ಮೈಸೂರು, ಜೂನ್. 04 : ವಿಶ್ವಪ್ರಸಿದ್ಧ ದೊರ್ನಹಳ್ಳಿಯ ಸಂತ ಅಂತೋನಿಯವರ ಬೆಸಿಲಿಕಾದಲ್ಲಿ ವಾರ್ಷಿಕ ಮಹೋತ್ಸವದ ಸಂಭ್ರಮವು ಜೂನ್ 4, 2026ರ ಗುರುವಾರದಿಂದ ಅತ್ಯಂತ ಭಕ್ತಿಭಾವದಿಂದ ಆರಂಭಗೊಂಡಿದೆ. ಸಾಂಪ್ರದಾಯಿಕ ಧ್ವಜಾರೋಹಣ ನೆರವೇರಿಸುವ ಮೂಲಕ ಒಂಬತ್ತು ದಿನಗಳ ನೊವೆನಾ ಪ್ರಾರ್ಥನೆ ಹಾಗೂ ವಾರ್ಷಿಕ ಹಬ್ಬದ ಆಚರಣೆಗಳಿಗೆ ಅಧಿಕೃತ ಚಾಲನೆ ನೀಡಲಾಯಿತು.

ಕರ್ನಾಟಕ ಮತ್ತು ನೆರೆರಾಜ್ಯಗಳ ಸಾವಿರಾರು ಭಕ್ತಾದಿಗಳು ಈ ಭವ್ಯ ಸಮಾರಂಭಕ್ಕೆ ಸಾಕ್ಷಿಯಾದರು. ಮೈಸೂರು ಧರ್ಮಕ್ಷೇತ್ರದ ಬಿಷಪ್ ಪರಮ ಪೂಜ್ಯ ಡಾ. ಫ್ರಾನ್ಸಿಸ್ ಸೆರಾವೊ SJ ಅವರು ಹಬ್ಬದ ಧ್ವಜಾರೋಹಣ ನೆರವೇರಿಸಿ ಭಕ್ತಾದಿಗಳಿಗೆ ಆಶೀರ್ವಚನ ನೀಡಿದರು.
ಇದೇ ಸಂದರ್ಭದಲ್ಲಿ ಬಿಷಪ್ ಅವರು ಬೆಸಿಲಿಕಾದ ನವೀಕೃತ ಪ್ರಾರ್ಥನಾ ಮಂದಿರವನ್ನು (Chapel) ಆಶೀರ್ವದಿಸಿ, ಭಕ್ತರ ಆಧ್ಯಾತ್ಮಿಕ ಬಳಕೆಗೆ ಸಮರ್ಪಿಸಿದರು. ಧ್ವಜಾರೋಹಣದ ನಂತರ ನಡೆದ ಪವಿತ್ರ ಬಲಿಪೂಜೆಯಲ್ಲಿ ಬಿಷಪ್ ಅವರು, “ಭಕ್ತರು ಪ್ರಾರ್ಥನಾ ಜೀವನವನ್ನು ಬಲಪಡಿಸಿಕೊಂಡು, ಹಬ್ಬದ ಆಚರಣೆಗೆ ಆಧ್ಯಾತ್ಮಿಕವಾಗಿ ಸಿದ್ಧರಾಗಬೇಕು” ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮೈಸೂರು ಧರ್ಮಕ್ಷೇತ್ರದ ಧರ್ಮಪ್ರಾಂತ್ಯದ ವಿಕಾರ್ ಜನರಲ್ ವಂದನೀಯ ಫಾದರ್ ಅಂತಪ್ಪ ಎಂ., ಪ್ರೊಕ್ಯುರೇಟರ್ ವಂದನೀಯ ಫಾದರ್ ಸೆಬಾಸ್ಟಿಯನ್, ಚಾನ್ಸಲರ್ ವಂದನೀಯ ಫಾದರ್ ಅಂತೋನಿ ರಾಜ್, ಬೆಸಿಲಿಕಾದ ರೆಕ್ಟರ್ ವಂದನೀಯ ಫಾದರ್ ಡೇವಿಡ್ ಸಗಾಯರಾಜ್ ಮತ್ತು ಅಡ್ಮಿನಿಸ್ಟ್ರೇಟರ್ ವಂದನೀಯ ಫಾದರ್ ಪ್ರವೀಣ್ ಕುಮಾರ್ ಸೇರಿದಂತೆ ಹಲವು ಧರ್ಮಗುರುಗಳು ಮತ್ತು ಧರ್ಮಭಗಿನಿಯರು ಉಪಸ್ಥಿತರಿದ್ದರು.
ನೊವೆನಾ ಮತ್ತು ಬಲಿಪೂಜೆಗಳ ವೇಳಾಪಟ್ಟಿ: ಜೂನ್ 5 ರಿಂದ ಜೂನ್ 12, 2026 ರವರೆಗೆ ಪ್ರತಿದಿನ ವಿಶೇಷ ನೊವೆನಾ ಪ್ರಾರ್ಥನೆ ಮತ್ತು ಬಲಿಪೂಜೆಗಳು ಜರುಗಲಿವೆ. ಬೆಳಗ್ಗೆ 7:00 ಗಂಟೆಗೆ: ಇಂಗ್ಲಿಷ್ ಬಲಿಪೂಜೆ ಬೆಳಗ್ಗೆ 11:00 ಗಂಟೆಗೆ: ಕನ್ನಡ ಬಲಿಪೂಜೆ ಸಂಜೆ 5:30 ಗಂಟೆಗೆ: ಕನ್ನಡ ಬಲಿಪೂಜೆ, ನೊವೆನಾ ಪ್ರಾರ್ಥನೆ, ಪ್ರವಚನ ಮತ್ತು ಭಕ್ತಿಪೂರ್ವಕ ಮೆರವಣಿಗೆ.
ಪ್ರಧಾನ ಹಬ್ಬದ ಆಚರಣೆ: ವಾರ್ಷಿಕ ಮಹೋತ್ಸವದ ಪ್ರಧಾನ ಹಬ್ಬದ ಜಂಟಿ ಬಲಿಪೂಜೆಯು ಜೂನ್ 13, 2026ರ ಶನಿವಾರ ಬೆಳಗ್ಗೆ 10:00 ಗಂಟೆಗೆ ನೆರವೇರಲಿದ್ದು, ದೇಶದ ವಿವಿಧ ಮೂಲೆಗಳಿಂದ ಲಕ್ಷಾಂತರ ತೀರ್ಥಯಾತ್ರಿಕರು ಆಗಮಿಸುವ ನಿರೀಕ್ಷೆಯಿದೆ ಎಂದು ಬೆಸಿಲಿಕಾದ ಪ್ರಕಟಣೆ ತಿಳಿಸಿದೆ.