DAKSHINA KANNADALATEST NEWS

ಹುಲಿವೇಷದ ರಂಗಿನಲ್ಲಿ ಶಾಸಕ ಐವನ್ ಡಿಸೋಜ: ತಾಸೆಯ ಸದ್ದಿಗೆ ಪಕ್ಕಾ ಕರಾವಳಿ ಶೈಲಿ ಹೆಜ್ಜೆ!

ಮಂಗಳೂರು: ಕರಾವಳಿಯ ಹೆಮ್ಮೆಯ ಸಾಂಸ್ಕೃತಿಕ ಕಲೆಯಾದ ಹುಲಿವೇಷದ (ಪಿಲಿವೇಷ) ವೈಭವಕ್ಕೆ ವಿಧಾನ ಪರಿಷತ್ ಶಾಸಕರು ಸಾಕ್ಷಿಯಾದರು. ಬಾಬುಗುಡ್ಡೆಯ ಗ್ರಾಮ ಸೇವಾ ಸಂಘದಲ್ಲಿ “ನಂದಿಗುಡ್ಡ ಫ್ರೆಂಡ್ಸ್” ವತಿಯಿಂದ ಆಯೋಜಿಸಲಾಗಿದ್ದ ಹುಲಿವೇಷದ ಊದು ಪೂಜೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಶಾಸಕರಾದ ಶ್ರೀ ಐವಾನ್ ಡಿ’ಸೋಜ ಅವರು ಭಾಗವಹಿಸಿ, ಕಾರ್ಯಕ್ರಮಕ್ಕೆ ವಿಶೇಷ ಕಳೆ ನೀಡಿದರು.

ಕಾರ್ಯಕ್ರಮದಲ್ಲಿ ಹುಲಿಪಡೆಯ ಆರ್ಭಟದ ಚಂಡೆ ಹಾಗೂ ತಾಸೆಯ ಜುಗಲ್‌ಬಂದಿ ಸದ್ದಿಗೆ ಮನಸೋತ ಶಾಸಕರು, ತಾವೂ ಕೂಡ ಹುಲಿವೇಷಧಾರಿ ಗಳೊಂದಿಗೆ ಪಕ್ಕಾ ಕರಾವಳಿ ಶೈಲಿಯಲ್ಲಿ ಹೆಜ್ಜೆ ಹಾಕಿದರು. ಶಾಸಕರ ಈ ಉತ್ಸಾಹಭರಿತ ನೃತ್ಯವು ನೆರೆದಿದ್ದ ನೂರಾರು ಕಲಾಭಿಮಾನಿಗಳ ಮತ್ತು ಸಾರ್ವಜನಿಕರ ಆಕರ್ಷಣೆಯ ಕೇಂದ್ರಬಿಂದುವಾಗಿತ್ತು.

“ನಮ್ಮ ಕರಾವಳಿಯ ಕಲೆ ನಮ್ಮ ಹೆಮ್ಮೆ” ಎಂಬ ಸಂಸ್ಕೃತಿಯನ್ನು ಎತ್ತಿಹಿಡಿಯುವ ಇಂತಹ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ಯುವ ಪೀಳಿಗೆಯಲ್ಲಿ ಕಲೆಯ ಮೇಲಿನ ಗೌರವವನ್ನು ಹೆಚ್ಚಿಸುತ್ತವೆ ಎಂದು ಈ ಸಂದರ್ಭದಲ್ಲಿ ಶಾಸಕರು ಶ್ಲಾಘಿಸಿದರು. ಕಾರ್ಯಕ್ರಮದಲ್ಲಿ ನಂದಿಗುಡ್ಡ ಫ್ರೆಂಡ್ಸ್ ಪದಾಧಿಕಾರಿಗಳು, ಸ್ಥಳೀಯ ಗಣ್ಯರು ಹಾಗೂ ನೂರಾರು ಭಕ್ತಾದಿಗಳು ಪಾಲ್ಗೊಂಡಿದ್ದರು.

Share News