ಮಂಗಳೂರು: ಮಂಗಳೂರು ಧರ್ಮಪ್ರಾಂತ್ಯದ ದೇಲಂತಬೆಟ್ಟು ಸಂತ ಪೌಲರ ದೇವಾಲಯದ ಆವರಣದಲ್ಲಿ ಪರಿಸರ ಸ್ನೇಹಿ ಆಸನಗಳನ್ನು (Eco-benches) ನಿರ್ಮಿಸುವ ಮೂಲಕ ಸ್ಥಳೀಯರು ಪರಿಸರ ಸಂರಕ್ಷಣೆಗೆ ಹೊಸ ಮಾದರಿಯನ್ನು ಹಾಕಿಕೊಟ್ಟಿದ್ದಾರೆ. ಕ್ಯಾಥೋಲಿಕ್ ಸಭಾ (ರಿ.) ದೇಲಂತಬೆಟ್ಟು ಘಟಕದ ಮುಂದಾಳತ್ವದಲ್ಲಿ, ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ. ರಿಚರ್ಡ್ ಡಿಸೋಜಾ ಅವರ ಮಾರ್ಗದರ್ಶನ ಹಾಗೂ ಪ್ರೇರಣೆಯಿಂದ ಈ ಅಪೂರ್ವ ಯೋಜನೆ ಸಾಕಾರಗೊಂಡಿದೆ.

ಸುಮಾರು ಎಂಟು ತಿಂಗಳ ನಿರಂತರ ಪರಿಶ್ರಮದಿಂದ ಸಿದ್ಧಗೊಂಡಿರುವ ಎರಡು ಪರಿಸರ ಪ್ರೇಮಿ ಆಸನಗಳನ್ನು ಪೆರುವಾಯಿ ದೇವಾಲಯದ ಧರ್ಮಗುರುಗಳಾದ ವಂದನೀಯ ಫಾ. ಸೈಮನ್ ಡಿಸೋಜಾ ಅವರು ಸೋಮವಾರದಂದು ಉದ್ಘಾಟಿಸಿದರು.
ನಮ್ಮ ಸಾರ್ವತ್ರಿಕ ಮನೆಯ ಸಂರಕ್ಷಣೆ ನಮ್ಮ ಜವಾಬ್ದಾರಿ: ಆಸನಗಳನ್ನು ಉದ್ಘಾಟಿಸಿ ಮಾತನಾಡಿದ ಫಾ. ಸೈಮನ್ ಡಿಸೋಜಾ ಅವರು, “ಪ್ಲಾಸ್ಟಿಕ್ ತ್ಯಾಜ್ಯವು ಮಣ್ಣು, ನೀರು ಹಾಗೂ ವಾಯು ಮಾಲಿನ್ಯವನ್ನು ಉಂಟುಮಾಡಿ ಇಡೀ ಪರಿಸರವನ್ನೇ ನಾಶಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ಲಾಸ್ಟಿಕ್ ಮುಕ್ತ ಪರಿಸರ ರೂಪಿಸಲು ಈ ಧರ್ಮ ಕೇಂದ್ರದ ಜನರು ಕೈಗೊಂಡಿರುವ ಕಾರ್ಯ ಶ್ಲಾಘನೀಯ. ಇವರು ನಿರ್ಮಿಸಿರುವ ಎರಡು ಬೆಂಚುಗಳು ನಮಗೆಲ್ಲರಿಗೂ ಅತ್ಯುತ್ತಮ ಮಾದರಿಯಾಗಿದೆ,” ಎಂದು ಅಭಿನಂದಿಸಿದರು. ಜಗದ್ಗುರು ಪೋಪ್ ಫ್ರಾನ್ಸಿಸ್ ಅವರ ‘ಲಾವ್ದಾತೋ ಸಿ’ (Laudato si’) ವಿಶ್ವಪತ್ರವನ್ನು ಉಲ್ಲೇಖಿಸಿದ ಅವರು, ನಮ್ಮ ಸಾರ್ವತ್ರಿಕ ಮನೆಯಾದ ಈ ಭೂಮಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
320 ಬಾಟಲಿಗಳು, 300 ಕಿಲೋ ಪ್ಲಾಸ್ಟಿಕ್ ತ್ಯಾಜ್ಯ ಬಳಕೆಗೆ: ದೇಲಂತಬೆಟ್ಟು ಚರ್ಚ್‌ನ ಧರ್ಮಗುರುಗಳಾದ ಫಾ. ರಿಚರ್ಡ್ ಡಿಸೋಜಾ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, “ಈ ಆಸನಗಳನ್ನು ಸಿದ್ಧಪಡಿಸಲು ಸ್ಥಳೀಯ ಜನರು ಸುಮಾರು 8 ತಿಂಗಳುಗಳ ಕಾಲ ಶ್ರಮಿಸಿದ್ದಾರೆ. ಪರಿಸರದಲ್ಲಿದ್ದ ಪ್ಲಾಸ್ಟಿಕ್ ತ್ಯಾಜ್ಯ ಹಾಗೂ ಪ್ಲಾಸ್ಟಿಕ್ ಬಾಟಲಿಗಳನ್ನು ಒಟ್ಟುಗೂಡಿಸಿ ಈ ಕಾರ್ಯಕ್ಕೆ ಬಳಸಲಾಗಿದೆ. ಒಟ್ಟು 320 ಬಾಟಲಿಗಳನ್ನು ಬಳಸಿ, ಸುಮಾರು 300 ಕಿಲೋ ಗ್ರಾಂನಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಮರುಬಳಕೆ ಮಾಡುವ ಮೂಲಕ ಈ ಪರಿಸರ ಪ್ರೇಮಿ ಆಸನಗಳನ್ನು ನಿರ್ಮಿಸಲಾಗಿದೆ,” ಎಂದು ತಾಂತ್ರಿಕ ವಿವರಗಳನ್ನು ಹಂಚಿಕೊಂಡರು.
ಕಾರ್ಯಕ್ರಮದ ಆರಂಭದಲ್ಲಿ ಕ್ಯಾಥೋಲಿಕ್ ಸಭಾ (ರಿ.) ಅಧ್ಯಕ್ಷರಾದ ಶ್ರೀ ರಾಜೇಶ್ ಕೊಪ್ಪಳ ಅವರು ಎಲ್ಲರನ್ನೂ ಸ್ವಾಗತಿಸಿದರು. ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಬೋನಾ ಡಿಸೋಜಾ ಅವರು ಧನ್ಯವಾದ ಸಮರ್ಪಿಸಿದರು.
ಈ ಸಂದರ್ಭದಲ್ಲಿ ಚರ್ಚ್ ಪಾಲನಾ ಸಮಿತಿಯ ಕಾರ್ಯದರ್ಶಿ ಶ್ರೀಮತಿ ವೀಣಾ ಡಿಸೋಜಾ ಹಾಗೂ ಪಾಲನಾ ಸಮಿತಿಯ ಸರ್ವ ಸದಸ್ಯರು ಮತ್ತು ಸ್ಥಳೀಯ ಭಕ್ತಾದಿಗಳು ಉಪಸ್ಥಿತರಿದ್ದರು.