ಮಂಗಳೂರು: ನಗರದ ನಂತೂರಿನ ಪಾದುವ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ನವೆಂಬರ್ 6ರಂದು ಎರಡು ದಿನಗಳ ಕಾಲ ನಡೆಯುವ ‘ಪಾದುವ ಸಂಭ್ರಮ – 2026’ ಕಾರ್ಯಕ್ರಮಕ್ಕೆ ವಿಧ್ಯುಕ್ತ ಚಾಲನೆ ನೀಡಲಾಯಿತು.

ಪಾದುವ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕರಾದ ಅತಿ ವಂದನೀಯ ಗುರು ವಾಲ್ಟರ್ ಡಿಸೋಜ ಅವರು ದೀಪ ಬೆಳಗಿಸುವ ಮೂಲಕ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ಚೆಂಡೆ ಬಡಿಯುವ ಮೂಲಕ ವಿನೂತನ ರೀತಿಯಲ್ಲಿ ಕಾರ್ಯಕ್ರಮವನ್ನು ಉದ್ಘಾಟಿಸಿದರು.

ಸಾಧನೆಗೆ ಛಲ ಮುಖ್ಯ: ವಿಜೆ ಡಿಕ್ಸನ್
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ನಟ, ಅಂತಾರಾಷ್ಟ್ರೀಯ ನಿರೂಪಕ ಹಾಗೂ ಸಂಸ್ಥೆಯ ಹಳೆ ವಿದ್ಯಾರ್ಥಿ ಶ್ರೀ ವಿಜೆ ಡಿಕ್ಸನ್ ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, “ಪಾದುವ ಕನ್ನಡ ಮಾಧ್ಯಮ ಶಾಲೆಯಲ್ಲಿ ಕಲಿತು ಇಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಿದೆ. ಕಠಿಣ ಪರಿಶ್ರಮ ಹಾಗೂ ಸಾಧಿಸಬೇಕೆಂಬ ಛಲವಿದ್ದರೆ ಏನನ್ನೂ ಸಾಧಿಸಬಹುದು” ಎಂದು ವಿದ್ಯಾರ್ಥಿಗಳಿಗೆ ಸ್ಫೂರ್ತಿಯ ಮಾತುಗಳನ್ನಾಡಿದರು.

ಮೌಲ್ಯಯುತ ಶಿಕ್ಷಣಕ್ಕೆ ಒತ್ತು:
ಅಧ್ಯಕ್ಷೀಯ ನುಡಿಗಳನ್ನಾಡಿದ ಅತಿ ವಂದನೀಯ ಗುರು ವಾಲ್ಟರ್ ಡಿಸೋಜ ಅವರು, ವಿದ್ಯಾರ್ಥಿಗಳ ಪ್ರತಿಭೆಯ ಅನಾವರಣಕ್ಕೆ ಇಂತಹ ವೇದಿಕೆಗಳು ಪೂರಕವಾಗಿವೆ ಎಂದರಲ್ಲದೆ, ಮೌಲ್ಯಗಳು ಹಾಗೂ ಕಠಿಣ ಪರಿಶ್ರಮ ಯಶಸ್ಸಿನ ಮೆಟ್ಟಿಲುಗಳಾಗಿವೆ ಎಂದು ತಿಳಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿ ಅತಿಥಿಗಳನ್ನು ಸ್ವಾಗತಿಸಿದ ಪಾದುವ ಕಾಲೇಜ್ ಆಫ್ ಕಾಮರ್ಸ್ ಆ್ಯಂಡ್ ಮ್ಯಾನೇಜ್ಮೆಂಟ್ನ ಪ್ರಾಂಶುಪಾಲರು ಹಾಗೂ ಕ್ಯಾಂಪಸ್ ಡೈರೆಕ್ಟರ್ ವಂದನೀಯ ಗುರು ಅರುಣ್ ವಿಲ್ಸನ್ ಲೋಬೋ ಅವರು, ಪ್ರಾಥಮಿಕ, ಪ್ರೌಢ, ಪದವಿ ಪೂರ್ವ ಹಾಗೂ ಪದವಿ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರೆಲ್ಲರೂ ಒಂದಾಗಿ ಆಚರಿಸುವ ಈ ಸಂಭ್ರಮ ಪಾದುವ ಸಂಸ್ಥೆಯ ವೈಶಿಷ್ಟ್ಯವಾಗಿದೆ ಎಂದರು.

ವೇದಿಕೆಯಲ್ಲಿ ಬೆಂದೂರು ಚರ್ಚಿನ ಉಪಾಧ್ಯಕ್ಷ ಶ್ರೀ ದೀಪಕ್ ರಂಜನ್ ಡಿಸೋಜ, ಕಾರ್ಯದರ್ಶಿ ಶ್ರೀ ರಾಯ್ಸ್ಟನ್ ಜೆ. ಎಂ. ಫರಾಯಸ್, ಪಾದುವ ಶಾಲೆಯ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಡೆನಿಸ್ ಲೋಬೋ, ಪದವಿ ಪೂರ್ವ ಕಾಲೇಜು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀ ಆಕಾಶ್ ಎಂ.ಪಿ., ಪಾದುವ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಪ್ರೊ. ರೋಶನ್ ವಿನ್ನಿ ಸಾಂತುಮಯೋರ್, ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೋಸಿನ ಡಿಸೋಜ, ಇಂಗ್ಲಿಷ್ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಮೋಲಿ ಡಿಸೋಜ ಹಾಗೂ ವಿವಿಧ ವಿಭಾಗಗಳ ವಿದ್ಯಾರ್ಥಿ ನಾಯಕರು ಉಪಸ್ಥಿತರಿದ್ದರು.

ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ರೋಸಿನ ಡಿಸೋಜ ವಂದಿಸಿದರು. ಪಾದುವ ಕಾಲೇಜಿನ ಪ್ರಾಧ್ಯಾಪಕಿ ಶ್ರೀಮತಿ ಝೀನ ಕರ್ನೆಲಿಯೊ ಕಾರ್ಯಕ್ರಮ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು, ಸ್ಪರ್ಧೆಗಳು, ಶಾಲಾ ವಾರ್ಷಿಕೋತ್ಸವ ಜರುಗಿದವು. ಆಕರ್ಷಕ ಆಟಗಳು ಮತ್ತು ವಿವಿಧ ಬಗೆಯ ಆಹಾರ ಮಳಿಗೆಗಳು (ಫುಡ್ ಸ್ಟಾಲ್ಗಳು) ಸಂಭ್ರಮಕ್ಕೆ ಮೆರುಗು ನೀಡಿದವು.



















