ಮಂಗಳೂರು: ದೇಶದ ಪ್ರಮುಖ ಉದ್ಯಮ ಸಂಸ್ಥೆಯಾದ ಎಂಆರ್‌ಜಿ (MRG) ಸಮೂಹದ ಸಂಸ್ಥಾಪಕ ಹಾಗೂ ಅಧ್ಯಕ್ಷರಾದ ಡಾ. ಕೆ. ಪ್ರಕಾಶ್ ಶೆಟ್ಟಿ ಅವರು ತಮ್ಮ ಯಶಸ್ವಿ ಉದ್ಯಮ ಪಯಣದಲ್ಲಿ ಮತ್ತೊಂದು ಅಪೂರ್ವ ಮೈಲಿಗಲ್ಲು ಸ್ಥಾಪಿಸಿದ್ದಾರೆ. ಎಂಆರ್‌ಜಿ ಕುಟುಂಬದ ಜಾಗತಿಕ ಬೆಳವಣಿಗೆಯ ಪ್ರತೀಕವಾಗಿ, ಅಮೆರಿಕದಿಂದ ತರಿಸಲಾದ 14 ಆಸನಗಳ ಅತ್ಯಾಧುನಿಕ ‘ಎಂಬ್ರೇಯರ್ ಲೆಗಸಿ 650’ ಖಾಸಗಿ ವಿಮಾನವನ್ನು ಸಂಸ್ಥೆಗೆ ಸೇರ್ಪಡೆ ಗೊಳಿಸಿದ್ದಾರೆ.

ಈ ಐತಿಹಾಸಿಕ ಸಂದರ್ಭದಲ್ಲಿ ಮಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಶೇಷ ಧಾರ್ಮಿಕ ವಿಧಿವಿಧಾನಗಳು ನೆರವೇರಿದವು. ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ಸುಬುಧೇಂದ್ರ ತೀರ್ಥ ಶ್ರೀಪಾದಂಗಳವರು ದಿವ್ಯ ಸಾನ್ನಿಧ್ಯ ವಹಿಸಿ, ವಿಮಾನಕ್ಕೆ ವಿಶೇಷ ಪೂಜೆ ನೆರವೇರಿಸಿ ಆಶೀರ್ವದಿಸಿದರು. ಡಾ. ಪ್ರಕಾಶ್ ಶೆಟ್ಟಿ ಅವರ ಕುಟುಂಬ ಸದಸ್ಯರು, ಆಪ್ತರು ಹಾಗೂ ಹಿತೈಷಿಗಳು ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾದರು.
ಯಶಸ್ವಿ ಉದ್ಯಮಿ, ಸಮಾಜಮುಖಿ ಸಾಧಕ: ಆತಿಥ್ಯ ರಿಯಲ್ ಎಸ್ಟೇಟ್ ಹಾಗೂ ಮೂಲಸೌಕರ್ಯ ಕ್ಷೇತ್ರಗಳಲ್ಲಿ ದೇಶಾದ್ಯಂತ ತನ್ನದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಎಂಆರ್‌ಜಿ ಸಮೂಹದ ಯಶಸ್ಸಿನ ಹಿಂದೆ ಡಾ. ಪ್ರಕಾಶ್ ಶೆಟ್ಟಿ ಅವರ ವಿನಯ, ಕಠಿಣ ಪರಿಶ್ರಮ ಮತ್ತು ದೂರದೃಷ್ಟಿಯಿದೆ. ಅತ್ಯಂತ ವಿನಮ್ರವಾಗಿ ಆರಂಭವಾದ ಅವರ ಉದ್ಯಮ ಪಯಣ ಇಂದು ದೇಶದ ವಿವಿಧ ಭಾಗಗಳಲ್ಲಿ ಹೋಟೆಲ್‌ಗಳು ಹಾಗೂ ಬೃಹತ್ ಉದ್ಯಮಗಳಾಗಿ ವಿಸ್ತಾರಗೊಂಡಿದೆ. ಕೇವಲ ಯಶಸ್ವಿ ಉದ್ಯಮಿಯಾಗಿ ಮಾತ್ರವಲ್ಲದೆ, ತಮ್ಮ ಉದಾರ ದಾನಧರ್ಮಗಳು ಹಾಗೂ ನಿರಂತರ ಸಮಾಜಮುಖಿ ಚಟುವಟಿಕೆಗಳ ಮೂಲಕವೂ ಅವರು ಜನಮನ ಗೆದ್ದಿದ್ದಾರೆ.
ವ್ಯಾಪಾರ ಚಟುವಟಿಕೆಗಳಿಗೆ ಮತ್ತಷ್ಟು ವೇಗ: ದೀರ್ಘ ದೂರದ ಪ್ರಯಾಣ ಸಾಮರ್ಥ್ಯ ಮತ್ತು ಅತ್ಯಾಧುನಿಕ ಐಷಾರಾಮಿ ಸೌಲಭ್ಯಗಳಿಗೆ ಹೆಸರಾಗಿರುವ ‘ಎಂಬ್ರೇಯರ್ ಲೆಗಸಿ 650’ ವಿಮಾನವು ಎಂಆರ್‌ಜಿ ಸಮೂಹದ ಮುಂದಿನ ವ್ಯಾಪಾರ ಚಟುವಟಿಕೆಗಳಿಗೆ ಮತ್ತಷ್ಟು ವೇಗ ಹಾಗೂ ಜಾಗತಿಕ ಸಂಪರ್ಕ ಸಾಮರ್ಥ್ಯವನ್ನು ಒದಗಿಸಲಿದೆ. ಪರಂಪರೆ, ಮಾನವೀಯ ಮೌಲ್ಯಗಳು ಮತ್ತು ಆಧುನಿಕ ದೃಷ್ಟಿಕೋನದ ಸಮನ್ವಯದೊಂದಿಗೆ ಮುನ್ನಡೆಯುತ್ತಿರುವ ಡಾ. ಕೆ. ಪ್ರಕಾಶ್ ಶೆಟ್ಟಿ ಅವರ ಸಾಧನೆಯ ಹಾದಿಯಲ್ಲಿ ಈ ಖಾಸಗಿ ವಿಮಾನದ ಸೇರ್ಪಡೆ ಹೊಸ ಮೈಲಿಗಲ್ಲಾಗಿದೆ.