ಮಂಗಳೂರು: ಗ್ರಾಮೀಣ ಭಾಗದ ಪರಿಶಿಷ್ಟ ಜಾತಿಯ ರೈತರು ಹಾಗೂ ಮಹಿಳೆಯರ ಆರ್ಥಿಕ ಸಬಲೀಕರಣ, ಪೌಷ್ಟಿಕ ಆಹಾರ ಭದ್ರತೆ ಮತ್ತು ಸ್ವಾವಲಂಬಿ ಜೀವನೋಪಾಯಕ್ಕೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮದಲ್ಲಿ ಎರಡು ದಿನಗಳ ವಿಶೇಷ ಕೋಳಿ ಸಾಕಾಣಿಕೆ ತರಬೇತಿ ಹಾಗೂ ಕೋಳಿ ಮರಿಗಳ ವಿತರಣಾ ಕಾರ್ಯಕ್ರಮ ವನ್ನು ಆಯೋಜಿಸಲಾಗಿತ್ತು.

ದಕ್ಷಿಣ ಕನ್ನಡ ಕೃಷಿ ವಿಜ್ಞಾನ ಕೇಂದ್ರ (KVK), ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಅಖಿಲ ಭಾರತ ಸಂಯೋಜಿತ ಕೋಳಿ ತಳಿ ಸಂಶೋಧನಾ ಯೋಜನೆ (AICRP) ಹಾಗೂ ಬೀದರ್‌ನ ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ (KVAFSU) ಇವುಗಳ ಸಂಯುಕ್ತ ಸಹಯೋಗದಲ್ಲಿ ನವೆಂಬರ್ 20 ಮತ್ತು 21ರಂದು ಈ ಕಾರ್ಯಕ್ರಮ ನಡೆಯಿತು.

ಹಿತ್ತಲ ಕೋಳಿ ಸಾಕಾಣಿಕೆಯ ಮಹತ್ವ:
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ದಕ್ಷಿಣ ಕನ್ನಡ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥ ಡಾ. ಟಿ.ಜೆ. ರಮೇಶ ಮಾತನಾಡಿ, “ಗ್ರಾಮೀಣ ಜನರ ಜೀವನೋಪಾಯ ಸುಧಾರಣೆ, ಕುಟುಂಬಗಳಿಗೆ ಪೌಷ್ಟಿಕ ಆಹಾರ ಭದ್ರತೆ ಒದಗಿಸುವುದು ಹಾಗೂ ರೈತರ ಆದಾಯ ಹೆಚ್ಚಿಸುವಲ್ಲಿ ವೈಜ್ಞಾನಿಕ ಹಿತ್ತಲ ಕೋಳಿ ಸಾಕಾಣಿಕೆ ಪ್ರಮುಖ ಪಾತ್ರ ವಹಿಸುತ್ತದೆ. ಕಡಿಮೆ ಬಂಡವಾಳದಲ್ಲಿ ಹೆಚ್ಚಿನ ಲಾಭ ಗಳಿಸಲು ಇದೊಂದು ಉತ್ತಮ ಉಪಕಸುಬಾಗಿದೆ” ಎಂದು ಹೇಳಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ವಿಜ್ಞಾನಿ ಡಾ. ಧರಣೇಶ ಎನ್.ಕೆ., “ಕೃಷಿಯೊಂದಿಗೆ ಕೋಳಿ ಸಾಕಾಣಿಕೆಯನ್ನು ಅಳವಡಿಸಿಕೊಳ್ಳುವುದರಿಂದ ಗ್ರಾಮೀಣ ಕುಟುಂಬಗಳಿಗೆ ನಿರಂತರವಾಗಿ ಹೆಚ್ಚುವರಿ ಆದಾಯ ಲಭಿಸುತ್ತದೆ” ಎಂದರು. ಇದೇ ವೇಳೆ ಅವರು ಗ್ರಾಮೀಣ ಪರಿಸರಕ್ಕೆ ಹೊಂದಿಕೊಳ್ಳುವ ಗಿರಿರಾಜ, ಗಿರಿರಾಣಿ, ಸ್ವರ್ಣಧಾರ, ರಾಜಾ-I ಹಾಗೂ ರಾಜಾ-II ಮುಂತಾದ ಸುಧಾರಿತ ಕೋಳಿ ತಳಿಗಳ ವಿಶೇಷತೆಗಳ ಕುರಿತು ಮಾಹಿತಿ ನೀಡಿದರು.

