ವಿಟ್ಲ: ದ್ವಿಚಕ್ರ ವಾಹನಕ್ಕೆ ಅತೀ ವೇಗದಿಂದ ಓಮ್ನಿಯೊಂದು ಹಿಂದಿನಿಂದ ಗುದ್ದಿದ ಪರಿಣಾಮ ಸವಾರರಿಬ್ಬರು ಗಂಭೀರ ಗಾಯಗೊಂಡ ಘಟನೆ ವಿಟ್ಲ-ಸಾಲೆತ್ತೂರು ರಸ್ತೆಯ ಕಡಂಬು ಎಂಬಲ್ಲಿ ನಡೆದಿದೆ.

ಗಾಯಗೊಂಡವರನ್ನು ಅಳಿಕೆ ಗ್ರಾಮದ ನಿವಾಸಿ ಜೆಸಿಂತಾ (31) ಹಾಗೂ ಪೆರುವಾಯಿ ಗ್ರಾಮದ ನಿವಾಸಿ ರೇಷ್ಮಾ ಎಂದು ಗುರುತಿಸಲಾಗಿದೆ.
ಘಟನೆ ವಿವರ
ಫೆ.1 ರಂದು ಕಾರ್ಯನಿಮಿತ್ತ ಇವರಿಬ್ಬರೂ ಹೋಂಡಾ ಡೀಯೋ ದ್ವಿಚಕ್ರ ವಾಹನದಲ್ಲಿ ಮುಡಿಪು ಕಡೆಯಿಂದ ವಿಟ್ಲ ಕಡೆಗೆ ಬರುತ್ತಿದ್ದರು. ಕಡಂಬು ಎಂಬಲ್ಲಿ ತಲುಪುತ್ತಿದ್ದ ವೇಳೆ ಹಿಂದಿನಿಂದ ಅತೀ ವೇಗದಿಂದ ಬಂದ ಓಮ್ನಿಯೊಂದು ದ್ವಿಚಕ್ರ ವಾಹನಕ್ಕೆ ಢಿಕ್ಕಿ ಹೊಡೆದಿದೆ. ಈ ವೇಳೆ ಸವಾರರಿಬ್ಬರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ.
ಆದರೆ ಓಮ್ನಿ ಸವಾರನು ಒಂದು ಕ್ಷಣವೂ ನಿಲ್ಲಿಸದೇ ಸ್ಥಳದಿಂದ ಪರಾರಿಯಾಗಿದ್ದಾನೆ. ಅಪಘಾತದ ರಭಸಕ್ಕೆ ರಸ್ತೆಗೆಸೆಯಲ್ಪಟ್ಟಿದ್ದರಿಂದ ಇಬ್ಬರಿಗೂ ಗಂಭೀರ ಗಾಯಗಳಾಗಿದ್ದು, ಈ ವೇಳೆ ಅದೇ ದಾರಿಯಲ್ಲಿ ಬರುತ್ತಿದ್ದ ಸ್ಥಳೀಯರು ಇಬ್ಬರನ್ನೂ ವಿಟ್ಲದ ಆಸ್ಪತ್ರೆಗೆ ಸೇರಿಸಿದ್ದಾರೆ. ಘಟನೆ ಬಗ್ಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ತನಿಖೆ ನಡೆಯುತ್ತಿದೆ.