ಬೆಂಗಳೂರು: ದಕ್ಷಿಣ ಕನ್ನಡ ಜಿಲ್ಲೆ ಹಾಗೂ ದೇಶಕ್ಕೆ ಅನನ್ಯ ಸೇವೆ ಸಲ್ಲಿಸಿದ ಇಬ್ಬರು ಮಹಾನ್ ಚೇತನಗಳಾದ ಶ್ರೀ ರಾಮಚಂದ್ರ ಬೈಕಂಪಾಡಿ ಮತ್ತು ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್ ಅವರ ಅಗಲಿಕೆಗೆ ಇಂದು ವಿಧಾನ ಪರಿಷತ್ತಿನಲ್ಲಿ ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ಶಾಸಕರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಶ್ರದ್ಧಾಂಜಲಿ ಸಲ್ಲಿಸಿದರು.

“ಪುನರಪಿ ಜನನಂ, ಪುನರಪಿ ಮರಣಂ” ಎಂಬ ಜಗದ್ಗುರು ಶಂಕರಾಚಾರ್ಯರ ತತ್ವವನ್ನು ಸ್ಮರಿಸುತ್ತಾ ತಮ್ಮ ಭಾಷಣವನ್ನು ಪ್ರಾರಂಭಿಸಿದ ಶಾಸಕರು, ಸಮಾಜಕ್ಕೆ ಸೇವೆ ಸಲ್ಲಿಸಿದ ಈ ಇಬ್ಬರು ಗಣ್ಯರ ಆದರ್ಶಮಯ ಬದುಕಿನ ಕುರಿತು ಸದನದಲ್ಲಿ ವಿವರಿಸಿದರು.
ರಾಮಚಂದ್ರ ಬೈಕಂಪಾಡಿ: ಸಂಘದ ಆದರ್ಶ ಹಾಗೂ ಮೊಗವೀರ ಸಮಾಜದ ಶಕ್ತಿ
ರಾಷ್ಟ್ರೀಯ ಸ್ವಯಂಸೇವಕ ಸಂಘದ ಶಿಸ್ತಿನ ಸಿಪಾಯಿಯಾಗಿ ಮತ್ತು ಭಾರತೀಯ ಜನತಾ ಪಾರ್ಟಿಯ ಹಿರಿಯ ಧುರೀಣರಾಗಿ ಶ್ರೀ ರಾಮಚಂದ್ರ ಬೈಕಂಪಾಡಿ ಅವರು ಯಾವುದೇ ಫಲಾಪೇಕ್ಷೆ ಇಲ್ಲದೆ, ತಮ್ಮ ಸಂಪೂರ್ಣ ಜೀವನವನ್ನು ಸಮಾಜ ಸೇವೆಗೆ ಮೀಸಲಿಟ್ಟಿದ್ದರು.
“ಪಂಡಿತ್ ದೀನದಯಾಳ್ ಉಪಾಧ್ಯಾಯರ ‘ಅಂತ್ಯೋದಯ’ ತತ್ವದಂತೆ, ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಬೇಕೆಂದು ಹಂಬಲಿಸಿದವರು. ವಿಶೇಷವಾಗಿ ಮೊಗವೀರ ಸಮಾಜವನ್ನು ಸಂಘಟಿಸುವಲ್ಲಿ ಅವರ ಪಾತ್ರ ಅಪಾರ. ಗಡಿ ಭಾಗದಲ್ಲಿ ಯೋಧರು ದೇಶ ಕಾಯುವಂತೆ, ಕರಾವಳಿಯ ಸಮುದ್ರ ಗಡಿಯಲ್ಲಿ ಮೊಗವೀರ ಸಮಾಜ ದೇಶವನ್ನು ರಕ್ಷಿಸುವ ದೊಡ್ಡ ಪಡೆಯಾಗಿದೆ. ಇಂತಹ ಮೊಗವೀರ ಸಮಾಜವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು, ಹಿಂದೂ ಸಮಾಜದ ಮುಖ್ಯವಾಹಿನಿಗೆ ತರುವಲ್ಲಿ ರಾಮಚಂದ್ರ ಬೈಕಂಪಾಡಿ ಅವರ ಕೊಡುಗೆ ಅಪಾರ” ಎಂದು ಶಾಸಕರು ಸ್ಮರಿಸಿದರು. ಅವರ ಅಗಲಿಕೆ ಕರಾವಳಿ ಭಾಗಕ್ಕೆ ತುಂಬಲಾರದ ನಷ್ಟ ಎಂದು ಕಂಬನಿ ಮಿಡಿದರು.
