canaratvnews

ವೃದ್ಧ ತಂದೆಯನ್ನು ನೋಡಿಕೊಳ್ಳದ ಮಕ್ಕಳು: ಆಸ್ತಿ ಮತ್ತೆ ತಂದೆಗೆ ವರ್ಗಾಯಿಸಿದ ಹೈಕೋರ್ಟ್‌

ಬೆಂಗಳೂರು: ಆಸ್ತಿ ಭಾಗವಾದ ಮೇಲೆ ವೃದ್ಧ ತಂದೆಯೋರ್ವರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ಹೆಸರಿಗೆ ವರ್ಗಾವಣೆಯಾದ ಗಿಫ್ಟ್‌ ಡೀಡ್‌ ಅನ್ನು ಮತ್ತೆ ತಂದೆಯ ಹೆಸರಿಗೆ ವರ್ಗಾವಣೆ ಮಾಡಿ ಹೈಕೋರ್ಟ್‌ ಆದೇಶ ನೀಡಿದೆ.

ತುಮಕೂರಿನ ಹೆಬ್ಬೂರು ಹೋಬಳಿಯ ದೊಡ್ಡ ಗೊಲ್ಲಹಳ್ಳಿಯ ವೆಂಕಟಯ್ಯ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜು ಅವರಿದ್ದ ಏಕ ಸದಸ್ಯಪೀಠ ಈ ಆದೇಶ ನೀಡಿದೆ.

2007ರ ಹಿರಿಯ ನಾಗರಿಕರ ಮತ್ತು ಪೋಷಕರ ನಿರ್ವಹಣಾ ಮತ್ತು ಕಲ್ಯಾಣ ಕಾಯಿದೆ ಅನ್ವಯ ಕೃಷಿ ಭೂಮಿಯನ್ನು ಪುತ್ರಿಯರ ಹೆಸರಿಗೆ ಮಾಡಿಕೊಟ್ಟಿದ್ದ ಗಿಫ್ಟ್‌ ಡೀಡ್‌ ಅನ್ನು ರದ್ದುಗೊಳಿಸಿ ಕೋರ್ಟ್ ಆದೇಶಿಸಿದೆ. ಜತೆಗೆ ಹಿರಿಯ ನಾಗರಿಕರಿಗೆ ವೃದ್ಧಾಪ್ಯದಲ್ಲಿ ಆರೈಕೆ ಮಾಡದೇ ಅವರ ಜೀವನ ನಿರ್ವಹಣೆಗೆ ನೇರವಾಗದೇ ಇದ್ದರೆ ಅಂತಹ ಸಂದರ್ಭದಲ್ಲಿ ನ್ಯಾಯಾಲಯ ಅವರ ರಕ್ಷಣೆಗೆ ಧಾವಿಸಿ ಅವರ ಆಸ್ತಿಯನ್ನು ರಕ್ಷಿಸಿ, ಅವರ ಹಕ್ಕುಗಳನ್ನು ಮರಳಿ ದೊರಕಿಸಿಕೊಡಲಾಗುತ್ತದೆ ಎಂದು ಆದೇಶದಲ್ಲಿ ಹೇಳಿದೆ.

ವೃದ್ಧರ ಮನವಿಯನ್ನು ತಿರಸ್ಕರಿಸಿದ್ದ ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿಗಳು ತಮ್ಮ ಆದೇಶದಲ್ಲಿ ನೀಡಿರುವ ಕಾರಣಗಳು ‘ಕಾನೂನು ಬದ್ಧವಾಗಿ ದೋಷಪೂರಿತ’ ಮತ್ತು ಕಾಯಿದೆಯ ತಪ್ಪು ತಿಳಿವಳಿಕೆ ಆಧರಿಸಿವೆ. ಇದು ವಯಸ್ಸಾದ ಪೋಷಕರು ತಮ್ಮ ಮಕ್ಕಳಿಗೆ ಆಸ್ತಿಯನ್ನು ವರ್ಗಾಯಿಸುವಾಗ ಕಟ್ಟುನಿಟ್ಟಾದ ಕಾನೂನು ವಿಧಿವಿಧಾನಗಳಿಗಿಂತ ಹೆಚ್ಚಾಗಿ ನಂಬಿಕೆ, ನೈತಿಕ ಭರವಸೆಗಳು ಮತ್ತು ಕೌಟುಂಬಿಕ ಬಂಧಗಳನ್ನು ಅವಲಂಬಿಸುತ್ತಾರೆ ಎಂದು ಪೀಠ ಹೇಳಿದೆ.

