪಾತ್ರವಿಲ್ಲ ಎಂದು ಶಾಸಕ ವೇದವ್ಯಾಸ ಕಾಮತ್ ರವರು ಹೇಳಿದರು.


ರಾಜ್ಯದಲ್ಲಿ ಎಸ್ಐಆರ್ ಪ್ರಕ್ರಿಯೆ ನಡೆಯುತ್ತಿದ್ದು, ಕಾಂಗ್ರೆಸ್ ಸರ್ಕಾರ ಜಾರಿಗೆ ತಂದಿರುವ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್‌ಸಿ) ಅಕ್ರಮ ವಲಸಿಗರಿಗೆ ವರದಾನವಾಗಿ ಅಧಿಕೃತವಾಗಿ ಮತದಾರರ ಪಟ್ಟಿಗೆ ಸೇರಿಕೊಳ್ಳುವ ಸಾಧ್ಯತೆ ದಟ್ಟವಾಗಿದೆ. ಕೇವಲ ವೋಟ್ ಬ್ಯಾಂಕ್ ರಾಜಕಾರಣಕ್ಕಾಗಿ ದೇಶದ ಭದ್ರತೆಯನ್ನೂ ಅಡವಿಡುವ ಮಟ್ಟಕ್ಕೆ ಕಾಂಗ್ರೆಸ್ ತಲುಪಿದೆ. ಭವಿಷ್ಯದಲ್ಲಿ ಅವರಿಂದ ಏನೇ ಅನಾಹುತ ನಡೆದರೂ ಈ ಕಾಂಗ್ರೆಸ್ ಸರಕಾರವೇ ನೇರ ಹೊಣೆ ಹೊರಬೇಕಾಗುತ್ತದೆ. ಕೂಡಲೇ ಎಷ್ಟು ಅಕ್ರಮ ವಲಸಿಗರು ಪಿ.ಆರ್.ಸಿ ಪಡೆದುಕೊಂಡಿದ್ದಾರೆ ಎಂಬುದರ ಬಗ್ಗೆ ತನಿಖೆಯಾಗಲಿ. ಗೃಹ ಸಚಿವರಂತೂ ಆರ್.ಎಸ್.ಎಸ್ ನಂತಹ ದೇಶಭಕ್ತ ಸಂಘಟನೆ ನೋಂದಣಿ ಮಾಡಿಕೊಂಡಿಲ್ಲ, ಅದರ ಪಥಸಂಚಲನಕ್ಕೆ ಅವಕಾಶ ಕೊಡುವುದಿಲ್ಲ, ಎಂಬ ಮನಸ್ಥಿತಿಯಲ್ಲೇ ಮುಳುಗಿರುವುದು ನಾಡಿನ ದೌರ್ಭಾಗ್ಯ ಎಂದರು.
ಕಾಂಗ್ರೆಸ್ ಸರ್ಕಾರಕ್ಕೆ ಇದರ ಗಂಭೀರತೆಯ ಅರಿವಿದ್ದರೆ ಈ ಕೂಡಲೇ ರಾಜ್ಯಾದ್ಯಂತ ಅಕ್ರಮ ಬಾಂಗ್ಲಾ ಪ್ರಜೆಗಳನ್ನು ಪತ್ತೆ ಹಚ್ಚಿ ಹೊರದಬ್ಬುವ ತಾಕತ್ತು ಪ್ರದರ್ಶಿಸಲಿ. ಮಂಗಳೂರಿನಲ್ಲಿ ಅಕ್ರಮ ವಲಸಿಗರು ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನೆಲೆಸಿರುವ ಸಾಧ್ಯತೆಯಿದ್ದು, ಇದು ನಮ್ಮ ಜಿಲ್ಲೆಯ ಭದ್ರತೆಗೆ ಸವಾಲಾಗಿದೆ. ಹಾಗಾಗಿ ನಗರದೆಲ್ಲೆಡೆ ಇರುವ ಬಿಲ್ಡರ್‌ಗಳು, ಕಟ್ಟಡ ನಿರ್ಮಾಣ ಗುತ್ತಿಗೆದಾರರು, ಹೋಟೆಲ್ ಗಳು, ಸಲೂನ್, ಶಾಪಿಂಗ್ ಮಾಲ್ ಸಹಿತ ಸಾರ್ವಜನಿಕರು ಎಚ್ಚರಿಕೆಯಿಂದ ಇದ್ದು, ಉದ್ಯೋಗ ನೀಡುವ ವೇಳೆ ಹೆಚ್ಚಿನ ದಾಖಲೆಗಳನ್ನು ಪಡೆದುಕೊಳ್ಳುವಂತೆ ಹಾಗೂ ಅನುಮಾನಾಸ್ಪದ ಸಂದರ್ಭಗಳಲ್ಲಿ ಪೊಲೀಸ್ ಇಲಾಖೆಯೊಂದಿಗೆ ಸಹಕರಿಸಿ ಎಂದು ಶಾಸಕರು ಮನವಿ ಮಾಡಿದರು.


