DAKSHINA KANNADAHOMELATEST NEWS

ಆ.9ರಂದು ಕದ್ರಿ ಬಂಜನ್‌ ಮೂಲ ಕ್ಷೇತ್ರದಲ್ಲಿ ನಿವೃತ್ತ ವೀರ ಯೋಧರು, ವೀರ ನಾರಿಯರಿಗೆ ಗೌರವ

ಮಂಗಳೂರು: ದೇಶದ ರಕ್ಷಣೆಗಾಗಿ ಸೇವೆ ಸಲ್ಲಿಸಿದ ಕುಲಾಲ ಸಮುದಾಯದ ನಿವೃತ್ತ ವೀರ ಯೋಧರು ಹಾಗೂ ವೀರ ನಾರಿಯರನ್ನು ಗೌರವಿಸುವ ವಿಶೇಷ ಸಮಾರಂಭವು ಆಗಸ್ಟ್ 9ರಂದು ಕದ್ರಿ ಬಂಜನ್ ಚಾವಡಿಯಲ್ಲಿ ನಡೆಯಲಿದೆ.

ಕದ್ರಿ ಬಂಜನ್ ಆದಿ ಮೂಲಸ್ಥಾನ ಶ್ರೀ ನಾಗಬ್ರಹ್ಮ ಕ್ಷೇತ್ರ (ರಿ.) ವತಿಯಿಂದ ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾಸರಗೋಡು ಜಿಲ್ಲೆಗಳ ಕುಲಾಲ ಸಮುದಾಯಕ್ಕೆ ಸೇರಿದ 60ಕ್ಕೂ ಅಧಿಕ ನಿವೃತ್ತ ವೀರ ಯೋಧರು ಹಾಗೂ ವೀರ ನಾರಿಯರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು.

ಆಗಸ್ಟ್ 9ರ ಭಾನುವಾರ ಬೆಳಿಗ್ಗೆ 11.30ಕ್ಕೆ ಕಾರ್ಯಕ್ರಮ ನಡೆಯಲಿದ್ದು, ದೇಶದ ರಕ್ಷಣೆಗೆ ತಮ್ಮ ಜೀವನವನ್ನು ಸಮರ್ಪಿಸಿದ ಸಮಾಜದ ಯೋಧರನ್ನು ಗುರುತಿಸಿ ಗೌರವಿಸುವುದು ಹಾಗೂ ಕ್ಷೇತ್ರದ ನಾಗದೇವರು ಮತ್ತು ದೈವ-ದೇವರ ಅನುಗ್ರಹವನ್ನು ಅವರಿಗೆ ಪ್ರಾರ್ಥಿಸುವುದು ಕಾರ್ಯಕ್ರಮದ ಪ್ರಮುಖ ಉದ್ದೇಶವಾಗಿದೆ.

ಕಾರ್ಯಕ್ರಮಕ್ಕೆ ಬೆಂಗಳೂರಿನ ರಾಧಾಕೃಷ್ಣ ಬಂಜನ್ ಮಹಾ ಪ್ರಾಯೋಜಕರಾಗಿದ್ದಾರೆ. ಮೈಸೂರಿನ ‘ಹಿಲ್ ಸೈಡ್ ಆರ್ಕಿಟೆಕ್ಟ್’ ವಿನ್ಯಾಸಕರು ಕಾರ್ಯಕ್ರಮಕ್ಕೆ ಸಹಕಾರ ನೀಡುತ್ತಿದ್ದಾರೆ.

ಪ್ರಧಾನ ಅತಿಥಿಗಳಾಗಿ ನಿವೃತ್ತ ಬಿಎಸ್‌ಎಫ್ ಕಮಾಂಡೆಂಟ್ ಹಾಗೂ ಕರ್ನಾಟಕ ರಾಜ್ಯ ನಿವೃತ್ತ ಯೋಧರ ಕ್ಷೇಮಾಭಿವೃದ್ಧಿ ಸಂಘದ (ರಿ.) ಬೆಂಗಳೂರು ಅಧ್ಯಕ್ಷ  ಡಿ. ಚಂದಪ್ಪ ಮೂಲ್ಯ,  ವೀರನಾರಾಯಣ ದೇವಸ್ಥಾನ ಕುಲಶೇಖರದ ಅಧ್ಯಕ್ಷ  ಸುಂದರ್ ಮೂಲ್ಯ, ಬ್ರಾಹ್ಮಕಲಸ ಸಮಿತಿ,  ವೀರನಾರಾಯಣ ದೇವಸ್ಥಾನ ಕುಲಶೇಖರದ ಅಧ್ಯಕ್ಷ  ಪ್ರೇಮಾನಂದ ಕುಲಾಲ್ ಹಾಗೂ ನಿವೃತ್ತ ಡಿಜಿಎಂ, ಬಿಎಸ್‌ಎನ್‌ಎಲ್  ಐತಪ್ಪ ಮೂಲ್ಯ ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಪ್ರಧಾನ ಸಂಘಟಕ ಯತೀಶ್ ಕುಮಾರ್ ಮಾತನಾಡಿ, ದೇಶದ ಸೇವೆಯಲ್ಲಿ ತಮ್ಮ ಅಮೂಲ್ಯ ಕೊಡುಗೆ ನೀಡಿದ ಸಮುದಾಯದ ನಿವೃತ್ತ ಯೋಧರು ಹಾಗೂ ವೀರ ನಾರಿಯರನ್ನು ಗೌರವಿಸುವುದು ನಮ್ಮೆಲ್ಲರ ಹೆಮ್ಮೆಯ ಸಂಗತಿ. ಅವರ ಸೇವೆಯನ್ನು ಸ್ಮರಿಸಿ ಗೌರವಿಸುವುದರೊಂದಿಗೆ, ಮುಂದಿನ ಪೀಳಿಗೆಗೆ ದೇಶ ಸೇವೆಯ ಪ್ರೇರಣೆ ನೀಡುವುದು ಕಾರ್ಯಕ್ರಮದ ಆಶಯವಾಗಿದೆ ಎಂದು ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಮಾಜಿ ನಾಯಬ್‌ಗಳಾದ ಮೋಹನ್ ಕಡಂಬಾರ ಹಾಗೂ ಗೋಪಾಲ್ ಎನ್. ಕುಲಾಲ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Share News