• Home  
  • ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ NOC ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಮನವಿ.
- LATEST NEWS

ಕೋಳಿ ಫಾರಂಗಳಿಗೆ ವಿದ್ಯುತ್ ಸಂಪರ್ಕ: ಕಂದಾಯ ಇಲಾಖೆಯಿಂದಲೇ NOC ನೀಡಲು ಡಿಸಿಎಂಗೆ ಎಂಎಲ್ಸಿ ಕಿಶೋರ್ ಕುಮಾರ್ ಮನವಿ.

ಬೆಂಗಳೂರು: ಕೋಳಿ ಸಾಕಾಣಿಕೆ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರು ಎದುರಿಸುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಗೊಂದಲಗಳನ್ನು ನಿವಾರಿಸುವಂತೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಅವರು ಮನವಿ ಸಲ್ಲಿಸಿದರು. ರಾಜ್ಯದಲ್ಲಿ ಗ್ರಾಮೀಣ ಭಾಗದ ಅನೇಕ ರೈತರು ಮತ್ತು ಯುವಕರು ಸ್ವ ಉದ್ಯೋಗ ಹಾಗೂ ಕೃಷಿ ಆಧಾರಿತ ಆದಾಯ ವೃದ್ಧಿಗಾಗಿ […]

Share News

ಬೆಂಗಳೂರು: ಕೋಳಿ ಸಾಕಾಣಿಕೆ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಪಡೆಯಲು ರೈತರು ಎದುರಿಸುತ್ತಿರುವ ತಾಂತ್ರಿಕ ಹಾಗೂ ಆಡಳಿತಾತ್ಮಕ ಗೊಂದಲಗಳನ್ನು ನಿವಾರಿಸುವಂತೆ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಒತ್ತಾಯಿಸಿದ್ದಾರೆ. ಈ ಕುರಿತು ರಾಜ್ಯದ ಉಪಮುಖ್ಯಮಂತ್ರಿಗಳು ಹಾಗೂ ಕಂದಾಯ ಸಚಿವರನ್ನು ಖುದ್ದಾಗಿ ಭೇಟಿಯಾಗಿ ಅವರು ಮನವಿ ಸಲ್ಲಿಸಿದರು.

ರಾಜ್ಯದಲ್ಲಿ ಗ್ರಾಮೀಣ ಭಾಗದ ಅನೇಕ ರೈತರು ಮತ್ತು ಯುವಕರು ಸ್ವ ಉದ್ಯೋಗ ಹಾಗೂ ಕೃಷಿ ಆಧಾರಿತ ಆದಾಯ ವೃದ್ಧಿಗಾಗಿ ಕೃಷಿ ಪೂರಕ ಚಟುವಟಿಕೆಯಾದ ಕೋಳಿ ಸಾಕಾಣಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ, ಕೃಷಿ ಜಮೀನುಗಳಲ್ಲಿ ನಿರ್ಮಿಸಲಾದ ಕೋಳಿ ಫಾರಂ ಕಟ್ಟಡಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಎಸ್ಕಾಂ (ESCOM) ಕಂಪೆನಿಗಳು ಗ್ರಾಮ ಪಂಚಾಯತಿಯಿಂದ ‘ನಿರಾಕ್ಷೇಪಣಾ ಪತ್ರ’ (NOC) ತರುವಂತೆ ಕಡ್ಡಾಯಗೊಳಿಸುತ್ತಿವೆ.

ಆದರೆ, ಈ ಕಟ್ಟಡಗಳನ್ನು ಕೃಷಿ ಭೂಮಿಯಲ್ಲಿ ನಿರ್ಮಿಸಿರುವುದರಿಂದ ಇವು ಗ್ರಾಮ ಪಂಚಾಯತ್ ವ್ಯಾಪ್ತಿಗೆ ಒಳಪಡುವುದಿಲ್ಲ. ಹಾಗಾಗಿ ಗ್ರಾಮ ಪಂಚಾಯತಿಗಳು ಇಂತಹ ಕಟ್ಟಡಗಳಿಗೆ ಸ್ವತ್ತಿನ ಸಂಖ್ಯೆ (Property Number) ನೀಡಲು ಅಥವಾ ನಿರಾಕ್ಷೇಪಣಾ ಪತ್ರ (NOC) ನೀಡಲು ನಿಯಮಗಳಲ್ಲಿ ಅವಕಾಶವಿಲ್ಲ ಎಂದು ನಿರಾಕರಿಸುತ್ತಿವೆ. ಈ ಗೊಂದಲದಿಂದಾಗಿ ರೈತರು ವಿದ್ಯುತ್ ಸಂಪರ್ಕ ಪಡೆಯಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಶಾಸಕರ ಪ್ರಮುಖ ಹಕ್ಕೊತ್ತಾಯಗಳು:

ಕೋಳಿ ಸಾಕಾಣಿಕೆಯು ಕರ್ನಾಟಕ ಭೂ ಕಂದಾಯ ಅಧಿನಿಯಮದ ಪ್ರಕಾರ ಕೃಷಿ ಪೂರಕ ಚಟುವಟಿಕೆಯಾಗಿದ್ದು, ಈ ಕಟ್ಟಡಗಳು ಸಾಮಾನ್ಯ ವಾಣಿಜ್ಯ ಕಟ್ಟಡಗಳಿಗಿಂತ ಭಿನ್ನ ಸ್ವರೂಪದ್ದಾಗಿವೆ.
ಆದ್ದರಿಂದ, ರೈತರಿಗೆ ಅನುಕೂಲ ಕಲ್ಪಿಸುವ ದೃಷ್ಟಿಯಿಂದ ಗ್ರಾಮ ಪಂಚಾಯತಿ NOC ಬದಲಾಗಿ, ಕಂದಾಯ ಇಲಾಖೆಯ ‘ಸಂಬಂಧಿತ ಗ್ರಾಮ ಆಡಳಿತ ಅಧಿಕಾರಿ’ಗಳಿಂದಲೇ (VA) ನಿರಾಕ್ಷೇಪಣಾ ಪತ್ರ ನೀಡಲು ಅವಕಾಶ ಕಲ್ಪಿಸಬೇಕು.
ಈ ಕುರಿತು ರಾಜ್ಯಮಟ್ಟದಲ್ಲಿ ಕಂದಾಯ ಇಲಾಖೆಯಿಂದ ಸೂಕ್ತ ಸರ್ಕಾರಿ ಆದೇಶ ಅಥವಾ ಸುತ್ತೋಲೆ ಹೊರಡಿಸಿ ಕೋಳಿ ಸಾಕಾಣಿಕೆದಾರರಿಗೆ ಆಗುತ್ತಿರುವ ಅನ್ಯಾಯವನ್ನು ಸರಿಪಡಿಸಬೇಕು.

ಶಾಸಕರ ಈ ಜನಪರ ಕಾಳಜಿಯ ಕೋರಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿರುವ ಸಚಿವರು, ಈ ನಿಟ್ಟಿನಲ್ಲಿ ಶೀಘ್ರವೇ ಸೂಕ್ತ ಆದೇಶ ಹೊರಡಿಸಿದರೆ ರಾಜ್ಯದ ಲಕ್ಷಾಂತರ ರೈತರು ಹಾಗೂ ಯುವಜನತೆಗೆ ಬಹುದೊಡ್ಡ ಪ್ರಯೋಜನವಾಗಲಿದೆ ಎಂದು ಶಾಸಕರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Share News