LATEST NEWS

ಪರಿಸರ ಸ್ನೇಹಿ ಗಣೇಶ ಚತುರ್ಥಿ ಆಚರಣೆಗೆ ಕರೆ: ಪಿಒಪಿ, ರಾಸಾಯನಿಕ ಬಣ್ಣದ ಮೂರ್ತಿ ವಿಸರ್ಜಿಸಿದರೆ ಜೈಲು ಶಿಕ್ಷೆಯ ಎಚ್ಚರಿಕೆ!

ಮಂಗಳೂರು: ಮುಂಬರುವ ಗಣೇಶ ಚತುರ್ಥಿ ಹಬ್ಬದ ಸಂದರ್ಭದಲ್ಲಿ ಜಲಮೂಲಗಳ ಮಾಲಿನ್ಯ ತಡೆಗಟ್ಟಲು ಮತ್ತು ಸಾರ್ವಜನಿಕ ಆರೋಗ್ಯ ರಕ್ಷಿಸಲು ಸಾರ್ವಜನಿಕರು ಕಡ್ಡಾಯವಾಗಿ ಪರಿಸರ ಸ್ನೇಹಿ ಗಣೇಶೋತ್ಸವ ಆಚರಿಸಬೇಕು ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ (KSPCB) ಮಂಗಳೂರು ಪ್ರಾದೇಶಿಕ ಕಛೇರಿಯ ಪರಿಸರ ಅಧಿಕಾರಿಗಳು ಪ್ರಕಟಣೆಯಲ್ಲಿ ಕರೆ ನೀಡಿದ್ದಾರೆ.

ರಾಜ್ಯಾದ್ಯಂತ ಪ್ಲಾಸ್ಟರ್ ಆಫ್ ಪ್ಯಾರಿಸ್ (PoP) ಮತ್ತು ಭಾರ ಲೋಹ ಆಧಾರಿತ ರಾಸಾಯನಿಕ ಬಣ್ಣಗಳಿಂದ ಲೇಪಿತವಾದ ಮೂರ್ತಿಗಳ ತಯಾರಿಕೆ, ಮಾರಾಟ, ಬಳಕೆ ಹಾಗೂ ವಿಸರ್ಜನೆಯನ್ನು ಸರ್ಕಾರ ಸಂಪೂರ್ಣವಾಗಿ ನಿಷೇಧಿಸಿದ್ದು, ಇದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಸ್ಥಳೀಯ ಸಂಸ್ಥೆಗಳಿಗೆ ಕಠಿಣ ನಿರ್ದೇಶನ ನೀಡಲಾಗಿದೆ.

ಜೈಲು ಶಿಕ್ಷೆ ಮತ್ತು ದಂಡದ ಎಚ್ಚರಿಕೆ:

ನಿಯಮಗಳನ್ನು ಉಲ್ಲಂಘಿಸಿ ಪಿಒಪಿ (PoP) ಅಥವಾ ನಿಷೇಧಿತ ರಾಸಾಯನಿಕ ಬಣ್ಣದ ಮೂರ್ತಿಗಳನ್ನು ಯಾವುದೇ ಜಲಮೂಲಗಳಿಗೆ ವಿಸರ್ಜಿಸುವುದು ಕಾಯ್ದೆಯಡಿ ಗಂಭೀರ ಅಪರಾಧವಾಗಿದೆ. ಇಂತಹ ಉಲ್ಲಂಘನೆ ಕಂಡುಬಂದಲ್ಲಿ ದಂಡದೊಂದಿಗೆ ಕನಿಷ್ಠ 1 ವರ್ಷ 6 ತಿಂಗಳಿನಿಂದ ಗರಿಷ್ಠ 6 ವರ್ಷಗಳವರೆಗೆ ವಿಸ್ತರಿಸಬಹುದಾದ ಜೈಲು ಶಿಕ್ಷೆ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ಅಲ್ಲದೆ, ನಿಯಮ ಬಾಹಿರವಾಗಿ ಮೂರ್ತಿ ತಯಾರಿಸುವ ಹಾಗೂ ಮಾರಾಟ ಮಾಡುವ ಘಟಕಗಳನ್ನು ಮುಟ್ಟುಗೋಲು ಹಾಕಿಕೊಂಡು ಮುಚ್ಚಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದ್ದಾರೆ.

