canaratvnews

“ಹಿರಿಯರಲ್ಲಿ ನಗು, ಪ್ರಾರ್ಥನೆ ಹಾಗೂ ಕ್ಷಮಾ ಗುಣವಿರಲಿ” ಪೆರುವಾಯಿ ಚರ್ಚ್‌ನಲ್ಲಿ ‘ಹಿರಿಯರ ದಿನ’ ಆಚರಣೆ

ವಿಟ್ಲ: ಪೆರುವಾಯಿ ಮುಚ್ಚಿರಪದವು ಫಾತಿಮಾ ಮಾತೆಯ ದೇವಾಲಯದಲ್ಲಿ ಸಂತ ವಿನ್ಸೆಂಟ್ ಡಿ ಪೌಲ್ ಸಂಘಟನೆ (SVP), ಕುಟುಂಬ ಆಯೋಗ, ಲಾಯಿಕ್ ಆಯೋಗ ಹಾಗೂ ಆರೋಗ್ಯ ಆಯೋಗಗಳ ಜಂಟಿ ಆಶ್ರಯದಲ್ಲಿ ಜುಲೈ 26 ರಂದು ‘ಮಾಲ್ಗಡ್ಯಾಂಚೊ ದಿವಸ್’ (ಹಿರಿಯರ ದಿನ) ಕಾರ್ಯಕ್ರಮವನ್ನು ಆಚರಿಸಲಾಯಿತು.

ಪವಿತ್ರ ಬಲಿಪೂಜೆ ಮತ್ತು ವಿಶೇಷ ಪ್ರಾರ್ಥನೆ:
ಕಾರ್ಯಕ್ರಮದ ಮೊದಲು ವಿಟ್ಲ ಶೋಕ ಮಾತೆಯ ದೇವಾಲಯದ ಧರ್ಮಗುರು ವಂದನೀಯ ಫಾ. ಮೈಕಲ್ ಲೋಬೊ ಹಾಗೂ ಪೆರುವಾಯಿ ಚರ್ಚ್ ಧರ್ಮಗುರು ವಂದನೀಯ ಫಾ. ಸೈಮನ್ ಡಿ’ಸೋಜಾ ಇವರ ನೇತೃತ್ವದಲ್ಲಿ ಹಿರಿಯರಿಗಾಗಿ ವಿಶೇಷ ಪ್ರಾರ್ಥನೆ ಹಾಗೂ ಪವಿತ್ರ ಬಲಿಪೂಜೆ ನೆರವೇರಿತು.

 

ಹಿರಿಯರಲ್ಲಿ ನಗು, ಪ್ರಾರ್ಥನೆ ಹಾಗೂ ಕ್ಷಮಾ ಗುಣವಿರಲಿ

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ವಿಟ್ಲ ಶೋಕ ಮಾತೆಯ ದೇವಾಲಯದ ಧರ್ಮಗುರು ವಂದನೀಯ ಫಾ. ಮೈಕಲ್ ಲೋಬೋ ಅವರು, “ಹಿರಿಯರ ಮುಖದಲ್ಲಿ ಸದಾ ನಗು ಇರಬೇಕು. ಚರ್ಚ್‌ನಲ್ಲಿ ಮತ್ತು ನಿಮ್ಮ ಮನೆಯಲ್ಲಿ ನಿಮ್ಮ ಪ್ರಾರ್ಥನೆ ಅತ್ಯಂತ ಅಗತ್ಯವಾಗಿದೆ. ಚರ್ಚ್‌ನ ಕಾರ್ಯಕ್ರಮಗಳಲ್ಲಿ ನಿಮ್ಮ ಹಾಜರಾತಿಯೂ ಬೇಕು. ಇದರೊಂದಿಗೆ ನಮ್ಮ ನೆರೆಯವರನ್ನು ಮತ್ತು ಮಕ್ಕಳನ್ನು ಕ್ಷಮಿಸುವ ಉದಾತ್ತ ಗುಣವನ್ನು ಹಿರಿಯರು ರೂಢಿಸಿಕೊಳ್ಳಬೇಕು” ಎಂದು ಕರೆ ನೀಡಿದರು.

 

ಹಿರಿಯರ ಅನುಭವ ನಮಗೆ ಆದರ್ಶ: ಫಾ. ಸೈಮನ್
ಪೆರುವಾಯಿ ಚರ್ಚ್ ಧರ್ಮಗುರು ವಂದನೀಯ ಫಾ. ಸೈಮನ್ ಡಿ’ಸೋಜಾ ಅವರು ಮಾತನಾಡಿ, ಹಿರಿಯರು ಸಮಾಜದ ಆಸ್ತಿ. ಅವರ ಸುದೀರ್ಘ ಜೀವನದ ಅನುಭವಗಳು ಮತ್ತು ಅವರು ಹಾಕಿಕೊಟ್ಟ ಮಾರ್ಗ ನಮಗೆ ಸದಾ ಆದರ್ಶಪ್ರಾಯವಾಗಿದೆ ಎಂದು ತಿಳಿಸಿದರು.

