• Home  
  • ಸಾಹಿತ್ಯ ಮತ್ತು ಶಿಕ್ಷಣದ ಮೂಲಕವೇ ಸಂಸ್ಕಾರಯುತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ: ಸಾಹಿತಿ ಚಂದ್ರಕಲಾ ನಂದಾವರ
- LATEST NEWS

ಸಾಹಿತ್ಯ ಮತ್ತು ಶಿಕ್ಷಣದ ಮೂಲಕವೇ ಸಂಸ್ಕಾರಯುತ ನಾಗರಿಕ ಸಮಾಜ ನಿರ್ಮಾಣ ಸಾಧ್ಯ: ಸಾಹಿತಿ ಚಂದ್ರಕಲಾ ನಂದಾವರ

ಮಂಗಳೂರು, ಜುಲೈ:18: ಮಂಗಳೂರಿನ ಕೋರ್ಟ್ ಗುಡ್ಡೆಯ ಆಲದ ಮರದಡಿಯಲ್ಲಿ ಸಮಾನ ಸಾಹಿತ್ಯಾಸಕ್ತರು, ಕನ್ನಡ ಭಾಷಾ ಪಂಡಿತರ ಸಾಹಿತ್ಯ ಚರ್ಚೆಯಲ್ಲಿ ಆರಂಭವಾದ ಮಿತ್ರ ಮಂಡಳಿ ಸಾಹಿತ್ಯ ಲೋಕಕ್ಕೆ ದಿಗ್ಗಜ ಸಾಹಿತಿಗಳನ್ನು ನೀಡಿದೆ. ಮಿತ್ರ ಮಂಡಳಿಯಿಂದ ಬಿಡುಗಡೆಯಾದ ಪುಸ್ತಕಗಳು ಚರಿತ್ರೆಯ ಪುಟಗಳಲ್ಲಿ ಶ್ರೇಷ್ಟ ಸಾಹಿತ್ಯ ಪ್ರಕಾರಗಳಾಗಿ ದಾಖಲಾಗಿವೆ. ಇದರಲ್ಲಿ ಕೆನರಾ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಕೊಡುಗೆ ದೊಡ್ಡದಿದೆ. ಆ ನಿಟ್ಟಿನಲ್ಲಿ ಮಿತ್ರ ಮಂಡಳಿಯನ್ನು ಮತ್ತೇ ಪುನರುಜ್ಜೀನವನಗೊಳಿಸುವ ಕಾರ್ಯವನ್ನು ಕೆನರಾ ಶಿಕ್ಷಣ ಸಂಸ್ಥೆ ಮಾಡಿರುವುದು ಉತ್ತಮ ಹೆಜ್ಜೆ ಎಂದು ಖ್ಯಾತ […]

Share News

ಮಂಗಳೂರು, ಜುಲೈ:18: ಮಂಗಳೂರಿನ ಕೋರ್ಟ್ ಗುಡ್ಡೆಯ ಆಲದ ಮರದಡಿಯಲ್ಲಿ ಸಮಾನ ಸಾಹಿತ್ಯಾಸಕ್ತರು, ಕನ್ನಡ ಭಾಷಾ ಪಂಡಿತರ ಸಾಹಿತ್ಯ ಚರ್ಚೆಯಲ್ಲಿ ಆರಂಭವಾದ ಮಿತ್ರ ಮಂಡಳಿ ಸಾಹಿತ್ಯ ಲೋಕಕ್ಕೆ ದಿಗ್ಗಜ ಸಾಹಿತಿಗಳನ್ನು ನೀಡಿದೆ. ಮಿತ್ರ ಮಂಡಳಿಯಿಂದ ಬಿಡುಗಡೆಯಾದ ಪುಸ್ತಕಗಳು ಚರಿತ್ರೆಯ ಪುಟಗಳಲ್ಲಿ ಶ್ರೇಷ್ಟ ಸಾಹಿತ್ಯ ಪ್ರಕಾರಗಳಾಗಿ ದಾಖಲಾಗಿವೆ. ಇದರಲ್ಲಿ ಕೆನರಾ ಶಿಕ್ಷಣ ಸಂಸ್ಥೆಯ ಪ್ರಾಧ್ಯಾಪಕರ, ವಿದ್ಯಾರ್ಥಿಗಳ ಕೊಡುಗೆ ದೊಡ್ಡದಿದೆ. ಆ ನಿಟ್ಟಿನಲ್ಲಿ ಮಿತ್ರ ಮಂಡಳಿಯನ್ನು ಮತ್ತೇ ಪುನರುಜ್ಜೀನವನಗೊಳಿಸುವ ಕಾರ್ಯವನ್ನು ಕೆನರಾ ಶಿಕ್ಷಣ ಸಂಸ್ಥೆ ಮಾಡಿರುವುದು ಉತ್ತಮ ಹೆಜ್ಜೆ ಎಂದು ಖ್ಯಾತ ಸಾಹಿತಿ ಚಂದ್ರಕಲಾ ನಂದಾವರ ಅವರು ಹೇಳಿದ್ದಾರೆ.

