• Home  
  • ಬೋಳೂರು ಜಾರಂದಾಯ ದೈವಸ್ಥಾನ ಪರಿಸರದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ: ಕುಡ್ಸೆಂಪ್ ಎಂಡಿ ಭೇಟಿಯಾದ ಶಾಸಕ ವೇದವ್ಯಾಸ ಕಾಮತ್
- LATEST NEWS

ಬೋಳೂರು ಜಾರಂದಾಯ ದೈವಸ್ಥಾನ ಪರಿಸರದ ಒಳಚರಂಡಿ ಸಮಸ್ಯೆಗೆ ಶಾಶ್ವತ ಪರಿಹಾರ: ಕುಡ್ಸೆಂಪ್ ಎಂಡಿ ಭೇಟಿಯಾದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ನಗರದ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಆಸುಪಾಸಿನ ಪರಿಸರದಲ್ಲಿ ಸ್ಥಳೀಯರ ಪ್ರಮುಖ ಸಮಸ್ಯೆಯಾಗಿರುವ ಒಳಚರಂಡಿ (ಡ್ರೈನೇಜ್) ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಜಿಲ್ಲಾಧಿಕಾರಿ ದರ್ಶನ್ ಅವರ ಸಮ್ಮುಖದಲ್ಲಿ ಕುಡ್ಸೆಂಪ್ (KUIDFC) ವ್ಯವಸ್ಥಾಪಕ ನಿರ್ದೇಶಕರಾದ ಭೂಬಾಲನ್ ಟಿ. ಅವರನ್ನು ಖುದ್ದಾಗಿ ಭೇಟಿ ಮಾಡಿದ ಶಾಸಕರು, ಯೋಜನೆಗೆ ಅಗತ್ಯ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು ಕಳೆದ 75 ವರ್ಷಗಳಿಂದಲೂ ಈ ಭಾಗದಲ್ಲಿ ಸರಿಯಾದ ಡ್ರೈನೇಜ್ […]

Share News

ಮಂಗಳೂರು: ನಗರದ ಬೋಳೂರಿನ ಶ್ರೀ ಜಾರಂದಾಯ ದೈವಸ್ಥಾನದ ಆಸುಪಾಸಿನ ಪರಿಸರದಲ್ಲಿ ಸ್ಥಳೀಯರ ಪ್ರಮುಖ ಸಮಸ್ಯೆಯಾಗಿರುವ ಒಳಚರಂಡಿ (ಡ್ರೈನೇಜ್) ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸುವ ನಿಟ್ಟಿನಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ ಕಾಮತ್ ಅವರು ಮಹತ್ವದ ಹೆಜ್ಜೆ ಇಟ್ಟಿದ್ದಾರೆ.

ಜಿಲ್ಲಾಧಿಕಾರಿ ದರ್ಶನ್ ಅವರ ಸಮ್ಮುಖದಲ್ಲಿ ಕುಡ್ಸೆಂಪ್ (KUIDFC) ವ್ಯವಸ್ಥಾಪಕ ನಿರ್ದೇಶಕರಾದ ಭೂಬಾಲನ್ ಟಿ. ಅವರನ್ನು ಖುದ್ದಾಗಿ ಭೇಟಿ ಮಾಡಿದ ಶಾಸಕರು, ಯೋಜನೆಗೆ ಅಗತ್ಯ ಅನುದಾನ ಒದಗಿಸುವಂತೆ ಮನವಿ ಸಲ್ಲಿಸಿದರು

ಕಳೆದ 75 ವರ್ಷಗಳಿಂದಲೂ ಈ ಭಾಗದಲ್ಲಿ ಸರಿಯಾದ ಡ್ರೈನೇಜ್ ವ್ಯವಸ್ಥೆ ಇಲ್ಲದಿರುವುದೇ ಸ್ಥಳೀಯ ಜನರ ಬಹುದೊಡ್ಡ ಸಮಸ್ಯೆಯಾಗಿದೆ. ಈ ಹಿಂದೆ ಕುಡ್ಸೆಂಪ್ ಸಂಸ್ಥೆಯಿಂದ ಅಗತ್ಯ ಅನುದಾನಗಳನ್ನು ಮೀಸಲಿಟ್ಟಿದ್ದರೂ, ಇಲ್ಲಿ ನೆಲದಡಿ ಇರುವ ಬಂಡೆಕಲ್ಲುಗಳಂತಹ ಭೌಗೋಳಿಕ ತಾಂತ್ರಿಕ ಸಮಸ್ಯೆಯ ಕಾರಣದಿಂದ ಯೋಜನೆ ಸಾಕಾರಗೊಂಡಿರಲಿಲ್ಲ.

ಈ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಅಧಿಕಾರಿಗಳು, ಸ್ಥಳೀಯ ಸಂಘ-ಸಂಸ್ಥೆಗಳು ಹಾಗೂ ನಿವಾಸಿಗಳೊಂದಿಗೆ ಸಮಗ್ರ ಚರ್ಚೆ ನಡೆಸಲಾಗಿದ್ದು, ಯೋಜನೆ ಪೂರ್ಣಗೊಳಿಸಲು ಸುಮಾರು ಎರಡೂವರೆಯಿಂದ ಮೂರು ಕೋಟಿ ರೂಪಾಯಿ ಅನುದಾನ ಅಗತ್ಯವಿರುವ ಬಗ್ಗೆ ಅಂದಾಜಿಸಲಾಗಿದೆ. ಈ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರಕಿಸಲೇಬೇಕೆಂಬ ಉದ್ದೇಶದಿಂದ ಶಾಸಕರು ಕುಡ್ಸೆಂಪ್ ಎಂಡಿ ಅವರಿಗೆ ವಿಶೇಷ ಒತ್ತಾಯ ಮಾಡಿದರು.

ಶಾಸಕರ ಮನವಿಗೆ ಸೂಕ್ತವಾಗಿ ಸ್ಪಂದಿಸಿದ ಕುಡ್ಸೆಂಪ್ ವ್ಯವಸ್ಥಾಪಕ ನಿರ್ದೇಶಕ ಭೂಬಾಲನ್ ಟಿ. ಅವರು, ಸಂಸ್ಥೆಯಲ್ಲಿ ಲಭ್ಯವಿರುವ ಯಾವುದೇ ಉಳಿಕೆ ಅಥವಾ ಹೆಚ್ಚುವರಿ ಅನುದಾನಗಳ ಲಭ್ಯತೆಯನ್ನು ಪರಿಶೀಲಿಸಿ, ಶಾಸಕರ ಆಶಯದಂತೆ ಯೋಜನೆಗೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೇ, ಈ ಕುರಿತು ತಕ್ಷಣವೇ ಸ್ಥಳ ಪರಿಶೀಲನೆ ನಡೆಸಿ ಶೀಘ್ರವಾಗಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸ್ಥಳದಲ್ಲೇ ಸೂಚನೆ ನೀಡಿದರು.

ಈ ಪ್ರಮುಖ ಸಭೆಯ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಆಯುಕ್ತರಾದ ರವಿಚಂದ್ರ ನಾಯಕ್ ಸೇರಿದಂತೆ ವಿವಿಧ ಇಲಾಖೆಗಳ ಉನ್ನತ ಅಧಿಕಾರಿಗಳು ಉಪಸ್ಥಿತರಿದ್ದರು.

Share News