ಮಂಗಳೂರು: ನಗರ ಹೊರವಲಯದ ಬೈಕಂಪಾಡಿಯ ಮೀನಕಳಿಯ ಬಳಿ 12 ವರ್ಷಗಳ ಹಿಂದೆ ಮೀನುಗಾರ ಮುಖಂಡ ಗಂಗಾಧರ ಪಾಂಗಳ (55) ಎಂಬವರನ್ನು ವಾಹನ ಢಿಕ್ಕಿ ಪಡಿಸಿ ಕೊಲೆ ಮಾಡಿದ ಪ್ರಕರಣದ ನಾಲ್ಕು ಮಂದಿ ಆರೋಪಿಗಳಿಗೆ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಸತೀಶ್ ಬೈಕಂಪಾಡಿ (58), ಹರೀಶ್ ಬೈಕಂಪಾಡಿ (60), ಭಾಸ್ಕರ್ ಬೈಕಂಪಾಡಿ (61) ಪುಷ್ಪರಾಜ್ (47) ಜೀವಾವಧಿ ಶಿಕ್ಷೆಗೊಳಗಾದ ಆರೋಪಿಗಳು ಎಂದು ತಿಳಿದುಬಂದಿದೆ.
ಬೈಕಂಪಾಡಿಯ ಮೊಗವೀರ ಮಹಾಸಭಾದ ಅಧ್ಯಕ್ಷರಾಗಿದ್ದ ಸತೀಶ್ ಬೈಕಂಪಾಡಿಯು ಮೀನಕಳಿಯದ ಗೋಪಾಲ ಕೃಷ್ಣ ಭಜನಾ ಮಂದಿರದ ಪುನಃ ನಿರ್ಮಾಣ ಕಾರ್ಯ ಮತ್ತು ಹೈಸ್ಕೂಲ್ ಕಟ್ಟಡದ ನಿರ್ಮಾಣ ಕಾರ್ಯಗಳ ಅಧ್ಯಕ್ಷರೂ ಆಗಿದ್ದರು. ಸತೀಶ್ ಬೈಕಂಪಾಡಿ ಮತ್ತು ಭಾಸ್ಕರ್ ಸೇರಿ ಅದರ ವಂತಿಗೆ ಹಣವನ್ನು ದುರುಪಯೋಗ ಮಾಡಿದ್ದಾರೆ ಎಂದು ಆರೋಪಿಸಿ ಮೊಗವೀರ ಮಹಾ ಸಭಾದ ಸದಸ್ಯತ್ವದಿಂದ ಅಮಾನತು ಪಡಿಸಲು ಕಾರಣರಾಗಿದ್ದಾರೆ ಎಂದು ಗಂಗಾಧರ ಪಾಂಗಳ ಮೇಲೆ ದ್ವೇಷ ಸಾಧಿಸಿದ್ದರು ಎಂದು ಆರೋಪಿಸಲಾಗಿತ್ತು. ಗಂಗಾಧರ ಪಾಂಗಳರನ್ನು ಕೊಲೆ ಮಾಡುವ ಉದ್ದೇಶದಿಂದ 2014ರ ಮೇ ತಿಂಗಳಲ್ಲಿ ಬೈಕಂಪಾಡಿ-ಮೀನಕಳಿಯ ರಸ್ತೆಯ ಬದಿಯ ಭಾಸ್ಕರ್‌ಗೆ ಸೇರಿದ ಮುಚ್ಚಿದ ಗೋದಾಮಿನ ಬಳಿ ಪರಿಚಿತ ಪುಷ್ಪರಾಜ್ ಎಂಬಾತನೊಂದಿಗೆ ಸೇರಿ ಸಂಚು ರೂಪಿಸಿದ್ದು, ಗಂಗಾಧರ್‌ರ ಚಲನವಲನಗಳ ಬಗ್ಗೆ ಸತೀಶ್ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಭಾಸ್ಕರ ಮಾಹಿತಿ ಸಂಗ್ರಹಿಸಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿತ್ತು.