ಅವರು ಡೊಂಗರಕೇರಿಯಲ್ಲಿರುವ ಸುಧೀಂದ್ರ ಸಭಾಂಗಣದಲ್ಲಿ ಮಿತ್ರ ಮಂಡಳಿ 2.0 ಪುನಶ್ಚೇತನದ ಚಾಲನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಇತಿಹಾಸ ತಿಳಿದವರು ಮಾತ್ರ ಇತಿಹಾಸ ಸೃಷ್ಟಿಸುತ್ತಾರೆ. ಮಿತ್ರ ಮಂಡಳಿಯ ಆಧಾರ ಸ್ತಂಭಗಳಾಗಿದ್ದ ಜೋಡುಮಠ ವಾಮನ ಭಟ್, ಎಂ.ಎನ್.ಕಾಮತ್, ಪೇಜಾವರ ಸದಾಶಿವ ರಾವ್, ಕಣಂದೂರು ತಿಮ್ಮಯಾಚಾರ್, ಕಣಂದೂರು ರಾಘವಾಚಾರ್ ಸಹಿತ ಅನೇಕ ಹೆಸರುಗಳನ್ನು ಉದಾಹರಿಸಿದ ಅವರು ಎಲ್ಲರ ಪ್ರಯತ್ನದಿಂದ ಕನ್ನಡ ಸಾಹಿತ್ಯ ಲೋಕ ಶ್ರೀಮಂತವಾಯಿತು. ಅಂದು ಸ್ವಾತಂತ್ರ್ಯ ಹೋರಾಟದ ಭಾಗವಾಗಿ ಅನೇಕ ಶಿಕ್ಷಕರು, ವಕೀಲರು ಸಾಹಿತ್ಯದ ಕೃಷಿಗಾಗಿ ಸೇವೆ ಸಲ್ಲಿಸಿದ್ದಾರೆ. ಆದರೆ ಇಂದಿನ ಶಿಕ್ಷಣ ಯುಗದಲ್ಲಿ ಮಕ್ಕಳಲ್ಲಿ ಸಾಹಿತ್ಯಾಸಕ್ತಿ ಕಡಿಮೆಯಾಗುತ್ತಿದೆ. ಆದರೆ ಕೆನರಾ ಶಿಕ್ಷಣ ಸಂಸ್ಥೆಯ ಹೊಸ ಪ್ರಯತ್ನ ಮಿತ್ರ ಮಂಡಳಿ 2.0 ಮೂಲಕ ಹೊಸ ಸೃಜನಶೀಲ ಸಮಾಜ ನಿರ್ಮಾಣವಾಗಲಿ. ಸಂಸ್ಕಾರಯುತ ಸಮಾಜಕ್ಕೆ ಈ ಹೆಜ್ಜೆ ದೊಡ್ಡ ಕೊಡುಗೆ ನೀಡಲಿ ಎಂದು ಶುಭ ಹಾರೈಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಕೆನರಾ ಹೈಸ್ಕೂಲ್ ಅಸೋಸಿಯೇಶನ್ ನ ಸಿಎ ಗಿರಿಧರ್ ಕಾಮತ್ ಅವರು ಮಿತ್ರ ಮಂಡಳಿಯ ಹಿಂದಿನ ಶಕ್ತಿ ಎಂಎನ್ ಕಾಮತ್ ಅವರ ಬರವಣಿಗೆಯ ಶೈಲಿ, ಮನಮುಟ್ಟುವಂತೆ ಹೇಳುತ್ತಿದ್ದ ರೀತಿ ಹಾಗೂ ಬಳಸುತ್ತಿದ್ದ ಸಾಹಿತ್ಯದ ಬಗ್ಗೆ ಮಾಹಿತಿಗಳನ್ನು ಹಂಚಿಕೊಂಡರು. ಕೆನರಾ ಕಾಲೇಜಿನ ಪ್ರಾಧ್ಯಾಪಕಿ ದೀಪ್ತಿ ನಾಯಕ್ ಅವರು ಇದರ ಉದ್ದೇಶದ ಬಗ್ಗೆ ಮಾತನಾಡಿ, ಪ್ರೈಮರಿಯಿಂದ ಡಿಗ್ರಿ ಕಾಲೇಜಿನ ತನಕ ಮಕ್ಕಳಲ್ಲಿ ಸಾಹಿತ್ಯದ ಆಸಕ್ತಿಯನ್ನು ಬೆಳೆಸಲು ಪೂರಕವಾದ ಚಟುವಟಿಕೆಗಳನ್ನು ಕೆನರಾ ಕಲ್ಚರಲ್ ಅಕಾಡೆಮಿಯ ಮಿತ್ರ ಮಂಡಳಿಯ ವತಿಯಿಂದ ಮಾಡಲಾಗುವುದು ಎಂದು ತಿಳಿಸಿದರು.