ಹಿರಿಯ ನಾಗರಿಕರ, ವಿಶೇಷವಾಗಿ ಗ್ರಾಮೀಣ ಕರ್ನಾಟಕದವರ ವಿಶ್ವಾಸಾರ್ಹ ಸ್ವಭಾವ ಮತ್ತು ಮಕ್ಕಳ ಮೇಲೆ ಅವರ ಭಾವನಾತ್ಮಕ ಮತ್ತು ಆರ್ಥಿಕ ಅವಲಂಬನೆಯು ಕಾನೂನಿನಿಂದ ಸ್ಪಷ್ಟವಾಗಿ ಗುರುತಿಸಲ್ಪಟ್ಟ ಸಾಮಾಜಿಕ ವಾಸ್ತವವಾಗಿದೆ. ಅರ್ಜಿದಾರ ವೆಂಕಟಯ್ಯನವರ ವೃದ್ಧಾಪ್ಯ, ಗ್ರಾಮೀಣ ಹಿನ್ನೆಲೆ, ನಿಕಟ ಕುಟುಂಬ ಸಂಬಂಧ ಮತ್ತು ಆಸ್ತಿ ವರ್ಗಾವಣೆಯ ನಂತರದ ನಿರ್ಲಕ್ಷತ್ಯೆಯನ್ನು ಗಮನಿಸಿದ ನ್ಯಾಯಪೀಠ, ಗಿಫ್ಟ್‌ ಡೀಡ್‌ ಪೋಷಕರ ಆರೈಕೆ ಮತ್ತು ನಿರ್ವಹಣೆಯ ನಿರೀಕ್ಷೆಗೆ ಸ್ಪಷ್ಟವಾಗಿ ಸಂಬಂಧಿಸಿದೆ ಎಂದು ಅಭಿಪ್ರಾಯಪಟ್ಟಿದೆ.

ಪ್ರಕರಣದ ಹಿನ್ನೆಲೆ: ತುಮಕೂರು ಜಿಲ್ಲೆಯ ಹೆಬ್ಬೂರು ಹೋಬಳಿಯ ದೊಡ್ಡಗೊಲ್ಲಹಳ್ಳಿಯ ವೆಂಕಟಯ್ಯ ಸುಮಾರು 2.4 ಎಕರೆ ಕೃಷಿ ಭೂಮಿಯನ್ನು ಹೊಂದಿದ್ದರು. ತಮ್ಮ ಪುತ್ರಿಯರು ಚೆನ್ನಾಗಿ ನೋಡಿಕೊಳ್ಳುತ್ತೇವೆಂದು ಭರವಸೆ ನೀಡಿದ ಹಿನ್ನೆಲೆಯಲ್ಲಿ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಅವರ ಪರವಾಗಿ ಉಡುಗೊರೆ ಪತ್ರ (ಗಿಫ್ಟ್​ ಡೀಡ್​) ಮಾಡಿಕೊಟ್ಟು ಆಸ್ತಿಯನ್ನು ವರ್ಗಾವಣೆ ಮಾಡಿದ್ದರು. ಆ ನಂತರ ಪುತ್ರಿಯರು ತಮ್ಮನ್ನು ನೋಡಿಕೊಳ್ಳಲು ವಿಫಲರಾಗಿದ್ದಾರೆಂದು ಅವರು ಆರೋಪಿಸಿದ್ದರು.

ಅಲ್ಲದೇ, ಹಿರಿಯ ನಾಗರಿಕರ ಕಾಯಿದೆಯಡಿ, ತಮ್ಮ ಗಿಫ್ಟ್‌ ಡೀಡ್‌ ರದ್ದು ಕೋರಿ ಅವರು ಉಪವಿಭಾಗಾಧಿಕಾರಿ ನೇತೃತ್ವದ ನ್ಯಾಯಮಂಡಳಿ ಮುಂದೆ ಮನವಿ ಸಲ್ಲಿಸಿದ್ದರು. ನ್ಯಾಯಮಂಡಳಿಯು 2023ರ ಡಿ.19 ರಂದು ಅವರ ದೂರನ್ನು ವಜಾಗೊಳಿಸಿ, ಉಡುಗೊರೆ ಪತ್ರದಲ್ಲಿ ಹೆಣ್ಣುಮಕ್ಕಳು ತಮ್ಮನ್ನು ನೋಡಿಕೊಳ್ಳಲು ನಿರ್ಬಂಧವನ್ನು ಹೊಂದಿರುವ ಸ್ಪಷ್ಟ ಷರತ್ತು ಇಲ್ಲ ಎಂದು ತೀರ್ಪು ನೀಡಿತ್ತು. 2024ರ ಅ.22ರಂದು ಜಿಲ್ಲಾಧಿಕಾರಿ ಕೂಡ ಅದೇ ಆದೇಶವನ್ನು ಎತ್ತಿ ಹಿಡಿದಿದ್ದರು.

ಇದನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ಮೊರೆ ಹೋಗಿದ್ದ ವೆಂಕಟಯ್ಯ, ತಾವು ಅನಕ್ಷರಸ್ಥರು ಮತ್ತು ಗಿಫ್ಟ್‌ ಡೀಡ್‌ ಬಗ್ಗೆ ತಿಳಿದಿಲ್ಲದ ಕಾರಣ ಪುತ್ರಿಯರಾದ ಶಿವಮ್ಮ ಮತ್ತು ಪುಟ್ಟಮ್ಮ ಉಡುಗೊರೆ ಪತ್ರ ಸಿದ್ಧಪಡಿಸಿದ್ದರು. ತನ್ನನ್ನು ಚೆನ್ನಾಗಿ ನೋಡಿಕೊಳ್ಳಲಾಗುವುದೆಂಬ ಭರವಸೆಯ ಮೇರೆಗೆ ಗಿಫ್ಟ್‌ ಡೀಡ್‌ ಮಾಡಿಕೊಟ್ಟಿದ್ದೆನು ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ವಾದ ಆಲಿಸಿದ ಪೀಠ ಈ ಆದೇಶ ನೀಡಿದೆ.

Share News
Exit mobile version