ಮಂಗಳೂರು, ಜೂನ್ 05: ಮಂಗಳೂರಿನ ಸಾಂಸ್ಕೃತಿಕ ಮತ್ತು ಶೈಕ್ಷಣಿಕ ರಂಗದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಪ್ರತಿಷ್ಠಿತ ಸಂಸ್ಥೆ ‘ಸಂದೇಶ ಫೌಂಡೇಶನ್’ನಲ್ಲಿ ಮಹತ್ವದ ನಾಯಕತ್ವ ಬದಲಾವಣೆಯಾಗಿದೆ. ಸಂಸ್ಥೆಯ ನಿರ್ದೇಶಕರಾಗಿದ್ದ ವಂದನೀಯ ಫಾ. ಸುದೀಪ್ ಪಾಲ್ (MSFS) ಅವರು ತಮ್ಮ ಜವಾಬ್ದಾರಿಗಳನ್ನು ನೂತನ ನಿರ್ದೇಶಕರಾದ ವಂದನೀಯ ಫಾ. ರೋಷನ್ ರೊಸಾರಿಯೊ (OFM) ಅವರಿಗೆ ಅಧಿಕೃತವಾಗಿ ಹಸ್ತಾಂತರಿಸಿದ್ದಾರೆ.

ಈ ವಿದಾಯ ಹಾಗೂ ಸ್ವಾಗತ ಸಮಾರಂಭವು ಜೂನ್ 4ರಂದು ಮಂಗಳೂರಿನ ಸಂದೇಶ ಕಲಾ ಕೇಂದ್ರದಲ್ಲಿ ಅತ್ಯಂತ ವೈಭವದಿಂದ ಜರುಗಿತು.

ಕಾರ್ಯಕ್ರಮವು ಫಾ. ವಾಲ್ಟರ್ ಅಲ್ಬುಕರ್ಕ್ ಸ್ಮಾರಕ ಗಾಯನ ಬಳಗದ ಭಕ್ತಿಪೂರ್ವಕ ಪ್ರಾರ್ಥನಾ ಗೀತೆಯೊಂದಿಗೆ ಆರಂಭವಾಯಿತು. ತದನಂತರ ಶ್ರೀಮತಿ ರೆಮೋನಾ ಪಿರೇರಾ ಮತ್ತು ತಂಡದವರಿಂದ ಆಕರ್ಷಕ ಸ್ವಾಗತ ನೃತ್ಯ ಪ್ರದರ್ಶನ ನಡೆಯಿತು. ಇದೇ ವೇಳೆ ವೇದಿಕೆಯಲ್ಲಿದ್ದ ಗಣ್ಯರನ್ನು ಗೌರವಪೂರ್ವಕ ವಾಗಿ ಸತ್ಕರಿಸಲಾಯಿತು.

ಸಂದೇಶ ಫೌಂಡೇಶನ್‌ನ ಟ್ರಸ್ಟಿ ಶ್ರೀ ರಾಯ್ ಕ್ಯಾಸ್ಟೆಲಿನೊ ಅವರು ಸ್ವಾಗತ ಭಾಷಣ ಮಾಡಿ, ನೆರೆದಿದ್ದವರನ್ನು ಬರಮಾಡಿಕೊಂಡರು. ತದನಂತರ ಸಾಂಪ್ರದಾಯಿಕ ದೀಪ ಪ್ರಜ್ವಲನೆ ಮಾಡುವ ಮೂಲಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಯನ್ನು ಅಧಿಕೃತವಾಗಿ ನೆರವೇರಿಸಲಾಯಿತು.

