DAKSHINA KANNADAHOMELATEST NEWS

ಆ.25: ದ.ಕ. ಉಡುಪಿಯಲ್ಲಿ ಈದ್ ಮಿಲಾದ್ ರಜೆ ಘೋಷಣೆ

ಮಂಗಳೂರು: ಕರಾವಳಿಯಲ್ಲಿ ಆ.25ರಂದು ಈದ್ ಮಿಲಾದ್ ಆಚರಿಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವತ್ರಿಕ ರಜೆಯನ್ನು ಆ.26ರ ಬದಲಿಗೆ ಆ.25ಕ್ಕೆ ಘೋಷಿಸಿ ರಾಜ್ಯ ಸರಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಚಂದ್ರ ದರ್ಶನದ ಆಧಾರದ ಮೇಲೆ ಆಗಸ್ಟ್ 25ರ ಮಂಗಳವಾರದಂದೇ ಈದ್ ಮಿಲಾದ್ (ಮೀಲಾದುನ್ನೆಬಿ) ಆಚರಿಸಲು ನಿರ್ಧರಿಸಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರ ಹಿತದೃಷ್ಟಿಯಿಂದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಆಗಸ್ಟ್ 25 ರಂದು ಸರ್ಕಾರಿ ಸಾರ್ವತ್ರಿಕ ರಜೆ ಘೋಷಿಸಿ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಅಧಿಕೃತ ಆದೇಶ ಹೊರಡಿಸಿದ್ದಾರೆ.

ರಾಜ್ಯ ಸರ್ಕಾರದ ಅಧಿಕೃತ ಕ್ಯಾಲೆಂಡರ್ ಪ್ರಕಾರ ಈ ಮೊದಲು ಆಗಸ್ಟ್ 26ರ ಬುಧವಾರದಂದು ಸಾರ್ವತ್ರಿಕ ರಜೆ ನಿಗದಿಯಾಗಿತ್ತು. ಆದರೆ, ಉಭಯ ಜಿಲ್ಲೆಗಳ ಗೌರವಾನ್ವಿತ ಖಾಝಿಗಳು ಆಗಸ್ಟ್ 25ರಂದೇ ಪ್ರವಾದಿ ಮುಹಮ್ಮದ್ ಮುಸ್ತಫಾ (ಸ) ರವರ ಜನ್ಮದಿನ “ಮೀಲಾದ್” ಆಚರಿಸಲು ಒಮ್ಮತದ ತೀರ್ಮಾನ ಕೈಗೊಂಡಿದ್ದರು.

ಹಬ್ಬದ ದಿನದಂದು ಜಿಲ್ಲೆಯಾದ್ಯಂತ ಮಸೀದಿಗಳ ವ್ಯಾಪ್ತಿಯಲ್ಲಿ ಬೃಹತ್ ಧಾರ್ಮಿಕ ಮೆರವಣಿಗೆಗಳು, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದ್ದು, ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲಿದ್ದಾರೆ. ಹೀಗಾಗಿ ರಜೆಯನ್ನು ಬದಲಾಯಿಸಿಕೊಡಬೇಕೆಂದು ಮುಸ್ಲಿಂ ಮುಖಂಡರ ನಿಯೋಗವು ಜಿಲ್ಲಾ ಉಸ್ತುವಾರಿ ಸಚಿವ ಯು. ಟಿ. ಖಾದರ್ ಅವರಿಗೆ ಜಂಟಿ ಮನವಿ ಸಲ್ಲಿಸಿತ್ತು. ಮುಖಂಡರ ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು, ರಜೆ ದಿನಾಂಕ ಪರಿಷ್ಕರಿಸಲು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದ್ದರು.

ಸಚಿವರ ಸೂಚನೆ ಹಾಗೂ ಸಾರ್ವಜನಿಕರ ಹಿತದೃಷ್ಟಿಯನ್ನು ಪರಿಗಣಿಸಿ, ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ಆಗಸ್ಟ್ 25ರ ಮಂಗಳವಾರದಂದು ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಶಾಲಾ-ಕಾಲೇಜುಗಳು ಮತ್ತು ಅನುದಾನಿತ ಶೈಕ್ಷಣಿಕ ಸಂಸ್ಥೆಗಳಿಗೆ ಸಾರ್ವತ್ರಿಕ ರಜೆ ಘೋಷಿಸಿ ಆದೇಶ ಹೊರಡಿಸಿದ್ದಾರೆ.

ಸರ್ಕಾರದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯ (DPAR) ಅನುಮೋದನೆಯನ್ವಯ, ಆಗಸ್ಟ್ 26ರ ಬುಧವಾರದ ಸಾರ್ವತ್ರಿಕ ರಜೆಯನ್ನು ರದ್ದುಗೊಳಿಸಲಾಗಿದೆ. ಅದಕ್ಕೆ ಬದಲಾಗಿ ಆಗಸ್ಟ್ 25ರ ಮಂಗಳವಾರದಂದು ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಸಾರ್ವತ್ರಿಕ ರಜೆ ಘೋಷಿಸಿ ಆದೇಶಿಸಲಾಗಿದೆ.

 

Share News