DAKSHINA KANNADALATEST NEWS

ವೀರಯೋಧ ಪೆರುವಾಯಿ ಚಂದ್ರಶೇಖರ ಪೂಜಾರಿ ಅವರಿಗೆ ಹುಟ್ಟೂರಿನಲ್ಲಿ ಭವ್ಯ ಸನ್ಮಾನ, ತಿರಂಗಾ ಜಾಥಾ

ವಿಟ್ಲ: ದೇಶದ ರಕ್ಷಣೆಗಾಗಿ ಭಾರತೀಯ ಭೂಸೇನೆಯಲ್ಲಿ ಸುದೀರ್ಘ ಸೇವೆ ಸಲ್ಲಿಸಿ ತಾಯ್ನಾಡಿಗೆ ಮರಳಿದ ವೀರಯೋಧ ಚಂದ್ರಶೇಖರ ಪೂಜಾರಿ ಕಲ್ಲಡ್ಕ ಅವರಿಗೆ ಪೆರುವಾಯಿ ಸಾರ್ವಜನಿಕ ಸನ್ಮಾನ ಸಮಿತಿ ವತಿಯಿಂದ ಹುಟ್ಟೂರ ಸನ್ಮಾನ ಮತ್ತು ಭವ್ಯ ‘ತಿರಂಗಾ ಜಾಥಾ’ ಕಾರ್ಯಕ್ರಮ ಜರುಗಿತು.


ಕಾರ್ಯಕ್ರಮದಲ್ಲಿ ವಿವಿಧ ಧರ್ಮಗಳ ಮುಖಂಡರು ಭಾಗವಹಿಸಿ ಯೋಧನ ದೇಶಸೇವೆಯನ್ನು ಕೊಂಡಾಡಿದರು.

ಬದುಕು ಮೂರೇ ದಿನ, ಪರ-ವಿರೋಧ ಏಕೆ : ಶ್ರೀಕೃಷ್ಣ ಗುರೂಜಿ


ಕುಕ್ಕಾಜೆ ಶ್ರೀ ಕಾಳಿಕಾಂಬಾ ಆಂಜನೇಯ ಕ್ಷೇತ್ರದ ಧರ್ಮದರ್ಶಿ ಶ್ರೀಕೃಷ್ಣ ಗುರೂಜಿ ಮಾತನಾಡಿ, “ಯಾವುದೇ ಜಾತಿ, ಮತ, ಭೇದವಿಲ್ಲದೇ ಎಲ್ಲರೂ ಜೀವನ ನಡೆಸುತ್ತಿದ್ದಾರೆ. ಯಾರನ್ನೂ ವಿರೋಧಿಸಿ ಬದುಕಲು ಧರ್ಮ ಕಲಿಸಿಲ್ಲ. ಎಲ್ಲರನ್ನೂ ಅರ್ಥ ಮಾಡಿಕೊಂಡು ಬದುಕಬೇಕು. ಬದುಕು ಮೂರೇ ದಿನ, ಇದರ ನಡುವೆ ಪರ-ವಿರೋಧ ಏಕೆ? ಪ್ರತಿಯೊಬ್ಬ ತಾಯಿಯ ಮಗ ದೇಶದ ಸೈನಿಕನಾಗಬೇಕು. ಯೋಧನಾಗುವುದು ದೇಶದ ಎಲ್ಲ ವರ್ಗದ ಜನರ ರಕ್ಷಣೆಗಾಗಿಯೇ ಹೊರತು ಆತನ ಸ್ವಾರ್ಥಕ್ಕಲ್ಲ” ಎಂದರು.

ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯ: ಜಾಫರ್ ಸ್ವಾದಿಖ್ ಬಾಖವಿ


ಪೆರುವಾಯಿ ಮುಹಿಯ್ಯುದ್ದೀನ್ ಜುಮಾ ಮಸೀದಿಯ ಧರ್ಮಗುರು ಜಾಫರ್ ಸ್ವಾದಿಖ್ ಬಾಖವಿ ಅಲ್ ಯಮಾನಿ ಮಾತನಾಡಿ, “ಯೋಧರು ತಮ್ಮ ಎಲ್ಲವನ್ನೂ ಸಮರ್ಪಿಸಿ ನಮಗಾಗಿ ಸೇವೆ ಮಾಡುತ್ತಿದ್ದಾರೆ. ಸೈನಿಕರನ್ನು ಗೌರವಿಸುವುದು ನಮ್ಮ ಕರ್ತವ್ಯವಾಗಿದೆ. ಎಲ್ಲರೂ ಜತೆಯಾಗಿ ಕೂಡಿ ಬದುಕಿದಾಗ ಜೀವನ ಸಾರ್ಥಕವಾಗುತ್ತದೆ” ಎಂದು ಆಶಯ ವ್ಯಕ್ತಪಡಿಸಿದರು.

