ಮಂಜೇಶ್ವರ: ತಾಲೂಕಿನ ತೂಮಿನಾಡು ಹಿಲ್ ಟಾಪ್ ಎಂಬಲ್ಲಿ ಸೋಮವಾರ ಸಂಜೆ ನಡೆದ ಕೌಟುಂಬಿಕ ಕಲಹದಲ್ಲಿ ಮೃತಪಟ್ಟವರ ಸಂಖ್ಯೆ ಎರಡಕ್ಕೇರಿದೆ. ಇರಿತಕ್ಕೆ ಒಳಗಾಗಿ ಮಾರಣಾಂತಿಕ ಗಾಯಗೊಂಡಿದ್ದ ಶೇಕುಂಞಿ ಎಂಬವರು ಮಂಗಳವಾರ ಬೆಳಗ್ಗೆ ಮಂಗಳೂರಿನ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಮೃತ ಮಗಳ ಜೊತೆ ಆರೋಪಿ ಫಾರೂಕ್
ಶೇಕುಂಞಿ ಅವರ ಪತ್ನಿಯ ಅಕ್ಕನ ಮಗಳು ಜುಮೈಲಾ (17) ಸೋಮವಾರ ಸಂಜೆ ಮೃತ ಪಟ್ಟಿದ್ದರು. ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಶೇಕುಂಞಿ ಇದೀಗ ಕೊನೆಯುಸಿರೆಳೆದಿದ್ದಾರೆ. ಜುಮೈಲಾ ಅವರ ತಂದೆ ಉಮರ್ ಫಾರೂಕ್ ಕೊಲೆ ಆರೋಪಿಯಾಗಿದ್ದು, ಆತನನ್ನು ಮಂಜೇಶ್ವರ ಪೊಲೀಸರು ಬಂಧಿಸಿದ್ದಾರೆ.
ಮೃತ ಶೇಕುಂಞಿ
ವಿದೇಶದಲ್ಲಿದ್ದ ಉಮ್ಮರ್ ಫಾರೂಕ್ ಮೂರು ತಿಂಗಳ ಹಿಂದೆ ಊರಿಗೆ ಬಂದಿದ್ದು, ಕೆಲವೊಂದು ವಿಷಯಗಳ ಬಗ್ಗೆ ಕುಟುಂಬದಲ್ಲಿ ಜಗಳ ನಡೆಯುತ್ತಿತ್ತು ಎನ್ನಲಾಗಿದೆ. ಆಸ್ತಿ ವಿಚಾರವಾಗಿ ಉಮರ್ ಫಾರೂಕ್ ಮತ್ತು ಆತನ ಪತ್ನಿಯ ತಂಗಿಯ ಪತಿ ಶೇಕುಂಞಿ ಮಧ್ಯೆ ಈ ಮೊದಲೇ ವೈಮನಸ್ಸು ಇತ್ತು ಎನ್ನಲಾಗಿದೆ.
ಉಮರ್ ಫಾರೂಕ್
ಇದೇ ವಿಚಾರವಾಗಿ ಸೋಮವಾರ ಸಂಜೆ ಉಮರ್ ಫಾರೂಕ್ ಮತ್ತು ಶೇಕುಂಞಿ ಮಧ್ಯೆ ನಡೆದ ವಾಗ್ವಾದ ತಾರಕ್ಕೇರಿದೆ. ಈ ವೇಳೆ ಶೇಕುಂಞಿ ಅವರ ಮೇಲೆ ಆರೋಪಿ ಉಮರ್ ಫಾರೂಕ್ ಮಾರಕಾಸ್ತ್ರದಿಂದ ದಾಳಿ ಮಾಡಿದ್ದಾನೆ. ದಾಳಿಯನ್ನು ತಡೆಯಲೆತ್ನಿಸಿದ ಪುತ್ರಿ ಜುಮೈಲಾರಿಗೂ ಉಮರ್ ಫಾರೂಕ್ ಇರಿದಿದ್ದಾನೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಜುಮೈಲಾ ಸ್ಥಳದಲ್ಲೇ ಮೃತಪಟ್ಟಿದ್ದರು.
ದಾಳಿಯಿಂದ ತೀವ್ರ ಗಾಯಗೊಂಡಿದ್ದ ಶೇಕುಂಞಿ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತ ಪಟ್ಟಿದ್ದಾರೆ.