ವೇದಿಕೆಯಲ್ಲಿ ಚರ್ಚ್ ಪಾಲನಾ ಪರಿಷತ್‌ ಉಪಾಧ್ಯಕ್ಷ ಡೆನಿಸ್ ಮೊಂತೇರೋ, ಕಾರ್ಯದರ್ಶಿ ವಿನ್ಸೆಂಟ್ ಡಿ’ಸೋಜಾ, ಎಸ್‌ವಿಪಿ ಅಧ್ಯಕ್ಷ ವಿಲಿಯಂ ಡಿ’ಸೋಜಾ, ವಂದನೀಯ ಪ್ರೀತೇಶ್ ಪಿಂಟೊ ಹಾಗೂ ಸರ್ವ ಆಯೋಗಗಳ ಸಂಯೋಜಕ ರಾಲ್ಫ್ ಡಿ’ಸೋಜಾ ಉಪಸ್ಥಿತರಿದ್ದರು.

 

ಇದೇ ವೇಳೆ ಫಾ. ಮೈಕಲ್ ಲೋಬೋ ಅವರು ಹಿರಿಯರೊಂದಿಗೆ ಅತ್ಯಂತ ಆತ್ಮೀಯವಾಗಿ ಸಂವಾದ ನಡೆಸಿ ಅವರ ಸುಖ-ದುಃಖಗಳನ್ನು ಹಂಚಿಕೊಂಡರು. ತದನಂತರ ಬ್ರದರ್ ಪ್ರೀತೇಶ್ ಪಿಂಟೊ ಹಾಗೂ ಫಾ. ಸೈಮನ್ ಡಿ’ಸೋಜಾ ಅವರ ನೇತೃತ್ವದಲ್ಲಿ ಹಿರಿಯರಿಗಾಗಿ ವಿವಿಧ ಮನರಂಜನಾ ಆಟೋಟಗಳನ್ನು ಆಯೋಜಿಸಲಾಗಿತ್ತು. ಹಿರಿಯರು ವಯಸ್ಸನ್ನು ಮರೆತು ಅತ್ಯಂತ ಉತ್ಸಾಹದಿಂದ ಆಟಗಳಲ್ಲಿ ಭಾಗವಹಿಸಿ ಸಂಭ್ರಮಿಸಿದರು. ವಿಜೇತರಿಗೆ ಆಕರ್ಷಕ ಬಹುಮಾನ ವಿತರಿಸಲಾಯಿತು.

ವೈಸಿಎಸ್ (YCS) ಸದಸ್ಯರು ಪ್ರಾರ್ಥನೆಗೈದರು. SVP ಅಧ್ಯಕ್ಷ ವಿಲಿಯಂ ಡಿ’ಸೋಜಾ ಸ್ವಾಗತಿಸಿದರು. ಲ್ಯಾನ್ವಿನ್ ಡಿ’ಸೋಜಾ ನಿರೂಪಿಸಿದರು. ಸವಿತಾ ಡಿ’ಸೋಜಾ ವಂದನಾರ್ಪಗೈದರು.

 

ತಮ್ಮದೇ ಆದ ಈ ವಿಶೇಷ ದಿನದ ಆಚರಣೆಯಿಂದ ಹಿರಿಯರು ಅಪಾರ ಸಂತೋಷ ವ್ಯಕ್ತಪಡಿಸಿ, ಹೊಸ ಚೈತನ್ಯ ಮೂಡಿದ ಅನುಭವವನ್ನು ಹಂಚಿಕೊಂಡರು. ಮಧ್ಯಾಹ್ನದ ಜಂಟಿ ಪ್ರೀತಿ ಭೋಜನದೊಂದಿಗೆ ಈ ಸುಂದರ ಕಾರ್ಯಕ್ರಮವು ಯಶಸ್ವಿಯಾಗಿ ಮುಕ್ತಾಯಗೊಂಡಿತು.

ಈ ವಿಶೇಷ ಕಾರ್ಯಕ್ರಮದಿಂದ ಹಿರಿಯರು ಅಪಾರ ಸಂತೋಷ ವ್ಯಕ್ತಪಡಿಸಿ, ತಮ್ಮಲ್ಲಿ ಹೊಸ ಚೈತನ್ಯ ಮತ್ತು ಉತ್ಸಾಹ ಮೂಡಿದ ಅನುಭವವನ್ನು ಹಂಚಿಕೊಂಡರು. ಎಲ್ಲರೂ ಪರಸ್ಪರ ಆತ್ಮೀಯತೆಯಿಂದ ಬೆರೆತು ಸಂತಸದ ಕ್ಷಣಗಳನ್ನು ಅನುಭವಿಸುವ ಮೂಲಕ ಈ ಆಚರಣೆಯು ಅವರ ಮನಸ್ಸಿನಲ್ಲಿ ಅಚ್ಚಳಿಯದ ನೆನಪಾಗಿ ಉಳಿಯಿತು.ಮಧ್ಯಾಹ್ನದ ವಿಶೇಷ ಭೋಜನದೊಂದಿಗೆ ಕಾರ್ಯಕ್ರಮವು ಯಶಸ್ವಿಯಾಗಿ ಸಮಾಪ್ತಿಯಾಯಿತು.

Share News
Exit mobile version