ಇದು ಜಾತಿಯ ಕಾರ್ಯಕ್ರಮವಲ್ಲ, ಮಾನವೀಯತೆಯ ಹಬ್ಬ: ಫಾ. ಸೈಮನ್ ಡಿ ಸೋಜ


ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ ಧರ್ಮಗುರು ಫಾದರ್ ಸೈಮನ್ ಡಿ ಸೋಜ ಮಾತನಾಡಿ, “ಇದು ಯಾವುದೇ ಒಂದು ಜಾತಿ ಅಥವಾ ಧರ್ಮದ ಕಾರ್ಯಕ್ರಮವಲ್ಲ. ಇದು ಮಾನವೀಯತೆಯ ಹಬ್ಬವಾಗಿದೆ. ಇಲ್ಲಿ ನಾವೆಲ್ಲರೂ ಸೇರಿರುವುದು ನಮ್ಮ ಭಾರತದ ಮಣ್ಣಿನ ಮಗನನ್ನು ಗೌರವಿಸುವ ಪವಿತ್ರ ಉದ್ದೇಶದಿಂದ” ಎಂದು ಬಣ್ಣಿಸಿದರು.

ಇದೇ ಸಂದರ್ಭದಲ್ಲಿ ಪೆರುವಾಯಿ ಬದ್ರಿಯಾ ಜುಮಾ ಮಸೀದಿ ಧರ್ಮಗುರು ಶರೀಫ್ ಮದನಿ ಅವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.


ಈ ಗೌರವ ದೇಶದ ಧ್ವಜಕ್ಕೆ ಮತ್ತು ಪ್ರತಿಯೊಬ್ಬ ಸೈನಿಕನಿಗೆ ಸಂದಿದ್ದು: ವೀರಯೋಧ ಚಂದ್ರಶೇಖರ

ಸಾರ್ವಜನಿಕ ಸನ್ಮಾನ ಸಮಿತಿ, ಪೆರುವಾಯಿ ಚರ್ಚ್ ಹಾಗೂ ವಿವಿಧ ಸಂಘ-ಸಂಸ್ಥೆಗಳ ವತಿಯಿಂದ ಭವ್ಯ ಸನ್ಮಾನ ಸ್ವೀಕರಿಸಿ ಮಾತನಾಡಿದ ಯೋಧ ಚಂದ್ರಶೇಖರ ಪೂಜಾರಿ, “ಈ ಗೌರವ ನನಗೆ ಸಲ್ಲಿದ್ದಲ್ಲ. ಇದು ದೇಶದ ಧ್ವಜಕ್ಕೆ ಮತ್ತು ದೇಶ ಕಾಯುವ ಪ್ರತಿಯೊಬ್ಬ ಸೈನಿಕನಿಗೂ ಸಲ್ಲುತ್ತದೆ. ನಾನು ದೇಶ ಸೇವೆಗೆ ಹೊರಟಾಗ ಇಲ್ಲಿನ ಎಲ್ಲಾ ಜನರೇ ನನ್ನನ್ನು ಬೆನ್ನು ತಟ್ಟಿ ಕಳುಹಿಸಿಕೊಟ್ಟಿದ್ದರು” ಎಂದು ಭಾವುಕರಾಗಿ ನುಡಿದರು.

ಕಾರ್ಯಕ್ರಮದಲ್ಲಿ ಪ್ರಗತಿಪರ ಕೃಷಿಕ ಕೃಷ್ಣ ಪ್ರಸಾದ್ ಕಡೆಂಬಿಲ್ಲ, ಯೋಧನ ತಾಯಿ ಸುಂದರಿ, ಧರ್ಮಪತ್ನಿ ವಿದ್ಯಾಶ್ರೀ, ರಾಜೇಂದ್ರ ರೈ ಪೆರುವಾಯಿ ಗುತ್ತು ಮೊದಲಾದ ಗಣ್ಯರು ಉಪಸ್ಥಿತರಿದ್ದರು.


ರಹಿಮಾನ್ ಕಾನ ಸ್ವಾಗತಿಸಿದರು, ಜಿ. ಎಸ್. ಕುಮಾರ್ ಸನ್ಮಾನ ಪತ್ರ ವಾಚಿಸಿದರು. ನೌಫಲ್ ಕೆ.ಬಿ.ಎಸ್. ಕುಡ್ತಮುಗೇರು ಕಾರ್ಯಕ್ರಮ ನಿರೂಪಿಸಿದರು.

Share News