ಮಂಗಳೂರು: “ಭಾರತದ ಪ್ರಜಾಪ್ರಭುತ್ವದ ಜೀವಾಳವಾಗಿರುವ ಮತದಾರರ ಹಕ್ಕಿನೊಂದಿಗೆ ಯಾವುದೇ ರೀತಿಯ ರಾಜಿ ಮಾಡಿಕೊಳ್ಳಲು ಸಾಧ್ಯವಿಲ್ಲ. ಚುನಾವಣಾ ಆಯೋಗದ ವಿಶ್ವಾಸಾರ್ಹತೆಯನ್ನು ಕಾಪಾಡುವ ನೈತಿಕ ಹೊಣೆಗಾರಿಕೆ ಹೊತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರು ತಕ್ಷಣ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು” ಎಂದು ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ವಿಭಾಗದ ಜಿಲ್ಲಾಧ್ಯಕ್ಷರಾದ ದಿನೇಶ್ ಮೂಳೂರು ಆಗ್ರಹಿಸಿದ್ದಾರೆ.

ಮಂಗಳೂರಿನಲ್ಲಿ ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆಯಲ್ಲಿ ಅವರು, ಮತದಾರರ ಪಟ್ಟಿಯ ಪರಿಷ್ಕರಣೆ ಹಾಗೂ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಗೆ ಸಂಬಂಧಿಸಿದಂತೆ ದೇಶಾದ್ಯಂತ ಗಂಭೀರ ಪ್ರಶ್ನೆಗಳು ಎದ್ದಿರುವುದನ್ನು ಪ್ರಸ್ತಾಪಿಸಿದ್ದಾರೆ.
ಆಯೋಗದ ಒಳಗಿನ ಆಕ್ಷೇಪಣೆಗಳು ಆತಂಕಕಾರಿ:
“ಇತ್ತೀಚೆಗೆ ಚುನಾವಣಾ ಆಯೋಗದ ಇಬ್ಬರು ಚುನಾವಣಾ ಆಯುಕ್ತರೇ ವಿವಿಧ ನಿರ್ಧಾರಗಳ ಕುರಿತು, ಪ್ರಮುಖವಾಗಿ ಮತದಾರರ ಹೆಸರುಗಳ ಸೇರ್ಪಡೆ-ತೆಗೆದುಹಾಕುವಿಕೆ ಹಾಗೂ ಚುನಾವಣಾ ಮಾಹಿತಿಯ ನಿರ್ವಹಣೆಗೆ ಸಂಬಂಧಿಸಿದಂತೆ ಹಲವು ಬಾರಿ ಆಕ್ಷೇಪಣೆ ದಾಖಲಿಸಿದ್ದಾರೆ ಎಂಬ ವರದಿಗಳು ಹೊರಬಂದಿವೆ. ಈ ಬೆಳವಣಿಗೆಗಳು ಸಾಮಾನ್ಯ ಮತದಾರನ ಮನಸ್ಸಿನಲ್ಲಿ ಸಹಜವಾಗಿಯೇ ದೊಡ್ಡ ಆತಂಕ ಮತ್ತು ಪ್ರಶ್ನೆಗಳನ್ನು ಹುಟ್ಟುಹಾಕಿವೆ. ಒಬ್ಬ ಅರ್ಹ ನಾಗರಿಕನ ಮತದಾನದ ಹಕ್ಕಿಗೆ ಧಕ್ಕೆಯಾಗುವ ಯಾವುದೇ ಸಾಧ್ಯತೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಬೇಕಾಗಿದೆ” ಎಂದು ಅವರು ತಿಳಿಸಿದ್ದಾರೆ.
