COMMUNITY NEWSLATEST NEWS

ರಾಣಿಪುರ ರಿಷಿವನ ಆಧ್ಯಾತ್ಮಿಕ ಕೇಂದ್ರದಲ್ಲಿ ಸಂತ ಮರಿಯಂ ಬಾವಾರ್ದಿ ಹಬ್ಬದ ಅದ್ಧೂರಿ ಆಚರಣೆ

ಮಂಗಳೂರು : ರಾಣಿಪುರ ಪ್ರಸಿದ್ಧ ಆಧ್ಯಾತ್ಮಿಕ ಕೇಂದ್ರವಾದ ‘ರಿಷಿವನ’ದ ಪಾಲಕ ಸಂತೆಯಾದ ‘ಸೈಂಟ್ ಮೇರಿ ಆಫ್ ಜೀಸಸ್ ಕ್ರೂಸಿಫೈಡ್’ (ಸಂತ ಮರಿಯಂ ಬಾವಾರ್ದಿ) ಅವರ ವಾರ್ಷಿಕ ಹಬ್ಬವನ್ನು ರಿಷಿವನ ಚಾಪೆಲ್‌ನಲ್ಲಿ ಅತ್ಯಂತ ಭಕ್ತಿ-ಶ್ರದ್ಧೆಯಿಂದ ಆಚರಿಸಲಾಯಿತು.

ಮಂಗಳೂರು ಧರ್ಮಪ್ರಾಂತ್ಯದ ನಿವೃತ್ತ ಬಿಷಪ್ ಅತಿ ವಂದನೀಯ ಅಲೋಶಿಯಸ್ ಪಾಲ್ ಡಿಸೋಜಾ ಅವರು ಹಬ್ಬದ ಪ್ರಧಾನ ದಿವ್ಯಪೂಜೆಯನ್ನು ನೆರವೇರಿಸಿ, ಆಶೀರ್ವದಿಸಿದರು.

ಗೋವಾದ ಎಕ್ಸೆಲಿಮ್‌ನ ಫಾತಿಮಾ ರಿಟ್ರೀಟ್ ಸೆಂಟರ್‌ನ ಸುಪೀರಿಯರ್ ವಂದನೀಯ ಫಾದರ್ ವಿಲ್ಫ್ರೆಡ್ ರೊಡ್ರಿಗಸ್ (ಒ.ಸಿ.ಡಿ) ಅವರು ಅರ್ಥಪೂರ್ಣ ಪ್ರವಚನ ನೀಡಿ, “ದಿ ಲಿಟಲ್ ಅರಬ್” ಎಂದೇ ಖ್ಯಾತರಾಗಿದ್ದ ಸಂತ ಮರಿಯಂ ಬಾವಾರ್ದಿ (1846-1878) ಅವರ ಸರಳತೆ, ನಮ್ರತೆ ಹಾಗೂ ಅವರಲ್ಲಿದ್ದ ದೈವಿಕ ವರಗಳನ್ನು (ಸ್ಟಿಗ್ಮಾಟಾ) ಸ್ಮರಿಸಿದರು. ಪ್ಯಾಲೆಸ್ತೀನ್ ಮೂಲದ ಈ ಕಾರ್ಮೆಲೈಟ್ ಸಂತೆಯು ಮಂಗಳೂರಿನ ಕಂಕನಾಡಿ ಹಾಗೂ ಬೆತ್ಲೆಹೆಮ್‌ನಲ್ಲಿ ಮಠಗಳನ್ನು ಸ್ಥಾಪಿಸಲು ಪ್ರಮುಖ ಪಾತ್ರ ವಹಿಸಿದ್ದರು ಎಂದರು.

ದಿವ್ಯಪೂಜೆಯಲ್ಲಿ ಮಂಗಳೂರು ಕೇಂದ್ರೀಯ ವಲಯದ ಪ್ರಧಾನ ಧರ್ಮಗುರು ವಂ| ಆಂಡ್ರೂ ಲಿಯೋ ಡಿಸೋಜಾ, ಸಂತ ಜೋಸೆಫರ ಸೆಮಿನಾರಿಯ ರೆಕ್ಟರ್ ವಂ| ರಾಜೇಶ್ ಮೆಲ್ವಿನ್ ರೊಸಾರಿಯೋ, ಉಡುಪಿ ಧರ್ಮಪ್ರಾಂತ್ಯದ ಬಿಷಪರ ಪ್ರತಿನಿಧಿ ವಂ| ಜೋ ತಾವ್ರೊ ಸೇರಿದಂತೆ ಸುಮಾರು 30 ಕ್ಕೂ ಹೆಚ್ಚು ಧರ್ಮಗುರುಗಳು, 50 ಕ್ಕೂ ಹೆಚ್ಚು ಭಗಿನಿಯರು ಹಾಗೂ 200 ಕ್ಕೂ ಅಧಿಕ ಸ್ಥಳೀಯ ಸದ್ಭಕ್ತರು ಭಾಗವಹಿಸಿದ್ದರು.

ರಿಷಿವನದ ನಿರ್ದೇಶಕರಾದ ಫಾದರ್ ಡೊಮಿನಿಕ್ ವಾಸ್ ಮತ್ತು ಸಹ-ನಿರ್ದೇಶಕರಾದ ಫಾದರ್ ಆರ್ಚಿಬಾಲ್ಡ್ ಗೊನ್ಸಾಲ್ವಿಸ್ ಅವರು ಆಗಮಿಸಿದ ಎಲ್ಲ ಗಣ್ಯರನ್ನು ಸ್ವಾಗತಿಸಿ, ವಂದಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಎಲ್ಲ ಭಕ್ತಾದಿಗಳಿಗೆ ಪ್ರೀತಿಯ ಭೋಜನದ ವ್ಯವಸ್ಥೆ ಮಾಡಲಾಗಿತ್ತು.


Share News