ವೇದಿಕೆಯಲ್ಲಿ ಬಳ್ಳಾರಿ ಧರ್ಮಪ್ರಾಂತ್ಯದ ಬಿಷಪ್ ಹಾಗೂ ಸಂದೇಶ ಫೌಂಡೇಶನ್ ಅಧ್ಯಕ್ಷರಾದ ಆತಿ ವಂದನೀಯ . ಡಾ. ಹೆನ್ರಿ ಡಿಸೋಜಾ, ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಹಾಗೂ ಕೆಆರ್‌ಸಿಬಿಸಿ ಸಾಮಾಜಿಕ ಸಂವಹನ ಆಯೋಗದ ಉಪಾಧ್ಯಕ್ಷರಾದ ಆತಿ ವಂದನೀಯ ಡಾ. ಪೀಟರ್ ಪಾಲ್ ಸಲ್ದಾನ್ಹಾ, ಉಡುಪಿ ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಹಾಗೂ ಟ್ರಸ್ಟಿ ಆತಿ ವಂದನೀಯ ಡಾ. ಜೆರಾಲ್ಡ್ ಐಸಾಕ್ ಲೋಬೋ,ಕಾಪುಚಿನ್ ಪ್ರಾಂತಾಧ್ಯಕ್ಷ ವಂದನೀಯ . ಫಾ. ರಾಬಿನ್ ವಿಕ್ಟರ್ ಡಿಸೋಜಾ, ಸಂದೇಶ ಟ್ರಸ್ಟಿ ಶ್ರೀ ರೊಯ್ ಕ್ಯಾಸ್ತ ಳಿನೋ ಕಾರ್ಯಕ್ರಮ ಸಂಯೋಜಕ ಶ್ರೀ ಸ್ಟ್ಯಾನಿ ಲೋಬೋ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಸ್ಟ್ಯಾನಿ ಅಲ್ವಾರಿಸ್, ನಿರ್ಗಮಿತ ನಿರ್ದೇಶಕ ರೆವ. ಫಾ. ಸುದೀಪ್ ಪಾಲ್ ಹಾಗೂ ನೂತನ ನಿರ್ದೇಶಕ ರೆವ. ಫಾ. ರೋಷನ್ ರೊಸಾರಿಯೊ ಉಪಸ್ಥಿತರಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ವಂದನೀಯ . ಡಾ. ಹೆನ್ರಿ ಡಿಸೋಜಾ ಅವರು ಈ ಸಂದರ್ಭ ಭಾವನಾತ್ಮಕ ಹಾಗೂ ಮಹತ್ವದ್ದಾಗಿದೆ ಎಂದು ಹೇಳಿದರು. ಫಾ. ಸುದೀಪ್ ಪಾಲ್ ಅವರ ಸಂವಹನ ಕೌಶಲ್ಯ, ಪ್ರೇರಣಾದಾಯಕ ವ್ಯಕ್ತಿತ್ವ, ಶಾಂತ ಸ್ವಭಾವ ಹಾಗೂ ಸೇವಾ ಮನೋಭಾವವನ್ನು ಪ್ರಶಂಸಿಸಿದರು. ಅವರ ನಾಲ್ಕು ವರ್ಷಗಳ ಸೇವೆಗೆ ಕೃತಜ್ಞತೆ ಸಲ್ಲಿಸಿ, ಮುಂದಿನ ಕಾರ್ಯಗಳಿಗೆ ಶುಭ ಹಾರೈಸಿದರು. ಜೊತೆಗೆ ನೂತನ ನಿರ್ದೇಶಕರಾದ ಫಾ. ರೋಷನ್ ರೊಸಾರಿಯೊ ಅವರಿಗೆ ಶುಭಾಶಯಗಳನ್ನು ಕೋರಿದರು.

