• Home  
  • ಮಂಗಳೂರು ಧರ್ಮಪ್ರಾಂತ್ಯದ ಶತಮಾನ ಕಂಡ ಹಿರಿಯ ಧರ್ಮಗುರು ವಂ| ಅಲೋಶಿಯಸ್ ಡಿ’ಸೋಜಾ(100) ನಿಧನ; ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಆರು ಬಿಷಪರ ಜತೆಗೆ ಸೇವೆ ಸಲ್ಲಿಸಿದ್ದರು
- HOME

ಮಂಗಳೂರು ಧರ್ಮಪ್ರಾಂತ್ಯದ ಶತಮಾನ ಕಂಡ ಹಿರಿಯ ಧರ್ಮಗುರು ವಂ| ಅಲೋಶಿಯಸ್ ಡಿ’ಸೋಜಾ(100) ನಿಧನ; ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಆರು ಬಿಷಪರ ಜತೆಗೆ ಸೇವೆ ಸಲ್ಲಿಸಿದ್ದರು

ಮಂಗಳೂರು,ಆಗಸ್ಟ್ 7: ಮಂಗಳೂರು ಧರ್ಮಪ್ರಾಂತ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಹಿರಿಯ ಧರ್ಮಗುರು ಶತಾಯುಷಿ ವಂ| ಅಲೋಶಿಯಸ್ ಡಿ’ಸೋಜಾ(100) ಅವರು ಜಪ್ಪುವಿನ ನಿವೃತ್ತ ಧರ್ಮಗುರುಗಳ ನಿವಾಸವಾದ ಸಂತ ಜುಜೆವಾಜ್ ನಿವಾಸದಲ್ಲಿ ಗುರುವಾರ ನಿಧನ ಹೊಂದಿದರು.
ಅವರ ಅಂತ್ಯಕ್ರಿಯೆಯ ವಿಧಿವಿಧಾನಗಳು ಆ.8ರಂದು ಸಂಜೆ 4 ಗಂಟೆಗೆ ಮಂಗಳೂರಿನ ವೇಲೆನ್ಸಿಯಾದಲ್ಲಿರುವ ಸೇಂಟ್ ವಿನ್ಸೆಂಟ್ ಫೆರರ್ ಚರ್ಚ್‌ನಲ್ಲಿ ನಡೆಯಲಿದೆ.

ವಂ| ಅಲೋಶಿಯಸ್ ಡಿ’ಸೋಜಾ ಅವರು ಆಗಸ್ಟ್ 24, 1953ರಂದು ಧರ್ಮಗುರುಗಳಾಗಿ ಸೇವೆ ಆರಂಭಿಸಿ ಸುಮಾರು 72 ವರ್ಷಗಳ ಕಾಲ ಯಾಜಕಾರಾಗಿ ಸೇವೆ ಸಲ್ಲಿಸಿದ್ದಾರೆ. 2025ರ ಜನವರಿ 29ರಂದು ಅವರು ಶತಮಾನೋತ್ಸವ ಆಚರಿಸಿದ್ದರು. ಮಂಗಳೂರು ಧರ್ಮಪ್ರಾಂತ್ಯದಲ್ಲಿ 100 ವರ್ಷ ಪೂರೈಸಿದ ಮೊದಲ ಧರ್ಮಗುರುಗಳೆಂಬ ಹೆಗ್ಗಳಿಕೆ ಹೊಂದಿದ್ದರು. ಅವರು ತಮ್ಮ ನಿವೃತ್ತಿಯ ನಂತರವೂ ಎರಡು ದಶಕಗಳಿಗೂ ಹೆಚ್ಚು ಕಾಲ ಸೇವೆ ಸಲ್ಲಿಸಿದರು.
1925 ಜನವರಿ 29ರಂದು ಪುತ್ತೂರಿನಲ್ಲಿ ಮಾರ್ಟಿನ್ ಮತ್ತು ಪಿಯಾದ್ ಡಿ’ಸೋಜಾ ದಂಪತಿಯ ಪುತ್ರರಾಗಿ ಜನಿಸಿದ ಅವರ ಜೀವನವು ಸರಳತೆ, ಶಿಸ್ತು, ಪ್ರಾರ್ಥನೆಯಿಂದ ಒಳಗೊಂಡಿತ್ತು. 1954ರಲ್ಲಿ ಬಿಜೈ ಚರ್ಚ್‌ನಲ್ಲಿ ಸಹಾಯಕ ಧರ್ಮಗುರುಗಳಾಗಿ ಅವರು ಸೇವೆ ಆರಂಭಿಸಿದರು. ಬಳಿಕ ಅರ್ವ ಚರ್ಚ್ ಹಾಗೂ ಧರ್ಮಾಧ್ಯಕ್ಷರ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಕೊಡಿಯಾಲ್‌ಬೈಲ್ ಪ್ರೆಸ್‌ನ ವ್ಯವಸ್ಥಾಪಕರಾಗಿ, ಪೆಝಾರ್, ಕಿನ್ನಿಗೋಳಿಗಳಲ್ಲಿ ಧರ್ಮಗುರುಗಳಾಗಿ ಸೇವೆ ನೀಡಿದ್ದಾರೆ. ಧರ್ಮಪ್ರಾಂತ್ಯದ ಮೊನ್ಸಿಂಜೋರ್ ಆಗಿಯೂ ಕೂಡ ಸೇವೆ ಸಲ್ಲಿಸಿದ್ದಾರೆ. ಜಪ್ಪು ಸಂತ ಅಂತೋನಿ ಸೇವಾಶ್ರಮದ ನಿರ್ದೇಶಕರಾಗಿ, ಸಂತ ಜೋಸೆಫ್ ಗುರುಮಂದಿರ ಜಪ್ಪುವಿನ ಆಧ್ಯಾತ್ಮಿಕ ನಿರ್ದೇಶಕರಾಗಿಯೂ ಸೇವೆ ನೀಡಿದ್ದಾರೆ. ಮಂಗಳೂರು ಧರ್ಮ ಪ್ರಾಂತ್ಯದಲ್ಲಿ ಆರು ಬಿಷಪರ ಜತೆಗೆ ಸೇವೆ ಸಲ್ಲಿಸಿದ್ದ ಅನುಭವ ಅವರಲ್ಲಿತ್ತು.

Share News

About Us

Lorem ipsum dol consectetur adipiscing neque any adipiscing the ni consectetur the a any adipiscing.

Email Us: [email protected]

Contact: +5-784-8894-678