ಎರಡು ದಿನಗಳ ತಾಂತ್ರಿಕ ತರಬೇತಿ:
ಗೋಳ್ತಮಜಲು ಗ್ರಾಮ ವ್ಯಾಪ್ತಿಯ 50 ಪರಿಶಿಷ್ಟ ಜಾತಿಯ ರೈತರು ತರಬೇತಿಯಲ್ಲಿ ಪಾಲ್ಗೊಂಡಿದ್ದರು. ಮೊದಲ ದಿನ ಸುಧಾರಿತ ಕೋಳಿ ತಳಿಗಳ ಪರಿಚಯ, ವೈಜ್ಞಾನಿಕ ವಸತಿ (ಗೂಡು) ವ್ಯವಸ್ಥೆ ಹಾಗೂ ಕಡಿಮೆ ಖರ್ಚಿನ ಆಹಾರ ನಿರ್ವಹಣೆಯ ಕುರಿತು ತರಬೇತಿ ನೀಡಲಾಯಿತು.

ಎರಡನೇ ದಿನ ಕೋಳಿಗಳಿಗೆ ಬರುವ ಪ್ರಮುಖ ಸಾಂಕ್ರಾಮಿಕ ರೋಗಗಳು, ಲಸಿಕಾ ಕ್ರಮಗಳು, ರೋಗ ನಿಯಂತ್ರಣ ಹಾಗೂ ಜೈವಿಕ ಭದ್ರತಾ ಕ್ರಮಗಳ ಕುರಿತು ಪ್ರಾಯೋಗಿಕ ಮಾಹಿತಿ ನೀಡಲಾಯಿತು. ಕೋಯಿಲ ಪಶುವೈದ್ಯಕೀಯ ಮಹಾವಿದ್ಯಾಲಯದ ಸಹಾಯಕ ಪ್ರಾಧ್ಯಾಪಕರಾದ ಡಾ. ಹರಿಣಿ ಕೆ.ಆರ್., ಡಾ. ರಶ್ಮಿ ಕೆ.ಎಂ. ಹಾಗೂ ಡಾ. ತೇಜಸ್ವಿನಿ ಎಂ.ಪಿ. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.

1,000 ಮರಿಗಳ ವಿತರಣೆ:
ಸಮಾರೋಪ ಸಮಾರಂಭದಲ್ಲಿ ಗೋಳ್ತಮಜಲು ಆಶೀರ್ವಾದ ಸಂಜೀವಿನಿ ಒಕ್ಕೂಟದ ಸಹಕಾರದೊಂದಿಗೆ ಅಮ್ಟೂರು, ಕೃಷ್ಣಾಪುರ ಕಾಲನಿ, ಮಣಿಮಜಲು ಹಾಗೂ ಬಲ್ಲೆಕೋಡಿ ಗ್ರಾಮಗಳ ಆಯ್ದ 50 ಫಲಾನುಭವಿ ರೈತರಿಗೆ ತಲಾ 20 ಮರಿಗಳಂತೆ ಒಟ್ಟು 1,000 ‘ರಾಜಾ-II’ ಹಾಗೂ ಸ್ಥಳೀಯ ತಳಿಯ ಒಂದು ದಿನದ ಕೋಳಿ ಮರಿಗಳನ್ನು ವಿತರಿಸಲಾಯಿತು. ಬೆಂಗಳೂರಿನ ಪಶುವೈದ್ಯಕೀಯ ಮಹಾವಿದ್ಯಾಲಯದ ಕೋಳಿ ವಿಜ್ಞಾನ ವಿಭಾಗದ AICRP ಯೋಜನೆಯ ಪ್ರಧಾನ ವಿಜ್ಞಾನಿ ಡಾ. ನವೀನ್ ಕುಮಾರ್ ಜಿ.ಎಸ್. ಅವರು ಕೋಳಿ ಮರಿಗಳ ಪೂರೈಕೆ ಹಾಗೂ ಕಾರ್ಯಕ್ರಮಕ್ಕೆ ಅಗತ್ಯ ಆರ್ಥಿಕ ನೆರವು ಒದಗಿಸಿದರು.

ಕಾರ್ಯಕ್ರಮದಲ್ಲಿ ಕೆವಿಕೆ ವಿಜ್ಞಾನಿಗಳಾದ ಡಾ. ಮಲ್ಲಿಕಾರ್ಜುನ, ಡಾ. ಕೇದಾರನಾಥ, ಗೋಳ್ತಮಜಲು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಸುನಿಲ್ ಕುಮಾರ್, ಗ್ರಾ.ಪಂ. ಸದಸ್ಯೆ ಪ್ರೇಮ, ತಾಲೂಕು ಭಾರತಾಂಬೆ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾ ಜಿ. ಕೊಟ್ಟಾರಿ ಹಾಗೂ NRLM ಸಿಬ್ಬಂದಿ ಉಪಸ್ಥಿತರಿದ್ದರು. ಅರ್ಹ ರೈತರನ್ನು ಸಂಘಟಿಸಿ ಕಾರ್ಯಕ್ರಮಕ್ಕೆ ಕರೆತರುವಲ್ಲಿ ಕೃಷಿ ಸಖಿ ಪುಷ್ಪಾವತಿ ಹಾಗೂ ಪಶುಸಖಿ ಸರಿತಾ ಸಹಕರಿಸಿದರು.

