LATEST NEWS

ಬಲ್ಮಠ ಸರಕಾರಿ ಶಾಲೆಯ 90 ವಿದ್ಯಾರ್ಥಿಗಳಿಗೆ ಮಕ್ಕಳ ದಿನಾಚರಣೆ ಕೊಡುಗೆ: ಉಚಿತ ಬಣ್ಣದ ಬಟ್ಟೆ ವಿತರಣೆ

ಮಂಗಳೂರು: ಯಶಸ್ವಿನಿ ಮಹಿಳಾ ಮಂಡಳಿ, ಬಲ್ಮಠ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಬಲ್ಮಠ (ಮಂಗಳೂರು ಉತ್ತರ) ಇವರ ಸಂಯುಕ್ತ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಪ್ರಯುಕ್ತ ಶಾಲೆಯ ಸುಮಾರು 90 ವಿದ್ಯಾರ್ಥಿಗಳಿಗೆ ಉಚಿತವಾಗಿ ಬಣ್ಣದ ಬಟ್ಟೆಗಳನ್ನು ವಿತರಿಸಲಾಯಿತು.

ಈ ಕಾರ್ಯಕ್ರಮಕ್ಕೆ ದಾನಿಗಳಾದ ಪಿ.ಕೆ. ಟೆಕ್ಸ್‌ಟೈಲ್ ಮಾಲಕರಾದ ಶ್ರೀಮತಿ ಗೌತಮಿ ಚಿದಾನಂದ, ಗಾಯತ್ರಿ ಟೆಕ್ಸ್‌ಟೈಲ್ ಮಾಲಕರಾದ ಶ್ರೀ ರವಿ, ಮದನ್ ಟೆಕ್ಸ್‌ಟೈಲ್ ಮಾಲಕರಾದ ಶ್ರೀ ಕುಮಾರೇಶ್ ಹಾಗೂ ಯಶಸ್ವಿನಿ ಮಹಿಳಾ ಮಂಡಳಿ ಬಲ್ಮಠ ಇವರ ಸಹಯೋಗದಲ್ಲಿ ಮಕ್ಕಳಿಗೆ ಉಡುಪುಗಳನ್ನು ನೀಡಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಯಶಸ್ವಿನಿ ಮಹಿಳಾ ಮಂಡಳಿಯ ಅಧ್ಯಕ್ಷೆ ಶ್ರೀಮತಿ ಚಂಚಲ ತೇಜೋಮಯ ಮಾತನಾಡಿ, “ಮಂಡಳಿಯ 25ನೇ ವರ್ಷದ ಬೆಳ್ಳಿ ಹಬ್ಬದ ಪ್ರಯುಕ್ತ ಈ ಸೇವಾ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ” ಎಂದರು. ಇದೇ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯಚಟುವಟಿಕೆ ಗಳು, ನಡೆದು ಬಂದ ದಾರಿ ಹಾಗೂ ಮಕ್ಕಳ ದಿನಾಚರಣೆಯ ಮಹತ್ವದ ಕುರಿತು ವಿವರಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶ್ರೀ ಶೇಕ್ ಹಬ್ಬ ಸಂದರ್ಭೋಚಿತವಾಗಿ ಮಾತನಾಡಿದರು. ಸರಕಾರಿ ಹೆಣ್ಮಕ್ಕಳ ಪ್ರೌಢಶಾಲೆಯ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶರ್ಮಿಳಾ ಶೆಟ್ಟಿ ಶುಭಹಾರೈಸಿದರು.

ಕಾರ್ಯಕ್ರಮದಲ್ಲಿ ಮಂಡಳಿಯ ಗೌರವಾಧ್ಯಕ್ಷೆ ನಿರ್ಮಲಾ ಶೆಟ್ಟಿ, ಉಪಾಧ್ಯಕ್ಷೆ ರಮಣಿ ಬೋಳೂರು, ಕಾರ್ಯದರ್ಶಿ ನಾಗವೇಣಿ ಪಿ., ಹಳೆ ವಿದ್ಯಾರ್ಥಿ ಸೂರ್ಯಕಾಂತ್ ಶೇಟ್, ಶಾಲಾ ಶಿಕ್ಷಕಿಯರಾದ ಅನಸೂಯ, ಶುಭಶ್ರೀ, ಮಮತಾ, ಅಕ್ಷತಾ ಹಾಗೂ ಮಹಿಳಾ ಮಂಡಳಿಯ ಸದಸ್ಯರಾದ ರೇಣು ಗಜೇಂದ್ರ, ಅನಿತಾ ಶೇಟ್, ಗೀತಾ ಶೇಟ್, ಶಾಲಿನಿ ವಿಜಯ್, ಸುಮಲತಾ, ಶೋಭಾ, ಶ್ರೀರಂಜಿನಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿದ್ಯಾರ್ಥಿನಿಯರಾದ ಯೋಗಮಾಲಾ ಮತ್ತು ಲಿಖಿತಾ ಪ್ರಾರ್ಥಿಸಿದರು. ಮೌನಶ್ರೀ ಸ್ವಾಗತಿಸಿದರು. ಶಾಲಾ ಮುಖ್ಯೋಪಾಧ್ಯಾಯಿನಿ ಶ್ರೀಮತಿ ಶಶಿಕಲಾ ಧನ್ಯವಾದ ಸಮರ್ಪಿಸಿದರು.

Share News