ಮೂಡಬಿದ್ರೆ, ಜೂನ್ 28:ನಿಡ್ಡೋಡಿ ಸಂತ ತೆರೆಜಮ್ಮನವರ ದೇವಾಲಯದಲ್ಲಿ ಭಾನುವಾರ ದಂದು ಬೆಳಗಿನ ಪೂಜೆಯ ನಂತರ ಪರಿಸರ ಸಂರಕ್ಷಣಾ ದಿನಾಚರಣೆ ಹಾಗೂ ಬೃಹತ್ ಸ್ವಚ್ಛತಾ ಶ್ರಮದಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.


ಕಥೊಲಿಕ್ ಸಭಾ ಮಂಗಳೂರು ಪ್ರದೇಶ (ರಿ) ನಿಡ್ಡೋಡಿ ಘಟಕದ ನೇತೃತ್ವದಲ್ಲಿ, ಪರಿಸರ ಆಯೋಗ ಹಾಗೂ ಐ.ಸಿ.ವೈ.ಎಂ (ICYM) ನಿಡ್ಡೋಡಿ ಘಟಕದ ಜಂಟಿ ಆಶ್ರಯದಲ್ಲಿ ಈ ಸಮಾಜಮುಖಿ ಕಾರ್ಯಕ್ರಮ ವನ್ನು ಆಯೋಜಿಸಲಾಯಿತು.

ಪರಿಸರ ಸಂರಕ್ಷಣೆ ನಮ್ಮೆಲ್ಲರ ಜವಾಬ್ದಾರಿ: ಚರ್ಚಿನ ಧರ್ಮಗುರುಗಳಾದ ವಂದನೀಯ ಲಿಯೋ ವಿಲಿಯಂ ಲೋಬೊ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. “ಪರಿಸರವನ್ನು ಕಾಪಾಡುವುದು ಕೇವಲ ಒಂದು ದಿನದ ಆಚರಣೆಯಾಗಬಾರದು. ಅದು ನಮ್ಮ ದೈನಂದಿನ ಜೀವನದ ಭಾಗವಾಗಬೇಕು” ಎಂದು ಹೇಳುತ್ತಾ ಪರಿಸರ ಸಂರಕ್ಷಣೆಯ ಮಹತ್ವದ ಬಗ್ಗೆ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ರಸ್ತೆ ಬದಿಯ ಪ್ಲಾಸ್ಟಿಕ್ ಮುಕ್ತಗೊಳಿಸಿದ ಯುವಕರು ಮತ್ತು ಸಾರ್ವಜನಿಕರು: ಸಭಾ ಕಾರ್ಯಕ್ರಮದ ನಂತರ ಚರ್ಚ್ನ ಪದಾಧಿಕಾರಿಗಳು ಹಾಗೂ ಯುವಕರು ಒಟ್ಟಾಗಿ ಶ್ರಮದಾನದಲ್ಲಿ ತೊಡಗಿಸಿಕೊಂಡರು.

ಕುದ್ರಿಪದವು ಜಂಕ್ಷನ್ನಿಂದ ನಿಡ್ಡೋಡಿ ಪೇಟೆಯವರೆಗಿನ ರಸ್ತೆ ಬದಿಯಲ್ಲಿ ಬಿದ್ದಿದ್ದ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯವನ್ನು ಸಂಪೂರ್ಣವಾಗಿ ವಿಲೇವಾರಿ ಮಾಡುವ ಮೂಲಕ ಮಾದರಿ ಕೆಲಸ ಮಾಡಿದರು. ಈ ಸ್ವಚ್ಛತಾ ಕಾರ್ಯಕ್ಕೆ ಕಲ್ಲಮಂಡ್ಕೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (PDO) ಮತ್ತು ಕಾರ್ಯದರ್ಶಿಗಳು ಪೂರ್ಣ ಸಹಕಾರ ನೀಡಿದರು.

ಕಾರ್ಯಕ್ರಮದಲ್ಲಿ ಚರ್ಚಿನ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀಮತಿ ಶರ್ಮಿಳಾ ಸೆರಾವೊ, ಕಾರ್ಯದರ್ಶಿ ಶ್ರೀಮತಿ ಪ್ರಿಮಾ ಕೊರೆಯಾ, ಆಯೋಗಗಳ ಸಂಯೋಜಕರಾದ ಮ್ಯಾಕ್ಸಿಮ್ ಪಿಂಟೊ ಹಾಗೂ ಐ. ಸಿ. ವೈ. ಎಂ ಘಟಕದ ಅಧ್ಯಕ್ಷರಾದ ಅಲನ್ ಸೆರಾವೊ ಪರಿಸರ ಆಯೋಗದ ಶ್ರೀಮತಿ ಹಿಲ್ಡಾ ಡಿಸೋಜಾ, ಕಥೊಲಿಕ್ ಸಭಾ ನಿಡ್ಡೋಡಿ ಘಟಕದ ಅಧ್ಯಕ್ಷರಾದ ಶ್ರೀಮತಿ ಸರಿತ ತಾವ್ರೊ, ನಿಕಟ ಪೂರ್ವ ಅಧ್ಯಕ್ಷರಾದ ಶ್ರೀ ಕಿಶೋರ್ ಡಿಸೋಜಾ ಉಪಸ್ಥಿತರಿದ್ದರು. ಶ್ರೀ ಜೀವನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರೆ, ಶ್ರೀಮತಿ ಸರಿತಾ ತಾವ್ರೊ ವಂದನಾರ್ಪಣೆ ಮಾಡಿದರು. ಕಥೊಲಿಕ್ ಸಭಾದ ಕಾರ್ಯದರ್ಶಿ ಶ್ರೀ ಜೀವನ್ ಕ್ರಾಸ್ತಾ ಸೇರಿದಂತೆ ಹಲವು ಸಾರ್ವಜನಿಕರು ಶ್ರಮದಾನದಲ್ಲಿ ಪಾಲ್ಗೊಂಡಿದ್ದರು.


