ಮಂಗಳೂರು ನಗರದ ಅತ್ತಾವರ ಸೇರಿದಂತೆ ಕೇಂದ್ರ ಭಾಗದ ವಿವಿದೆಡೆ ಮಳೆ ನೀರು ಮನೆಗಳಿಗೆ ನುಗ್ಗಿ ತೊಂದರೆಗೀಡಾದ 12 ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ. ಇವರಿಗೆ ಮಹಾನಗರಪಾಲಿಕೆ ವತಿಯಿಂದ ಪುರಭವನ ಆವರಣದಲ್ಲಿ ತಾತ್ಕಾಲಿಕ ಪುನರ್ವಸತಿ ಕೇಂದ್ರದಲ್ಲಿ ಆಶ್ರಯ ನೀಡಿ, ಆಹಾರ ಮತ್ತು ಭೇಟಿ ನೀಡಿ ಪರಿಶೀಲಿಸಿದರು.

ಮಳೆ: ಸಂಪೂರ್ಣ ನಿಗಾ ವಹಿಸಲು ಜಿಲ್ಲಾಧಿಕಾರಿ ಸೂಚನೆ*
ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದ್ದು, ಎಲ್ಲಾ ತಹಶೀಲ್ದಾರರು ಹಾಗೂ ಇನ್ಸಿಡೆಂಟ್ ಕಮಾಂಡರ್ ಗಳು ಅಪಾಯದಂಚಿನಲ್ಲಿರುವ ಮನೆಗಳ ಕುಟುಂಬಗಳನ್ನು ಕಾಳಜಿ ಕೇಂದ್ರ /ಸುರಕ್ಷಿತ ಸ್ಥಳಗಳಿಗೆ ಕೂಡಲೇ ಸ್ಥಳಾಂತರಿಸುವಂತೆ ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಸೂಚಿಸಿದ್ದಾರೆ.

ನೆರೆ ಉಂಟಾಗುವ ಪ್ರದೇಶಗಳ ಮೇಲೆ ತೀರಾ ನಿಗಾ ವಹಿಸಿ ಎಲ್ಲಾ ರಕ್ಷಣಾ ಸಾಮಾಗ್ರಿಗಳನ್ನು ಸನ್ನದ್ಧವಾಗಿರಿಸಬೇಕು. ಯಾವುದೇ ಸಾವು ನೋವು ಸಂಭವಿಸದಂತೆ ಎಚ್ಚರಿಕೆಯನ್ನು ವಹಿಸಬೇಕು. ಎಲ್ಲಾ ತಾಲೂಕು ಹಾಗೂ ಮಹಾನಗರಪಾಲಿಕೆ ಕಂಟ್ರೋಲ್ ರೂಂ ನಿರಂತರ ಕಾರ್ಯಾಚರಣೆಯಲ್ಲಿರಬೇಕು ಎಂದು ಜಿಲ್ಲಾಧಿಕಾರಿಗಳು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪ್ರಾಕೃತಿಕ ವಿಕೋಪ ಕಾರ್ಯಾಚರಣೆಯಲ್ಲಿ ಯಾವುದೇ ನಿರ್ಲಕ್ಷ್ಯವನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಅವರು ಎಚ್ಚರಿಸಿದ್ದಾರೆ.


*ಮಳೆ ಅನಾಹುತ ಸ್ಥಳಗಳಿಗೆ ಭೇಟಿ*
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಮತ್ತು ಮಹಾನಗರಪಾಲಿಕೆ ಆಯುಕ್ತ ರವಿಚಂದ್ರ ನಾಯಕ್ ಅವರು ಶನಿವಾರ ನಗರದಲ್ಲಿ ಮಳೆ ನೀರು ನಿಂತು ಸಮಸ್ಯೆಗೀಡಾದ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲಿಸಿದರು. ಪಂಪ್ ವೆಲ್ ಗೆ ಭೇಟಿ ನೀಡಿ, ಮಳೆ ನೀರು ಸರಾಗ ಹರಿವಿನ ಸಮಸ್ಯೆಗಳ ಬಗ್ಗೆ ಅವರು ಅಧಿಕಾರಿಗಳೊಂದಿಗೆ ಚರ್ಚಿಸಿದರು.
