canaratvnews

ಭಾರೀ ಮಳೆ ಹಿನ್ನೆಲೆ: ಜುಲೈ 23 ರಂದು ದ.ಕ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ರಜೆ

ಮಂಗಳೂರು: ಭಾರತೀಯ ಹವಾಮಾನ ಇಲಾಖೆ (IMD) ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮುನ್ಸೂಚನೆಯಂತೆ ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಭಾರೀ ಮಳೆಯಾಗುತ್ತಿದ್ದು, ಜಿಲ್ಲೆಯಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರ ಹಾಗೂ ವಿದ್ಯಾರ್ಥಿಗಳ ಸುರಕ್ಷತೆಯ ದೃಷ್ಟಿಯಿಂದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರವು ಮುಂಜಾಗ್ರತಾ ಕ್ರಮವಾಗಿ ತುರ್ತು ಆದೇಶಗಳನ್ನು ಹೊರಡಿಸಿದೆ.

ಮುಖ್ಯ ಆದೇಶಗಳು ಮತ್ತು ಮಾರ್ಗಸೂಚಿಗಳು ಈ ಕೆಳಗಿನಂತಿವೆ:

12ನೇ ತರಗತಿಯವರೆಗೆ ಕಡ್ಡಾಯ ರಜೆ

ಜಿಲ್ಲೆಯ ಎಲ್ಲಾ ಅಂಗನವಾಡಿ ಕೇಂದ್ರಗಳು, ಸರ್ಕಾರಿ, ಅನುದಾನಿತ ಮತ್ತು ಖಾಸಗಿ ಪ್ರಾಥಮಿಕ, ಪ್ರೌಢ ಶಾಲೆಗಳು, ವಸತಿ ಶಾಲೆಗಳು ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ (12ನೇ ತರಗತಿಯವರೆಗೆ) ದಿನಾಂಕ: 23.07.2026 ರಂದು ಕಡ್ಡಾಯ ರಜೆ ಘೋಷಿಸಲಾಗಿದೆ. ಆದೇಶ ಉಲ್ಲಂಘಿಸಿ ತರಗತಿ ನಡೆಸುವ ಸಂಸ್ಥೆಗಳ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, 2005 ರ ಕಲಂ 51(ಬಿ) ಅನ್ವಯ ಕಾನೂನು ಕ್ರಮ ಜರುಗಿಸಲಾಗುವುದು.

ಪೋಷಕರಿಗೆ ಎಚ್ಚರಿಕೆ

ನೀರಿರುವ ತಗ್ಗು ಪ್ರದೇಶಗಳು, ಕೆರೆ, ನದಿ ಮತ್ತು ಸಮುದ್ರತೀರಗಳಿಗೆ ಮಕ್ಕಳು ಹೋಗದಂತೆ ಪೋಷಕರು ಕಟ್ಟುನಿಟ್ಟಿನ ಜಾಗ್ರತೆ ವಹಿಸಬೇಕು.

ಪ್ರವಾಸಿಗರು ಮತ್ತು ಮೀನುಗಾರರಿಗೆ ನಿಷೇಧ

ಕಡಲು ಪ್ರಕ್ಷುಬ್ಧವಾಗಿರುವುದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯಬಾರದು. ಪ್ರವಾಸಿಗರು ಹಾಗೂ ಸಾರ್ವಜನಿಕರು ನದಿ ಮತ್ತು ಸಮುದ್ರತೀರಗಳಿಗೆ ತೆರಳುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.

ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ

ಜಿಲ್ಲಾ ಮತ್ತು ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿರ್ವಹಣಾ ಕಾರ್ಯಗಳನ್ನು ಚಾಚೂ ತಪ್ಪದೆ ನಿರ್ವಹಿಸಬೇಕು. ಸಾರ್ವಜನಿಕ ದೂರುಗಳಿಗೆ ತಕ್ಷಣ ಸ್ಪಂದಿಸುತ್ತಾ ಜಿಲ್ಲಾಧಿಕಾರಿ ಕಛೇರಿಯ ನಿಯಂತ್ರಣ ಕೊಠಡಿಯೊಂದಿಗೆ ನಿರಂತರ ಸಂಪರ್ಕದಲ್ಲಿರಬೇಕು. ಜಿಲ್ಲೆಯ ಪ್ರತೀ ತಾಲೂಕುಗಳಲ್ಲಿ ಕಾಳಜಿ ಕೇಂದ್ರಗಳನ್ನು (Relief Centers) ತೆರೆದು ಸನ್ನದ್ಧ ಸ್ಥಿತಿಯಲ್ಲಿಡಲು ಆದೇಶಿಸಲಾಗಿದೆ.

Share News
Exit mobile version