ಪದ್ಮಶ್ರೀ ಡಾ. ಗಿರೀಶ್ ಭಾರದ್ವಾಜ್: ನದಿ-ಜನರ ಮನಸ್ಸನ್ನು ಬೆಸೆದ ‘ಸೇತುವೆ ಸರದಾರ’
ದಕ್ಷಿಣ ಕನ್ನಡ ಜಿಲ್ಲೆಯ ಪಯಸ್ವಿನಿ ನದಿಯ ತೀರದ ಅರಂತೋಡಿನಲ್ಲಿ ಜನಿಸಿದ ಡಾ. ಗಿರೀಶ್ ಭಾರದ್ವಾಜ್ ಅವರ ಅದ್ಭುತ ಸಾಧನೆಯನ್ನು ಶಾಸಕರು ಮುಕ್ತಕಂಠದಿಂದ ಶ್ಲಾಘಿಸಿದರು. ಶಿಕ್ಷಣ ಮತ್ತು ಬ್ಯಾಂಕಿಂಗ್ ಕ್ಷೇತ್ರಗಳಲ್ಲಿ ಸದಾ ಮುಂದಿರುವ ದಕ್ಷಿಣ ಕನ್ನಡ ಜಿಲ್ಲೆಯ ಕೀರ್ತಿಯನ್ನು ಅವರು ತಂತ್ರಜ್ಞಾನದ ಮೂಲಕ ದೇಶಾದ್ಯಂತ ಪಸರಿಸಿದರು.
“1989ರಲ್ಲಿ ಪಯಸ್ವಿನಿ ನದಿ ದಾಟಲು ಪರದಾಡುತ್ತಿದ್ದ ಜನರಿಗೆ ಅತ್ಯಂತ ಕಡಿಮೆ ವೆಚ್ಚದಲ್ಲಿ ತೂಗುಸೇತುವೆ ನಿರ್ಮಿಸುವ ಮೂಲಕ ಜನರ ಆಶಾಕಿರಣವಾದರು. ಕೋಟಿಗಟ್ಟಲೆ ಹಣ ಮತ್ತು ಸಮಯ ತೆಗೆದುಕೊಳ್ಳುವ ಕಾಂಕ್ರೀಟ್ ಸೇತುವೆಗಳ ಬದಲಾಗಿ, ಕಡಿಮೆ ವೆಚ್ಚದ ತೂಗುಸೇತುವೆಗಳನ್ನು ನಿರ್ಮಿಸುವ ಮೂಲಕ ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಒಡಿಶಾ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಸುಮಾರು 140ಕ್ಕೂ ಹೆಚ್ಚು ತೂಗುಸೇತುವೆಗಳನ್ನು ನಿರ್ಮಿಸಿ ಜನರ ಮನಸ್ಸನ್ನು ಬೆಸೆಯುವ ಕೆಲಸ ಮಾಡಿದರು. ಅವರ ಈ ನಿಸ್ವಾರ್ಥ ಸಾಧನೆಯನ್ನು ಗುರುತಿಸಿ 2017ರಲ್ಲಿ ನರೇಂದ್ರ ಮೋದಿ ಸರ್ಕಾರ ಅವರಿಗೆ ‘ಪದ್ಮಶ್ರೀ’ ಪ್ರಶಸ್ತಿ ನೀಡಿ ಗೌರವಿಸಿದೆ” ಎಂದು ಕಿಶೋರ್ ಕುಮಾರ್ ಪುತ್ತೂರು ಹೆಮ್ಮೆಯಿಂದ ತಿಳಿಸಿದರು.
ಈ ಇಬ್ಬರೂ ಮಹಾನ್ ಪುರುಷರು ತಮ್ಮ ಸ್ವಂತಕ್ಕಾಗಿ ಬದುಕದೆ ಸಮಾಜಕ್ಕಾಗಿ ಬದುಕಿದವರು. ಇಂತಹ ಚೇತನಗಳಿಗೆ ನನ್ನ ಹೃದಯಪೂರ್ವಕ ಶ್ರದ್ಧಾಂಜಲಿ ಎಂದು ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಸದನದಲ್ಲಿ ಸಂತಾಪ ಸೂಚಿಸಿದರು.
