canaratvnews

‘ಭಜರಂಗಿ ಗೋ ಕಳ್ಳರು’ ವಾಟ್ಸಾಪ್‌ ಗ್ರೂಪ್‌ನಲ್ಲಿ ಧಾರ್ಮಿಕ ಭಾವನೆ ಕೆರಳಿಸಿದ ಪ್ರಕರಣ: ಹೈಕೋರ್ಟ್‌ ಕಿಡಿ

ಬೆಂಗಳೂರು: ‘ಭಜರಂಗಿ ಗೋ ಕಳ್ಳರು’ ಹೆಸರಿನಲ್ಲಿ ವಾಟ್ಸ್‌ ಆ್ಯಪ್‌ ಗ್ರೂಪ್‌ ರಚಿಸಿ ಅದರಲ್ಲಿ, ಹಿಂದೂ ದೇವತೆಗಳನ್ನು ಮತ್ತು ರಾಜಕೀಯ ನಾಯಕರನ್ನು ಅಶ್ಲೀಲವಾಗಿ ಬಿಂಬಿಸಿ ಧಾರ್ಮಿಕ ಭಾವನೆಗಳನ್ನು ಕೆರಳಿಸಿದ ಆರೋಪವಿರುವ ಕ್ರಿಮಿನಲ್ ಪ್ರಕರಣ ರದ್ದುಗೊಳಿಸಲು ಹೈಕೋರ್ಟ್‌ ನಿರಾಕರಿಸಿದೆ.

ತನ್ನ ವಿರುದ್ಧದ ಕ್ರಿಮಿನಲ್‌ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲ್ಲೂಕು ಕುಪ್ಪೆಟ್ಟಿ ಕರಾಯ ಗ್ರಾಮದ ಸಿರಾಜುದ್ದೀನ್‌ ಬಿನ್‌ ಮೊಹಮದ್‌ ಇಸ್ಮಾಯಿಲ್‌ (30) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿಯನ್ನು ತಿರಸ್ಕರಿಸಿರುವ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಏಕಸದಸ್ಯ ನ್ಯಾಯಪೀಠ ಈ ಕುರಿತಂತೆ ಆದೇಶಿಸಿದೆ.

ಪ್ರಕರಣವೇನು?

ಆರೋಪಿ ಸಿರಾಜುದ್ದೀನ್‌ ಎಂಬಾತ ಸಾಮಾಜಿಕ ಜಾಲತಾಣಗಳಲ್ಲಿ ಹಿಂದೂ ದೇವತೆಗಳ ಚಿತ್ರಗಳನ್ನು ಅಶ್ಲೀಲವಾಗಿ, ಅವಮಾನಕರ ಮತ್ತು ಅಪವಿತ್ರ ರೀತಿಯಲ್ಲಿ ಚಿತ್ರಿಸಿ ಪ್ರಸಾರ ಮಾಡುತ್ತಿದ್ದಾರೆ. ಈ ರೀತಿಯ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳು ಸಮಾಜದಲ್ಲಿ ಗಲಭೆ ಸೃಷ್ವಿಸುವ ಷಡ್ಯಂತ್ರ ಹೊಂದಿವೆ. ಆದ್ದರಿಂದ, ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಕೋರಿ ಬೆಳ್ತಂಗಡಿಯ ಕಡಿರುದ್ಯಾವರ ಗ್ರಾಮದ ಕೆ.ಜಯರಾಜ್ ಸಾಲಿಯಾನ 2020ರ ಜನವರಿ 25ರಂದು ಸೆನ್‌  ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಈ ದೂರಿನ ಅನ್ವಯ ಪೊಲೀಸರು, 2008ರ ಕಲಂ 67ರ ಅಡಿಯಲ್ಲಿ ಎಫ್‌ಐಆರ್‌ ದಾಖಲಿಸಿದ್ದರು. ಈ ಹಿನ್ನೆಲೆ ‘ಎಫ್‌ಐಆರ್‌ ಮತ್ತು ಬೆಳ್ತಂಗಡಿ ಜೆಎಂಎಫ್‌ಸಿ ಕೋರ್ಟ್‌ನಲ್ಲಿರುವ ನ್ಯಾಯಿಕ ಪ್ರಕ್ರಿಯೆ ರದ್ದುಗೊಳಿಸಬೇಕು’ ಎಂದು ಅರ್ಜಿದಾರರು ಕೋರಿದ್ದರು.

ಈ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಸಿದ ಪೀಠ ‘ಮೇಲ್ನೋಟಕ್ಕೆ ಅರ್ಜಿದಾರರ ವಿರುದ್ಧದ ಆರೋಪಗಳಲ್ಲಿ ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಮತ್ತು ಕೋಮು ಸಾಮರಸ್ಯ ಭಂಗಗೊಳಿಸುವ ಪ್ರವೃತ್ತಿ ಕಂಡು ಬರುತ್ತಿದೆ. ತನಿಖಾಧಿಕಾರಿಯು ಗ್ರೂಪ್‌ನ ಎಲ್ಲಾ ನಿರ್ವಾಹಕರ ವಿರುದ್ಧ ಏಕರೂಪವಾಗಿ ಮುಂದುವರಿಯಲು ನಿರ್ಲಕ್ಷ್ಯ ತೋರಿದಂತೆ ಕಾಣುತ್ತಿದೆ’ ಎಂದು ಕಳವಳ ವ್ಯಕ್ತಪಡಿಸಿದೆ.  ಜೊತೆಗೆ ಇಂತಹ ವಾಟ್ಸ್‌ ಆ್ಯಪ್‌ ಗ್ರೂಪ್‌ಗಳ ಸದಸ್ಯರು ಅಶ್ಲೀಲ ಚಿತ್ರಗಳ ಪ್ರಸರಣಕ್ಕೆ ಅವಕಾಶ ನೀಡುವ ಕುಕೃತ್ಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದರೆ, ಅವರನ್ನೂ ವಿಚಾರಣೆಗೆ ಒಳಪಡಿಸಬೇಕು ಎಂದು ಸ್ಪಷ್ಟಪಡಿಸಿದೆ. ಈ  ಪ್ರಕರಣವು ಐದು ವರ್ಷಗಳಷ್ಟು ಹಳೆಯದಾಗಿರುವ ಕಾರಣ ತನಿಖಾಧಿಕಾರಿ ಯಾವುದೇ ವಿಳಂಬಕ್ಕೆ ಅವಕಾಶ ನೀಡದೆ ತನಿಖೆಯನ್ನು ಸಾಧ್ಯವಾದಷ್ಟು ಬೇಗ ಮುಕ್ತಾಯಗೊಳಿಸಬೇಕು’ ಎಂದು ಪ್ರಾಸಿಕ್ಯೂಷನ್‌ಗೆ ತಾಕೀತು ಮಾಡಿದೆ.

Share News
Exit mobile version