ಮಂಗಳೂರು: ಕ್ರಿಶ್ಚಿಯನ್‌ರು ಇಂದು ವಿಶ್ವದಾದ್ಯಂತ ಪವಿತ್ರ ಗುರುವಾರವನ್ನು ಆಚರಿಸಿ, ಯೇಸು ಕ್ರಿಸ್ತರ ಕೊನೆಯ ಭೋಜನದ ದಿನವನ್ನು ಸ್ಮರಿಸಿದರು. ಅದೇ ರೀತಿ ಕರಾವಳಿಯ ಎಲ್ಲಾ ಚರ್ಚುಗಳಲ್ಲಿ ಗುರುವಾರ ಸಂಜೆ ವಿಶೇಷ ಬಲಿಪೂಜೆ ಮತ್ತು ಪ್ರಾರ್ಥನೆಗಳು ನಡೆದವು.
ಮಂಗಳೂರಿನ ರೊಸಾರೀಯೋ ಚರ್ಚ್‌ನಲ್ಲಿ ಯೇಸುಕ್ರಿಸ್ತ ತನ್ನ12 ಶಿಷ್ಯರ ಪಾದ ತೊಳೆದ ಸಂಕೇತವನ್ನು ನೆರವೇರಿಸಿದ ಬಿಷಪ್ ಅ. ವಂ.ಪೀಟರ್ ಪಾವ್ಲ್ ಸಲ್ಡಾನ
ನಗರದ ರೊಸಾರಿಯೋ ಚರ್ಚ್‌ನಲ್ಲಿ ಧರ್ಮಾಧ್ಯಕ್ಷ ಮಂಗಳೂರು ಬಿಷಪ್ ಅ. ವಂ.ಪೀಟರ್ ಪಾವ್ಲ್ ಸಲ್ಡಾನ, ಬಲಿಪೂಜೆ ನೆರವೇರಿಸಿದರು. ಇದೇ ವೇಳೆ ಯೇಸು ಕ್ರಿಸ್ತರು ತಮ್ಮ ಕೊನೆಯ ಭೋಜನದ ಸಂದರ್ಭದಲ್ಲಿ 12 ಶಿಷ್ಯರ ಪಾದ ತೊಳೆದು ಸೇವೆಯ ಸಂಸ್ಕಾರವನ್ನು ಪ್ರತಿಪಾದಿಸಿದ್ದು, ಅದರ ಸಂಕೇತವಾಗಿ ಬಿಷಪರು ಮತ್ತು ಇತರ ಚರ್ಚ್‌ಗಳಲ್ಲಿ ಸ್ಥಳೀಯ ಧರ್ಮಗುರುಗಳು, 12 ಕ್ರೈಸ್ತರ ಪಾದಗಳನ್ನು ತೊಳೆದರು.
ನಂತರ ನಡೆದ ಪ್ರವಚನದಲ್ಲಿ‘ಏಸುಕ್ರಿಸ್ತರು ತಮ್ಮ ಜೀವನದುದ್ದಕ್ಕೂ ಪರರ ಸೇವೆ ಹಾಗೂ ಕಷ್ಟ ಕಾರ್ಪಣ್ಯದಲ್ಲಿ ಸಿಲುಕಿದ ಜನರನ್ನು ಸಂತೈಸಿ, ಮನುಕುಲದ ಸೇವೆಯೇ ಶ್ರೇಷ್ಠಯನ್ನು ತೋರಿಸಿಕೊಟ್ಟರು. ನಾವು ನಮ್ಮ ಸುತ್ತಮುತ್ತಲಿನ ಜನರ ಸೇವೆಗೆ ಹೆಚ್ಚು ಮಹತ್ವ ನೀಡಬೇಕು’ ಎಂದು ಧರ್ಮಗುರುಗಳು ಹೇಳಿದರು.ಶುಭ ಶುಕ್ರವಾರದ ಅಂಗವಾಗಿ ನಾಳೆ (ಏ.18) ರಂದು ವಿಶ್ವದಾದ್ಯಂತ ಚರ್ಚ್‌ಗಳಲ್ಲಿ ವಿಶೇಷ ಬಲಿಪೂಜೆಗಳು ನಡೆಯಲಿವೆ.
ಪೆರುವಾಯಿ ಫಾತಿಮಾ ಮಾತೆಯ ದೇವಾಲಯದಲ್ಲಿ ಯೇಸು ಕ್ರಿಸ್ತ ತನ್ನ ಶಿಷ್ಯರ ಪಾದ ತೊಳೆದ ಸಂಕೇತವನ್ನು ನೆನಪಿಸಲಾಯಿತು.
ಪಾಸ್ಕ ಹಬ್ಬದ ಅಂಗವಾಗಿ ಹನ್ನೆರಡು ಜನ ಶಿಷ್ಯರ ಪಾದ ತೊಳೆದ ಕ್ರಿಸ್ತರ ನೆನಪಿನಲ್ಲಿ ಬೆಳ್ತಂಗಡಿ ಸಂತ ಲಾರೆನ್ಸರ ಪ್ರಧಾನ ದೇವಾಲಯದಲ್ಲಿ ಬೆಳ್ತಂಗಡಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷರಾದ ಅ. ವಂ. ಮಾರ್ ಲಾರೆನ್ಸ್ ರವರು ಹನ್ನೆರಡು ಮಂದಿ ವಿಶ್ವಾಸಿಗಳ ಪಾದ ತೊಳೆದರು.