ಮಿತ್ರ ಮಂಡಳಿಯ ರೂವಾರಿಗಳಲ್ಲಿ ಒಬ್ಬರಾಗಿದ್ದ ಎಂ.ಎನ್. ಕಾಮತ್ ಅವರೇ ಕನ್ನಡಕ್ಕೆ ಅನುವಾದಿಸಿದ, ರವೀಂದ್ರನಾಥ ಟಾಗೋರ್ ಅವರ ರಚನೆಯ ಗೀತಾಂಜಲಿಯ ಹಾಡು ಕೆನರಾ ಪ್ರಾರ್ಥನಾ ಗೀತೆ ಎಲ್ಲಿ ಮನಕಳುಕಿರದೋ ಮಕ್ಕಳು ಹಾಡಿದರು.
ಕೆನರಾ ಕಲ್ಚರಲ್ ಅಕಾಡೆಮಿ ಸಂಚಾಲಕ ಮಂಗಲ್ಪಾಡಿ ನರೇಶ್ ಶೆಣೈ, ಸಾರ್ವಜನಿಕ ಸಂಪರ್ಕಾಧಿಕಾರಿ ಉಜ್ವಲ್ ಮಲ್ಯ, ಮಿತ್ರ ಮಂಡಳಿಯ ರೂಪುರೇಶೆ ಪ್ರಮುಖರುಗಳಾದ ಗುರು ಬಂಟ್ವಾಳಕಾರ್, ವಿಕ್ರಮ್ ರಾಜ್, ಶಿಕ್ಷಣ ಸಂಸ್ಥೆಯ ಪ್ರಮುಖರು, ಗಣ್ಯರು, ಸಾಹಿತ್ಯ ಪ್ರೇಮಿಗಳು ಉಪಸ್ಥಿತರಿದ್ದರು. ಪ್ರಾಧ್ಯಾಪಕ ಪ್ರದೀಪ್ ನಿರೂಪಿಸಿ, ವಂದಿಸಿದರು.

Share News