ಸ್ಥಳೀಯ ಸಂಸ್ಥೆಗಳಿಗೆ ಕಟ್ಟುನಿಟ್ಟಿನ ನಿರ್ದೇಶನಗಳು:

ಮುಂಗಡ ತಪಾಸಣೆ ಮತ್ತು ಜಪ್ತಿ: ಹಬ್ಬಕ್ಕೆ ಮುಂಚಿತವಾಗಿಯೇ ಮೂರ್ತಿ ತಯಾರಿಕಾ ಘಟಕಗಳು, ಗೋದಾಮುಗಳು ಹಾಗೂ ಮಾರಾಟ ಕೇಂದ್ರಗಳ ಮೇಲೆ ಮುಂಗಡ ತಪಾಸಣೆ ನಡೆಸಿ, ಸಾರ್ವಜನಿಕ ಸ್ಥಳಗಳಲ್ಲಿರುವ ಪಿಒಪಿ ಮೂರ್ತಿಗಳನ್ನು ಜಪ್ತಿ ಮಾಡಬೇಕು.

ಮೂಲದಲ್ಲೇ ತ್ಯಾಜ್ಯ ಪ್ರತ್ಯೇಕಣೆ: ಮೂರ್ತಿ ವಿಸರ್ಜನೆಗೆ ಮೊದಲು ಹೂವು, ಎಲೆ, ಬಟ್ಟೆ ಹಾಗೂ ಇತರೆ ಪೂಜಾ ಸಾಮಗ್ರಿಗಳನ್ನು ಬೇರ್ಪಡಿಸಬೇಕು. ವಿಸರ್ಜನಾ ಸ್ಥಳಗಳಲ್ಲಿ ತ್ಯಾಜ್ಯ ಸಂಗ್ರಹಣೆಗಾಗಿ ಬಣ್ಣದ ಕೋಡ್ ಹೊಂದಿರುವ ಕಸದ ತೊಟ್ಟಿಗಳನ್ನು ಕಡ್ಡಾಯವಾಗಿ ಇರಿಸಬೇಕು.

ಮಣ್ಣಿನ ಮೂರ್ತಿಗಳಿಗೆ ಪ್ರೋತ್ಸಾಹ:

ನೈಸರ್ಗಿಕ ಜೇಡಿಮಣ್ಣು ಹಾಗೂ ಜೈವಿಕವಾಗಿ ವಿಘಟನೀಯ ವಸ್ತುಗಳಿಂದ ತಯಾರಿಸಿದ ಪರಿಸರ ಸ್ನೇಹಿ ಮೂರ್ತಿಗಳ ಬಳಕೆಗೆ ಮಾತ್ರ ಆದ್ಯತೆ ನೀಡಬೇಕು.

ಪಿಒಪಿ ಮೂರ್ತಿಗಳು ನೀರಿನಲ್ಲಿ ಕರಗದೆ ಆಮ್ಲಜನಕದ ಪ್ರಮಾಣವನ್ನು ಕುಗ್ಗಿಸುತ್ತವೆ. ಅಲ್ಲದೆ ಪಾದರಸ, ಆರ್ಸೆನಿಕ್, ಸೀಸ ಹಾಗೂ ತಾಮ್ರದಂತಹ ವಿಷಕಾರಿ ಭಾರ ಲೋಹಗಳನ್ನು ಬಿಡುಗಡೆ ಮಾಡಿ ಜಲಚರಗಳಿಗೆ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ತೀವ್ರ ಹಾನಿ ಉಂಟುಮಾಡುತ್ತವೆ. ಆದ್ದರಿಂದ ಸಾರ್ವಜನಿಕರು ಮಂಡಳಿಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿ ಸಹಕರಿಸಬೇಕೆಂದು ಪರಿಸರ ಅಧಿಕಾರಿಗಳು ವಿನಂತಿಸಿದ್ದಾರೆ.

Share News