ಬೈಕಂಪಾಡಿ ಮೀನಕಳಿಯ ರಸ್ತೆಯಲ್ಲಿ ಗಂಗಾಧರ ಪಾಂಗಾಳ ಸವಾರಿ ಮಾಡುತ್ತಿದ್ದ ಸ್ಕೂಟರಿನ ಹಿಂಬದಿಗೆ ಬೊಲೆರೋ ವಾಹನವನ್ನು ಢಿಕ್ಕಿ ಪಡಿಸಿ ಆರೋಪಿ ಪುಷ್ಪರಾಜ್ ಪರಾರಿಯಾಗಿದ್ದ. ಕೊಲೆ ಮಾಡಿರುವುದನ್ನು ಖಚಿತಪಡಿಸಲು ಸತೀಶ್ ಬೈಕಂಪಾಡಿ ಮತ್ತು ಹರೀಶ್ ಬೈಕಂಪಾಡಿ ಹಾಗೂ ಭಾಸ್ಕರ್ ಪ್ರತ್ಯೇಕವಾಗಿ ಎರದು ಕಾರಿನಲ್ಲಿ ಹಿಂಬಾಲಿಸಿಕೊಂಡು ಬಂದಿದ್ದರು. ಅಲ್ಲದೆ ಸಾಕ್ಷ್ಯ ನಾಶ ಮಾಡುವ ಸಲುವಾಗಿ ಕೊಲೆ ಮಾಡಲು ಉಪಯೋಗಿಸಿದ ವಾಹನವನ್ನು ಅತ್ತಾವರದ ಗ್ಯಾರೇಜಿನಲ್ಲಿ ಸುಳ್ಳು ಹೇಳಿ ರಿಪೇರಿಗಾಗಿ ಇಟ್ಟಿದ್ದರು. ಆರಂಭದಲ್ಲಿ ಇದೊಂದು ಅಪಘಾತ ಎಂದು ಪ್ರಕರಣ ದಾಖಲಾಗಿತ್ತು. ಆದರೆ ಬಳಿಕ ಪೂರ್ವ ನಿಯೋಜಿತ ಅಪಘಾತ ಕೊಲೆ ಎಂದು ಶಂಕಿಸಲಾಗಿತ್ತು.
ಈ ಬಗ್ಗೆ ಪಣಂಬೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಪೊಲೀಸ್ ನಿರೀಕ್ಷಕ ಎನ್.ಆರ್. ಮುಕ್ರಿ ಪ್ರಾಥಮಿಕ ತನಿಖೆ ನಡೆಸಿದ್ದರು. ಬಳಿಕ ತನಿಖಾಧಿಕಾರಿಗಳಾದ ರವೀಶ್ ನಾಯಕ್, ಭಾಸ್ಕರ ರೈ ತನಿಖೆ ನಡೆಸಿದ್ದು, ಲೋಕೇಶ್ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿ ವಾದ ಪ್ರತಿವಾದಗಳನ್ನು ಆಲಿಸಿದ ಮಂಗಳೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ (ವಿಶೇಷ) ನ್ಯಾಯಾಲಯದ ನ್ಯಾಯಾಧೀಶ ಜಗದೀಶ ವಿ.ಎನ್. ಜು.21ರಂದು ಆರೋಪಿತರನ್ನು ತಪ್ಪಿತಸ್ಥರೆಂದು ಪ್ರಕಟಿಸಿ ಜು.27ರಂದು ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.