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಪಶ್ಚಿಮ ಬಂಗಾಳದ ಪ್ರಕರಣ:
“ಪಶ್ಚಿಮ ಬಂಗಾಳದ SIR ಪ್ರಕ್ರಿಯೆಗೆ ಸಂಬಂಧಿಸಿದಂತೆ ಲಕ್ಷಾಂತರ ಮತದಾರರ ಹೆಸರುಗಳ ಅಳಿಸುವಿಕೆ ಮತ್ತು ಮೇಲ್ಮನವಿ ಪ್ರಕ್ರಿಯೆಯ ಕುರಿತು ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ಗೆ ಮಾಹಿತಿ ನೀಡಿರುವುದೇ ಈ ವಿಚಾರದ ಗಂಭೀರತೆಗೆ ಸಾಕ್ಷಿಯಾಗಿದೆ. ಲಕ್ಷಾಂತರ ಮೇಲ್ಮನವಿಗಳು ದಾಖಲಾಗಿದ್ದು, ಅವುಗಳ ಪರಿಹಾರ ಪ್ರಕ್ರಿಯೆ ಇನ್ನೂ ಮುಂದುವರಿದಿದೆ” ಎಂದು ಮೂಳೂರು ನೆನಪಿಸಿದ್ದಾರೆ.
ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಧಕ್ಕೆ:
“ಚುನಾವಣೆ ಎಂದರೆ ಕೇವಲ ಮತಪೆಟ್ಟಿಗೆಯ ಮುಂದೆ ನಿಂತು ಮತ ಚಲಾಯಿಸುವುದಷ್ಟೇ ಅಲ್ಲ. ಅರ್ಹ ಮತದಾರನ ಹೆಸರು ಪಟ್ಟಿಯಲ್ಲಿ ಸುರಕ್ಷಿತವಾಗಿರುವುದ ರಿಂದ ಹಿಡಿದು, ಆತ ಮುಕ್ತವಾಗಿ ಮತ ಚಲಾಯಿಸುವವರೆಗಿನ ಪ್ರತಿಯೊಂದು ಹಂತವೂ ಪ್ರಜಾಪ್ರಭುತ್ವದ ಭಾಗವಾಗಿದೆ. ಚುನಾವಣಾ ಆಯೋಗವು ಸ್ವತಂತ್ರ ಮತ್ತು ಸಂವಿಧಾನಾತ್ಮಕ ಸಂಸ್ಥೆಯಾಗಿದ್ದು, ಅದರ ಮೇಲಿನ ಜನರ ನಂಬಿಕೆಯೇ ಅದರ ಅತಿ ದೊಡ್ಡ ಶಕ್ತಿಯಾಗಿದೆ. ಈ ವಿಶ್ವಾಸಕ್ಕೆ ಧಕ್ಕೆ ಬಂದರೆ ಅದರ ಪರಿಣಾಮ ಇಡೀ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ಬೀಳುತ್ತದೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.
ಪಾರದರ್ಶಕತೆಗೆ ಒತ್ತಾಯ:
ಮತದಾರರ ಹಕ್ಕು ಯಾವುದೇ ಸರ್ಕಾರ, ಪಕ್ಷ ಅಥವಾ ಅಧಿಕಾರಿಗೆ ಸೀಮಿತವಾದುದಲ್ಲ. ಮತ ಉಳಿದರೆ ಮಾತ್ರ ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಆತ್ಮ ಉಳಿಯಲು ಸಾಧ್ಯ. ಆದ್ದರಿಂದ ಕೇಂದ್ರ ಚುನಾವಣಾ ಆಯೋಗವು ಉದ್ಭವಿಸಿರುವ ಎಲ್ಲಾ ಪ್ರಶ್ನೆಗಳಿಗೆ ಪಾರದರ್ಶಕವಾಗಿ ಸ್ಪಷ್ಟ ಉತ್ತರ ನೀಡಬೇಕು ಮತ್ತು ಮುಖ್ಯ ಚುನಾವಣಾ ಆಯುಕ್ತರು ತಕ್ಷಣವೇ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ಎಂದು ದಿನೇಶ್ ಮೂಳೂರು ಪತ್ರಿಕ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.
