canaratvnews

ಬಿಕರ್ನಕಟ್ಟೆ ನಾಗಬ್ರಹ್ಮ ದೈವಸ್ಥಾನದ ಬಳಿ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಗುದ್ದಲಿ ಪೂಜೆ

ಮಂಗಳೂರು, ಮೇ 28:ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 34ನೇ ಕದ್ರಿ ಶಿವಭಾಗ್ ವಾರ್ಡಿನ ಬಿಕರ್ನಕಟ್ಟೆ ನಾಗಬ್ರಹ್ಮ ದೈವಸ್ಥಾನದ ಹತ್ತಿರ ಲೋಕೋಪಯೋಗಿ ಇಲಾಖೆಯ ರೂ. 30 ಲಕ್ಷ ವಿಶೇಷ ಅನುದಾನದಲ್ಲಿ ನಡೆಯಲಿರುವ ತಡೆಗೋಡೆ ನಿರ್ಮಾಣ ಕಾಮಗಾರಿಗೆ ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಗುದ್ದಲಿ ಪೂಜೆ ನೆರವೇರಿತು.

ಬಳಿಕ ಮಾತನಾಡಿದ ಶಾಸಕರು, “ಮಳೆಗಾಲದಲ್ಲಿ ಈ ಪ್ರದೇಶಕ್ಕೆ ತೊಂದರೆ ಉಂಟಾಗುತ್ತಿದ್ದ ಬಗ್ಗೆ ಸ್ಥಳೀಯರು ಮನವಿ ಮಾಡಿದ್ದರು. ಅವರ ಕೋರಿಕೆಯಂತೆ ಪದವು ಮೇಗಿನ ಮನೆ ನಾಯ್ಗರ ಮನೆತನದ ರಸ್ತೆಗೆ ತಾಗಿರುವ ರಾಜಕಾಲುವೆಗೆ ಈ ತಡೆಗೋಡೆ ಕಾಮಗಾರಿ ನಡೆಯಲಿದೆ” ಎಂದರು. ಇದೇ ವೇಳೆ ರಾಜ್ಯ ಸರ್ಕಾರದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಅವರು, “ಇಂದು ಕ್ಷೇತ್ರದ ಅಭಿವೃದ್ಧಿಗೆ ನೂರಾರು ಕೋಟಿ ಅನುದಾನಗಳ ಅಗತ್ಯವಿದ್ದರೂ ರಾಜ್ಯ ಸರಕಾರದಿಂದ ಯಾವುದೇ ಬೆಂಬಲ ದೊರೆಯುತ್ತಿಲ್ಲ. ಹಾಗಾಗಿ ಇರುವ ಅತ್ಯಲ್ಪ ಅನುದಾನಗಳನ್ನೇ ಬಳಸಿಕೊಂಡು ಅತೀ ಅಗತ್ಯವಿರುವ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದು, ಇದು ಶೀಘ್ರದಲ್ಲಿ ಪೂರ್ಣಗೊಳ್ಳಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ನಿಕಟಪೂರ್ವ ಪಾಲಿಕೆ ಸದಸ್ಯೆ ಶ್ರೀಮತಿ ಕಾವ್ಯ ನಟರಾಜ್ ಆಳ್ವ, ವಾರ್ಡ್ ಅಧ್ಯಕ್ಷರಾದ ವಿಕ್ರಂ ಚೌಟ, ಯೋಗಿಶ್ ಶೆಣೈ, ನವೀನ್ ಶೆಣೈ, ಗೋಪಾಲಕೃಷ್ಣ ಶೆಣೈ, ಶಿವರಾಮ್ ಭಂಡಾರಿ, ದಿನೇಶ್ ಶೆಣೈ, ರಾಮಚಂದ್ರ ಚೌಟ, ಹರೀಶ್ ಪ್ರಭು, ಡಾ. ಯು. ಡಿ ನಾಯಕ್, ಉಮೇಶ್ ಶೆಣೈ, ರಾಜೇಶ್ ಸೇರಿದಂತೆ ಇಲಾಖೆಯ ಅಧಿಕಾರಿಗಳು ಹಾಗೂ ಅನೇಕ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
Share News
Exit mobile version