ಮಂಗಳೂರು: ಬೆಂಗಳೂರಿನ ಆರ್ಯಭಟ ಕಲ್ಬರಲ್ ಆರ್ಗನೈಸೇಷನ್ ಸಂಸ್ಥೆಯು ರಾಷ್ಟ್ರ- ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದ ಅಸಾಧಾರಣ ಸಾಧಕರಿಗೆ ನೀಡುವ 51ನೇ ವರ್ಷದ ಅಂತರ್ ರಾಷ್ಟ್ರೀಯ ಆರ್ಯಭಟ ಪ್ರಶಸ್ತಿಗೆ ಕರಾವಳಿ ಕರ್ನಾಟಕದ ಶ್ರೇಷ್ಠ ನಾಟಕಕಾರ, ನಿರ್ದೇಶಕ ತುಳು ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ಡಾ.ಸಂಜೀವ ದಂಡೆಕೇರಿ ಆಯ್ಕೆ ಯಾಗಿದ್ದಾರೆ. ನಾಟಕ ರಂಗದೊಂದಿಗೆ ಡಾ. ಸಂಜೀವ ದಂಡೆಕೇರಿ ಮಾಡಿರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಸೇವೆಯನ್ನು ಪರಿಗಣಿಸಿ ಈ ಪ್ರಶಸ್ತಿ ನೀಡಲಾಗುತ್ತಿದೆ ಎಂದು ಪ್ರಕಟನೆ ತಿಳಿಸಿದೆ.
*ಆಯುರ್ವೇದ ವೈದ್ಯ* ಡಾ.ಸಂಜೀವ ದಂಡೆಕೇರಿ, ತುಳು ಭಾಷೆಯಲ್ಲಿ ಸುಮಾರು 20 ಜನಪ್ರಿಯ ನಾಟಕಗಳನ್ನು ರಚಿಸಿದ್ದಾರೆ. ಅವರ ಪ್ರಥಮ ನಾಟಕ ‘ಕಲ್ಪಂದಿ ತಿಮ್ಮೆ’ 1962ರಲ್ಲಿ ರಂಗ ಪ್ರದರ್ಶನ ಗೊಂಡಿದೆ. ಅವರ ‘ಬಯ್ಯ ಮಲ್ಲಿಗೆ’ ತುಳು ನಾಟಕ 58 ವರ್ಷಗಳಲ್ಲಿ ದೇಶ – ವಿದೇಶಗಳಲ್ಲಿ ಸುಮಾರು 28 ಸಾವಿರ ಪ್ರದರ್ಶನಗಳನ್ನು ಕಂಡಿದೆ. ‘ಪೊಣ್ಣ ಜನ್ಮ, ‘ಕಾವೇರಿ’, ‘ಬೊಲ್ಲಿ ಮೂಡ್ಂಡ್’, ‘ಪೂ ಪನ್ನೀರ್’, ‘ಪಾದ ಕಾಣಿಕೆ’, ‘ಸರಸ್ವತಿ’, ‘ಒಂಜೇ ಕರ್ಲ್’, ‘ಗಂಗಾ ರಾಮ್’ ಮತ್ತಿತರ ನಾಟಕಗಳನ್ನೂ ರಚಿಸಿದ್ದಾರೆ. ಹಲವು ಚಲನ ಚಿತ್ರಗಳಿಗೆ ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದೆ ಅವರು, ರಂಗಭೂಮಿ ಮತ್ತು ಚಲನಚಿತ್ರಗಳ ಜೊತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ ತೊಡಗಿಸಿಕೊಂಡಿದ್ದರು. ಬಯ್ಯ ಮಲ್ಲಿಗೆ ನಾಟಕ ಅದೇ ಹೆಸರಿನಲ್ಲಿ ಸಿನಿಮಾ ಆಗಿಯೂ ಮೂಡಿ ಬಂದಿದೆ. ಬೊಳ್ಳಿದೋಟ ಸಿನಿಮಾವನ್ನು ಕೂಡಾ ನಿರ್ಮಿಸಿದ್ದಾರೆ.

ಮೇ 23ರಂದು ಬೆಂಗಳೂರು ರವೀಂದ್ರ ಕಲಾಕ್ಷೇತ್ರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಸಮಾರಂಭ ದಲ್ಲಿ ಡಾ.ಸಂಜೀವ ದಂಡೆಕೇರಿ ಆರ್ಯಭಟ ಪ್ರಶಸ್ತಿ ಸ್ವೀಕರಿಸುವರು ಎಂದು ಪ್ರಕಟನೆ ತಿಳಿಸಿದೆ.