ನಿರ್ಗಮಿತ ನಿರ್ದೇಶಕ ಫಾ. ಸುದೀಪ್ ಪಾಲ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು. ಶ್ರೀಮತಿ ಕಾಂಸೆಪ್ಟಾ ಫೆರ್ನಾಂಡಿಸ್ (ಅಲ್ವಾ) ಅವರು ಅವರ ಸೇವೆ ಹಾಗೂ ಸಾಧನೆಗಳನ್ನು ವಿವರಿಸುವ ಅಭಿನಂದನಾ ಪತ್ರವನ್ನು ವಾಚಿಸಿದರು. ನಂತರ ಮದರ್ ತೆರೆಸಾ ವಿಚಾರ ವೇದಿಕೆ, ಕೊಂಕಣಿ ಸಾಹಿತ್ಯ ಅಕಾಡೆಮಿ, ಸಂತ ಅಲೋಶಿಯಸ್ ವಿಶ್ವವಿದ್ಯಾಲಯದ ಕೊಂಕಣಿ ವಿದ್ಯಾರ್ಥಿಗಳು, ಫಾ. ವಾಲ್ಟರ್ ಅಲ್ಬುಕರ್ಕ್ ಸ್ಮಾರಕ ಗಾಯನ ಬಳಗ ಸೇರಿದಂತೆ ಹಲವು ಸಂಘಟನೆಗಳು ಪುಷ್ಪಗುಚ್ಛ ನೀಡಿ ಅಭಿನಂದನೆ ಸಲ್ಲಿಸಿದವು.

ತಮ್ಮ ಪ್ರತಿಕ್ರಿಯೆಯಲ್ಲಿ ಫಾ. ಸುದೀಪ್ ಪಾಲ್ ಅವರು ಕಳೆದ ನಾಲ್ಕು ವರ್ಷಗಳ ಸೇವಾವಧಿಯಲ್ಲಿ ದೇವರ ಮಾರ್ಗದರ್ಶನ ಮತ್ತು ಶಕ್ತಿಗೆ ಕೃತಜ್ಞತೆ ಸಲ್ಲಿಸಿದರು. ಹಿತೈಷಿಗಳು, ವಿದ್ಯಾರ್ಥಿಗಳು, ಸಿಬ್ಬಂದಿ ಹಾಗೂ ಸಹಯೋಗಿಗಳ ಬೆಂಬಲದಿಂದ ಫೌಂಡೇಶನ್‌ನ ಗುರಿಗಳನ್ನು ಸಾಧಿಸಲು ಸಾಧ್ಯವಾಯಿತು ಎಂದು ಹೇಳಿದರು. ಕಟ್ಟಡ ನವೀಕರಣ, ವಿದ್ಯಾರ್ಥಿಗಳ ಪ್ರೋತ್ಸಾಹ ಹಾಗೂ ಸಂಸ್ಕೃತಿ ಮತ್ತು ಶಿಕ್ಷಣದ ಅಭಿವೃದ್ಧಿಗೆ ಕೈಗೊಂಡ ವಿವಿಧ ಯೋಜನೆಗಳನ್ನು ಸ್ಮರಿಸಿದರು. ಏಕತೆ ಮತ್ತು ಸಮೂಹ ಪ್ರಯತ್ನದ ಫಲವಾಗಿ ಸಂದೇಶ ಫೌಂಡೇಶನ್ ಇಂದು ಉತ್ತಮ ಸ್ಥಾನದಲ್ಲಿದೆ ಎಂದು ಹೇಳಿದರು.

ನೂತನ ನಿರ್ದೇಶಕ ಫಾ. ರೋಷನ್ ರೊಸಾರಿಯೊ ಅವರನ್ನು ಸ್ವಾಗತಿಸಿ ಅಭಿನಂದಿಸಲಾಯಿತು. ವಂದನೀಯ ಡಾ. ಪೀಟರ್ ಪಾಲ್ ಸಲ್ದಾನ್ಹಾ ಅವರು ಫಾ. ರೋಷನ್ ಅವರನ್ನು ಪರಿಚಯಿಸಿ, ಅವರ ಧರ್ಮ ಗುರು ಸೇವೆಯ ಹಲವು ಸಾಧನೆಗಳನ್ನು ಉಲ್ಲೇಖಿಸಿದರು. ಸಂದೇಶ ಫೌಂಡೇಶನ್ ಶ್ರೀಮಂತ ಪರಂಪರೆಯನ್ನು ಹೊಂದಿರುವ ಸಂಸ್ಥೆಯಾಗಿದ್ದು, ಅವರ ನಾಯಕತ್ವದಲ್ಲಿ ಮತ್ತಷ್ಟು ಬೆಳೆಯಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಫಾ. ರೋಷನ್ ರೊಸಾರಿಯೊ ಅವರು, ತಮಗೆ ವಹಿಸಲಾದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಹೇಳಿದರು. ಸಂದೇಶ ಫೌಂಡೇಶನ್‌ನ ಅಭಿವೃದ್ಧಿಗಾಗಿ ಎಲ್ಲರೂ ಒಟ್ಟಾಗಿ ಕೆಲಸ ಮಾಡುವಂತೆ ಕರೆ ನೀಡಿದರು. ಫಾ. ಸುದೀಪ್ ಪಾಲ್ ಅವರ ಸೇವೆಯನ್ನು ಶ್ಲಾಘಿಸಿ, ಅವರು ಆರಂಭಿಸಿದ ಉತ್ತಮ ಕಾರ್ಯಗಳನ್ನು ಮುಂದುವರಿಸುವುದಾಗಿ ಭರವಸೆ ನೀಡಿದರು.