ಸರಕಾರದ ಪರವಾಗಿ ಜ್ಯೋತಿ ಪ್ರಮೋದ ನಾಯಕ ವಾದಿಸಿದ್ದರು. ಆರೋಪಿ ಸತೀಶ್ ಬೈಕಂಪಾಡಿ, ಹರೀಶ್ ಬೈಕಂಪಾಡಿ, ಭಾಸ್ಕರ್ ಬೈಕಂಪಾಡಿ ವಿರುದ್ಧ ಭಾ.ದಂ.ಸಂ ಕಲಂ: 302 ಜತೆ 120(ಬಿ), 109, 34ರಡಿ ಜೀವಾಧಿ ಶಿಕ್ಷೆ ಮತ್ತು ತಲಾ 15,000 ರೂ. ದಂಡ ಪಾವತಿ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷಗಳ ಸಾದಾ ಸಜೆ. ಪುಷ್ಪರಾಜ್ ವಿರುದ್ಧ ಭಾ.ದಂ.ಸಂ. ಕಲಂ: 302ಜತೆ 120(ಬಿ), 34 ರಡಿ ಜೀವಾಧಿ ಶಿಕ್ಷೆ ಮತ್ತು 15,000 ರೂ. ದಂಡ ಪಾವತಿ ಹಾಗೂ ದಂಡ ಪಾವತಿಸಲು ತಪ್ಪಿದಲ್ಲಿ 1 ವರ್ಷಗಳ ಸಾದಾ ಸಜೆ ವಿಧಿಸಿ ನ್ಯಾಯಧೀಶರು ತೀರ್ಪು ನೀಡಿದ್ದಾರೆ.
ಅಲ್ಲದೆ ನಾಲ್ವರಿಗೂ ಕಲಂ: 201 ಜೊತೆ 34 ರಡಿ 2 ವರ್ಷಗಳ ಕಾಲ ಸಾದಾ ಶಿಕ್ಷೆ ಮತ್ತು ತಲಾ 1,000 ರೂ. ದಂಡ ಪಾವತಿ, ದಂಡ ಪಾವತಿ ತಪ್ಪಿದಲ್ಲಿ 1 ವರ್ಷಗಳ ಸಾದಾ ಶಿಕ್ಷೆ ವಿಧಿಸಲಾಗಿದೆ. ಎಲ್ಲಾ ಶಿಕ್ಷೆಗಳನ್ನು ಏಕಕಾಲಕ್ಕೆ ಅನುಭವಿಸಲು ನ್ಯಾಯಾಧೀಶರು ಆದೇಶಿಸಿದ್ದಾರೆ. ದಂಡ ಮೊತ್ತ 64,000 ರೂ.ನಲ್ಲಿ 50,000 ರೂ. ಮೃತರ ಪುತ್ರಿಗೆ ನೀಡಬೇಕು. ಉಳಿದ 14,000 ರೂ.ವನ್ನು ಸರಕಾರಕ್ಕೆ ಮುಟ್ಟುಗೋಲು ಹಾಕಲು ಆದೇಶಿಸಿದ್ದಾರೆ. ಕೃತ್ಯಕ್ಕೆ ಬಳಸಿದ ವಾಹನಗಳನ್ನು 30 ದಿನದೊಳಗೆ ನ್ಯಾಯಾಲಯಕ್ಕೆ ಒಪ್ಪಿಸಲು ಆದೇಶಿಸಲಾಗಿದೆ. *ಪ್ರಕರಣದ ಅರೋಪಿಗಳು ಜಿಲ್ಲಾ ನ್ಯಾಯಾಲಯ ಪ್ರಕರಣದ ವಿಚಾರಣೆ ಕೈಗೆತ್ತಿಕೊಳ್ಳದಂತೆ ತಡೆಯಾಜ್ಞೆ ತಂದಿ ದ್ದರು. ಇದರಿಂದ 2025ರವರೆಗೆ ವಿಚಾರಣೆಯೇ ಆರಂಭವಾಗಿರಲಿಲ್ಲ. ಒಂದನೇ ಆರೋಪಿಯಾಗಿದ್ದ ಸತೀಶ್ ಬೈಕಂಪಾಡಿ 6 ತಿಂಗಳು ಪೊಲೀಸರ ಕೈಗೆ ಸಿಗದೆ ತಲೆ ಮರೆಸಿಕೊಂಡಿದ್ದ.

