ಮಂಗಳೂರು: ಗರ್ಭಕಂಠದ ಕ್ಯಾನ್ಸರ್ ನಮ್ಮ ದೇಶದಲ್ಲಿ ಮಾತ್ರವಲ್ಲದೆ ಜಾಗತಿಕವಾಗಿಯೂ ಸಾರ್ವಜನಿಕ ಆರೋಗ್ಯದ ಒಂದು ಮಹತ್ವಪೂರ್ಣ ಕಾಳಜಿಯಾಗಿದೆ. ಇದು ಹೂಮನ್ ಪ್ಯಾಪಿಲೋಮಾ ವೈರಸ್ (HPV) ನಿಂದ ಉಂಟಾಗುತ್ತದೆ. ಗರ್ಭಕಂಠದ ಕ್ಯಾನ್ಸರ್ ಲಸಿಕೆಯಿಂದ ತಡೆಯಬಹುದಾದ ಏಕೈಕ ಕ್ಯಾನ್ಸರ್ ಇದಾಗಿದೆ.

ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವ ಉದ್ದೇಶದಿಂದ ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯವು ರಾಷ್ಟ್ರಮಟ್ಟದಲ್ಲಿ ದಿನಾಂಕ: 28ನೇ ಫೆಬ್ರವರಿ 2026 ರಂದು 14 ವರ್ಷ ವಯಸ್ಸಿನ (14 ವರ್ಷ ಪೂರ್ಣಗೊಂಡು 15 ವರ್ಷ ಪೂರ್ಣವಾಗದ) ಹೆಣ್ಣುಮಕ್ಕಳಿಗೆ HPV ಲಸಿಕಾ ಅಭಿಯಾನವನ್ನು ಪ್ರಾರಂಭಿಸಿದ್ದು, ಅದೇ ದಿನದಂದು ಕರ್ನಾಟಕದಲ್ಲೂ HPV ಲಸಿಕೆ ನೀಡುವ ಮೂಲಕ ಪ್ರಾರಂಭಿಸಿ 3 ತಿಂಗಳ ಅಭಿಯಾನವನ್ನು ಅನುಷ್ಠಾನಗೊಳಿಸಲು ಕ್ರಮವಹಿಸಲಾಗಿದೆ.
ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಯಂತೆ ಕರ್ನಾಟಕ ರಾಜ್ಯಕ್ಕೆ 2.54 ಲಕ್ಷ ಡೋಸ್‌ಗಳ HPV ಲಸಿಕೆಯು ಉಚಿತವಾಗಿ ಸರಬರಾಜಾಗಿದ್ದು, ಎಲ್ಲಾ ಜಿಲ್ಲೆಗಳಿಗೆ ರವಾನಿಸಲಾಗಿದೆ. ಎಲ್ಲಾ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ 3 ತಿಂಗಳ ಅವಧಿಯಲ್ಲಿ HPV ಲಸಿಕಾ ಅಭಿಯಾನವನ್ನು ಮಾರ್ಚ್ 2026 ರಿಂದ ಮೇ 2026 ರವರಗೆ ಹಮ್ಮಿಕೊಳ್ಳಲಾಗಿದೆ.