ಕಾರ್ಯಕ್ರಮದಲ್ಲಿ ಸಂದೇಶ ಫೌಂಡೇಶನ್‌ಗೆ ಸಲ್ಲಿಸಿದ ಸಮರ್ಪಿತ ಸೇವೆಗಾಗಿ ಶ್ರೀಮತಿ ರಿಯಾನಾ ಬಂಗೇರ ಸೋನ್ಸ್ ಅವರನ್ನು ಸಹ ಸನ್ಮಾನಿಸಲಾಯಿತು.

ಪ್ರಾಂತಾಧ್ಯಕ್ಷರಾದ ಫಾ. ರಾಬಿನ್ ವಿಕ್ಟರ್ ಡಿಸೋಜಾ ಅವರು, ಯಾವುದೇ ಸಂಸ್ಥೆ ಸಮರ್ಪಣೆ ಮತ್ತು ಬದ್ಧತೆಯಿಂದ ಬೆಳೆಯುತ್ತದೆ ಎಂದು ಹೇಳಿದರು. ಫಾ. ಸುದೀಪ್ ಪಾಲ್ ಅವರ ಸೇವೆಯನ್ನು ಶ್ಲಾಘಿಸಿ, ಫಾ. ರೋಷನ್ ರೊಸಾರಿಯೊ ಅವರನ್ನು ಸ್ವಾಗತಿಸಿದರು. ಸಂತ ಆಂಥೋನೀಸ್ ಪಿಯು ಕಾಲೇಜಿನಲ್ಲಿ ಅವರು ಸಲ್ಲಿಸಿದ ಸೇವೆಯನ್ನು ಮೆಚ್ಚಿ, ಅವರ ನಾಯಕತ್ವದಲ್ಲಿ ಸಂದೇಶ ಫೌಂಡೇಶನ್ ಮತ್ತಷ್ಟು ಅಭಿವೃದ್ಧಿ ಹೊಂದಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕೊಂಕಣಿ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ಶ್ರೀ ಸ್ಟ್ಯಾನಿ ಅಲ್ವಾರಿಸ್ ಅವರು ವಂದನಾರ್ಪಣೆ ಸಲ್ಲಿಸಿ, ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ ತಿಳಿಸಿದರು ಹಾಗೂ ನೂತನ ನಿರ್ದೇಶಕರಿಗೆ ಶುಭ ಹಾರೈಸಿದರು. ಸುನೀಲ್ ಕುಮಾರ್ ಬಜಾಲ್ ಕಾರ್ಯಕ್ರಮ ನಿರೂಪಿಸಿ ದರು

ಸಂದೇಶ ಗೀತೆಯೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು. ನಂತರ ಸೌಹಾರ್ದ ಭೋಜನ ನಡೆಯಿತು. ಇದರೊಂದಿಗೆ ಸಂದೇಶ ಫೌಂಡೇಶನ್‌ನ ಪಯಣದಲ್ಲಿ ಹೊಸ ಅಧ್ಯಾಯಕ್ಕೆ ಚಾಲನೆ ದೊರೆಯಿತು.






















