LATEST NEWS

ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶ ಆಹ್ವಾನ ಹಾಗೂ ಧನ ಸಂಗ್ರಹಕ್ಕೆ ಚಾಲನೆ

ಮಂಗಳೂರು: ಮಾಂಡ್‌ ಸೊಭಾಣ್‌ ತನ್ನ ಮಾಣಿಕ್ಯೋತ್ಸವದ ಪ್ರಯುಕ್ತ ಆಯೋಜಿಸಿದ, ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾ ಸಮಾವೇಶದ ಕಾರ್ಯಕ್ರಮಕ್ಕೆ ಆಹ್ವಾನ ನೀಡುವ ಹಾಗೂ ಧನ ಸಂಗ್ರಹಕ್ಕೆ ಚಾಲನೆ ನೀಡುವ ಕಾರ್ಯಕ್ರಮ ಮಂಗಳೂರು ಕ್ಲಬ್‌ ನಲ್ಲಿ ನಡೆಯಿತು.

ಕಾರ್ಯಕ್ರಮಕ್ಕೆ ಚಾಲನೆ ನೀಡಿ ಫಾದರ್‌ ಮುಲ್ಲರ್‌ ಸಂಸ್ಥೆಗಳ ನಿರ್ದೇಶಕ ವಂ. ಫಾವೊಸ್ತಿನ್‌ ಲೋಬೊ ಮಾತೃಭಾಷೆಯನ್ನು ಉಳಿಸಿ ಬೆಳೆಸುವಲ್ಲಿ ಮಾಂಡ್‌ ಸೊಭಾಣ್‌ ಮುಂಚೂಣಿಯಲ್ಲಿದೆ. ಕೊಂಕಣಿಯಲ್ಲಿ ನವೀನ ಸಾಧ್ಯತೆಗಳನ್ನು ಸೃಜಿಸುವ ತಾಕತ್ತು ಇರುವ ಈ ಸಂಸ್ಥೆ ಈಗ ಮಹಾ ಸಮಾವೇಶ ಆಯೋಜಿಸುವ ಮೂಲಕ ಕೊಂಕಣಿ ಜನರ ಸಾಹಸವನ್ನು ವಿಶ್ವಕ್ಕೆ ಪರಿಚಯಿಸಲು ಮುಂದಾಗಿದೆ. ಈ ಬೃಹತ್ ಯೋಜನೆಗೆ ತನು ಮನ ಧನದ ಸಹಕಾರ ನೀಡಬೇಕಾಗಿದೆ. ಈ ಕಾರ್ಯಕ್ರಮ ಸುಸೂತ್ರವಾಗಿ ನೆರವೇರಲಿ ಎಂದು ಶುಭ ಹಾರೈಸಿದರು.

ಪ್ರಸ್ತಾವಿಕ ನುಡಿಗಳನ್ನಾಡಿದ ಮಾಂಡ್‌ ಸೊಭಾಣ್‌ ಅಧ್ಯಕ್ಷ ಲುವಿ ಜೆ ಪಿಂಟೊ ಮಹಾಮೇಳದ ಮತ್ತು ಗಿನ್ನೆಸ್‌ ದಾಖಲೆಯ ವಿವರ ನೀಡಿದರು. ವಿಶ್ವದಾದ್ಯಂತದಿಂದ ಹಿಂದೂ- ಮುಸ್ಲಿಮ್-ಕ್ರೈಸ್ತ ಸಮುದಾಯಗಳ 6000 ಕ್ಕೂ ಮಿಕ್ಕಿ ಗಾಯಕರು, 300 ತಂಡಗಳಲ್ಲಿ 5000 ಹಾಡುಗಳನ್ನು ಹಾಡಲಿರುವರು. ಸುಮಾರು ಮೂರು ಕೋಟಿ ಅಂದಾಜು ವೆಚ್ಚದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಕೊಂಕಣಿ ಸಂಗೀತ ಕ್ಷೇತ್ರದ ಇತಿಹಾಸ ಮತ್ತು ಭವಿಷ್ಯದ ಬಗ್ಗೆ ವಿವಿಧ ವಿಚಾರ ಗೋಷ್ಟಿಗಳು ನಡೆಯಲಿವೆ. ವಸ್ತು ಪ್ರದರ್ಶನ, ಕೀರ್ತಿ ಮಂದಿರ, ಹಿರಿಯರಿಗೆ ಸನ್ಮಾನ ಹೀಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ ಎಂದು ನಡೆಯುತ್ತಿರುವ ತಯಾರಿ ಬಗ್ಗೆ ಸಂಪೂರ್ಣ ಮಾಹಿತಿಯನ್ನು ತೆರೆದಿಟ್ಟರು.


ನಂತರ ಕೊಂಕಣಿ ಸಂಪ್ರದಾಯದಂತೆ ಅಡಕೆ-ವೀಳ್ಯದೆಲೆ ಮತ್ತು ನೀರನ್ನು ಮುಖ್ಯ ಅತಿಥಿಗಳಿಗೆ ಹಸ್ತಾಂತರಿಸಿ ಸಮಸ್ತ ಜನರಿಗೆ ಆಹ್ವಾನ ನೀಡಿದರು.

ಮಹಾ ಸಮಾವೇಶಕ್ಕೆ ಆಹ್ವಾನ ನೀಡುವ ಜಿಂಗಲ್‌ ಹಾಡನ್ನು ಸಿಎ ಓಲ್ವಿನ್‌ ರೊಡ್ರಿಗಸ್‌ ಲೊಕಾರ್ಪಣೆಗೊಳಿಸಿದರು. ಎಂಸಿಸಿ ಬ್ಯಾಂಕ್‌ ಅಧ್ಯಕ್ಷ ಅನಿಲ್‌ ಲೋಬೊ ಶುಭ ಹಾರೈಸಿದರು.

ಮಹಾ ಸಮಾವೇಶದ ಆರ್ಥಿಕ ಸಮಿತಿ ಅಧ್ಯಕ್ಷ ರೊಯ್‌ ಕ್ಯಾಸ್ತೆಲಿನೊ ಸ್ವಾಗತಿಸಿ, ಮಾಂಡ್‌ ಸೊಭಾಣ್ ಸಂಘಟಕ ಸ್ಟ್ಯಾನಿ ಆಲ್ವಾರಿಸ್‌ ಧನ್ಯವಾದ ಸಮರ್ಪಣೆಗೈದರು. ಅರುಣ್‌ ರಾಜ್‌ ರೊಡ್ರಿಗಸ್‌ ಕಾರ್ಯಕ್ರಮ ನಿರೂಪಿಸಿದರು. ರೈನಾ ಸಿಕ್ವೇರಾ ಮತ್ತು ತಂಡದಿಂದ ಹಾಡುಗಳು ಪ್ರಸ್ತುತವಾಯಿತು.

Share News