ಮುಂದುವರೆದು, ಈ ಅಭಿಯಾನದಡಿ ದೇಶಾದ್ಯಂತ 14 ವರ್ಷ ವಯಸ್ಸಿನ ಎಲ್ಲಾ ಅರ್ಹ ಹೆಣ್ಣುಮಕ್ಕಳಿಗೆ ಸರ್ಕಾರಿ ಆರೋಗ್ಯ ಸೌಲಭ್ಯಗಳಾದ (ಪ್ರಾಥಮಿಕ ಆರೋಗ್ಯ ಕೇಂದ್ರಗಳು, ಸಮುದಾಯ ಆರೋಗ್ಯ ಕೇಂದ್ರಗಳು, ಜಿಲ್ಲಾ/ತಾಲ್ಲೂಕು ಆಸ್ಪತ್ರೆಗಳು ಮತ್ತು ಸರ್ಕಾರಿ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳು) ಗಳಲ್ಲಿ ಒಂದೇ ಡೋಸ್ ಗಾರ್ಡಸಿಲ್-4 HPV ಲಸಿಕೆಯನ್ನು ಉಚಿತವಾಗಿ ನೀಡಲಾಗುತ್ತದೆ. ಈ ಆರೋಗ್ಯ ಸೌಲಭ್ಯಗಳು ಕೋಲ್ಡ್ ಚೈನ್ ಪಾಯಿಂಟ್ (CCP) ಆಗಿದ್ದು ಮತ್ತು AEFI ನಿರ್ವಹಣೆಗಾಗಿ ಮೀಸಲಾದ ವೈದ್ಯಾಧಿಕಾರಿಯನ್ನು ಹೊಂದಿರುತ್ತವೆ. HPV ಲಸಿಕೆ ಸ್ವಯಂಪ್ರೇರಿತವಾಗಿದೆ ಮತ್ತು ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಮೊದಲು ಪೋಷಕರು/ಪಾಲಕರಿಂದ ಒಪ್ಪಿಗೆಯನ್ನು ಪಡೆಯುವುದು ಕಡ್ಡಾಯವಾಗಿರುತ್ತದೆ. ಅರ್ಹ ಎಲ್ಲಾ ಹೆಣ್ಣುಮಕ್ಕಳಿಗೂ ಲಸಿಕೆ ದೊರಕುವಂತೆ, ಲಸಿಕಾ ಅಭಿಯಾನವನ್ನು ಮೂರು ತಿಂಗಳ ಅವಧಿಯಲ್ಲಿ ಪ್ರತಿದಿನ ಲಭ್ಯವಿರುವಂತೆ ನಡೆಸಲು ಸೂಚಿಸಲಾಗಿದೆ. HPV ಲಸಿಕಾ ಅಭಿಯಾನದ ಸಮರ್ಪಕ ಅನುಷ್ಠಾನಕ್ಕಾಗಿ ಎಲ್ಲಾ ಜಿಲ್ಲೆಗಳ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿಗೆ ರಾಜ್ಯ ಮಟ್ಟದಿಂದ ಈಗಾಗಲೇ ಅಗತ್ಯ ತರಬೇತಿಯನ್ನು ನೀಡಲಾಗಿದೆ. ಭಾರತ ಸರ್ಕಾರದಿಂದ ಪೂರೈಸಲಾಗುವ ಲಸಿಕೆ ಡೋಸ್‌ಗಳ ಪ್ರಮಾಣದನ್ವಯ ಜಿಲ್ಲೆಗಳಿಗೆ ಲಸಿಕೆಗಳನ್ನು ಪೂರೈಸಲಾಗಿದೆ.
ಎಲ್ಲಾ ಜಿಲ್ಲೆಗಳಲ್ಲಿ HPV ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಇತರೆ ಇಲಾಖೆಗಳ ಸಹಕಾರ ಅತ್ಯಗತ್ಯವಾಗಿದ್ದು, ತಮ್ಮ ಅಧ್ಯಕ್ಷತೆಯಲ್ಲಿ ಜಿಲ್ಲಾ ಲಸಿಕಾ ಟಾಸ್ಕ್ ಫೋರ್ಸ್ ಸಭೆ ಆಯೋಜಿಸಿ ಆಯಾ ಇಲಾಖೆಗಳಿಗೆ ಸೂಕ್ತ ಸೂಚನೆ ನೀಡಲು ಕೋರಲಾಗಿದೆ.
2022 ರಲ್ಲಿ, ಗರ್ಭಕಂಠದ ಕ್ಯಾನ್ಸರ್ ನಿಂದಾಗಿ ಅಂದಾಜು 79,103 ಹೊಸ ಪ್ರಕರಣಗಳು ಮತ್ತು 34,805 ಸಾವುಗಳು. (ຍ: NPCR-ICMR, 2022)
ಗರ್ಭಕಂಠದ ಕ್ಯಾನ್ಸರ್‌ನ ವಯಸ್ಸಿನ-ಪ್ರಮಾಣೀಕೃತ ಅಂದಾಜುಗಳು (2022) ಹೀಗಿವೆ:
ಘಟನೆಗಳು: 1,00,000 ಮಹಿಳೆಯರಿಗೆ ವರ್ಷಕ್ಕೆ 11.6
ಮರಣ ಪ್ರಮಾಣ: 1,00,000 ಮಹಿಳೆಯರಿಗೆ ವರ್ಷಕ್ಕೆ 5.1