Site icon canaratvnews

ಧವಳ ಕೋ-ಆಪರೇಟಿವ್ ಸೊಸೈಟಿ ಮಂಗಳೂರು: 2025-26ನೇ ಸಾಲಿನಲ್ಲಿ ರೂ. 200 ಕೋಟಿ ವ್ಯವಹಾರ; ರೂ. 50.95 ಲಕ್ಷ ನಿವ್ವಳ ಲಾಭ

ಮಂಗಳೂರು: ನಗರದ ಹೃದಯ ಭಾಗದಲ್ಲಿ ಕೇಂದ್ರ ಕಚೇರಿಯನ್ನು ಹೊಂದಿರುವ ಧವಳ ಕೋ-ಆಪರೇಟಿವ್ ಸೊಸೈಟಿ ನಿಯಮಿತವು 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ಅಭೂತಪೂರ್ವ ಪ್ರಗತಿ ಸಾಧಿಸಿದ್ದು, ಸುಮಾರು ರೂ. 200 ಕೋಟಿ ವ್ಯವಹಾರದೊಂದಿಗೆ ರೂ. 50.95 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಸುದರ್ಶನ್ ಜೈನ್ ಅವರು ತಿಳಿಸಿದ್ದಾರೆ.
ಕಳೆದ ಮೂರು ವರ್ಷಗಳ ಹಿಂದೆ (ಜೂನ್ 2022) ರಾಜ್ಯಮಟ್ಟದ ಉದ್ದೇಶದೊಂದಿಗೆ ಆರಂಭಗೊಂಡ ಈ ಸಂಸ್ಥೆಯು ಅಲ್ಪಾವಧಿಯಲ್ಲಿಯೇ ಗಮನಾರ್ಹ ಸಾಧನೆ ಮಾಡಿದೆ. ದಿನಾಂಕ 31.03.2026ರ ಅಂತ್ಯಕ್ಕೆ ಸಂಸ್ಥೆಯು ರೂ. 22.75 ಕೋಟಿ ಠೇವಣಿಯನ್ನು ಹೊಂದಿದ್ದು, ರೂ. 20.80 ಕೋಟಿಯಷ್ಟು ಮುಂಗಡ ಸಾಲ ಸೌಲಭ್ಯವನ್ನು ಸದಸ್ಯರಿಗೆ ನೀಡಿದೆ

ಶಾಖಾ ವಿಸ್ತರಣೆ ಮತ್ತು ಸೇವೆಗಳು:
ಸಂಸ್ಥೆಯು ಈಗಾಗಲೇ ಮಂಗಳೂರಿನ ಕೇಂದ್ರ ಕಚೇರಿಯ ಜೊತೆಗೆ ಚಿಕ್ಕಮಗಳೂರು ಜಿಲ್ಲೆಯ ಕಳಸ ಮತ್ತು ಕಾರ್ಕಳ ತಾಲೂಕಿನ ಹೊಸ್ಮಾರ್‌ನಲ್ಲಿ ಶಾಖೆಗಳನ್ನು ಯಶಸ್ವಿಯಾಗಿ ನಡೆಸುತ್ತಿದೆ. ಇಲ್ಲಿ ಸಾಮಾನ್ಯ ಬ್ಯಾಂಕಿಂಗ್ ಸೇವೆಯಲ್ಲದೆ, ಚಿನ್ನಾಭರಣ ಭದ್ರತಾ ಸಾಲ, ಇ-ಸ್ಟಾಂಪ್ ಮಾರಾಟ ಹಾಗೂ ಕಳಸ ಶಾಖೆಯಲ್ಲಿ ಕೃಷಿ ಉತ್ಪನ್ನಗಳ ಈಡಿನ ಮೇಲೆ ಸಾಲ ನೀಡುವ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ

ಆಕರ್ಷಕ ಬಡ್ಡಿ ದರ ಮತ್ತು ಶ್ರೇಣಿ:

ಸಂಸ್ಥೆಯು ತನ್ನ ಸದಸ್ಯರ ಹಿತದೃಷ್ಟಿಯಿಂದ ಠೇವಣಿಗಳ ಮೇಲೆ ಒಂದು ವರ್ಷದ ಅವಧಿಗೆ ಶೇ. 10ರಷ್ಟು ಹಾಗೂ ಹಿರಿಯ ನಾಗರಿಕರಿಗೆ ಶೇ. 10.5ರಷ್ಟು ಹೆಚ್ಚಿನ ಬಡ್ಡಿದರವನ್ನು ನೀಡುತ್ತಿದೆ. ಅಲ್ಲದೆ, ಆರಂಭದಿಂದಲೂ ಶಾಸನಬದ್ಧ ಲೆಕ್ಕಪರಿಶೋಧನೆಯಲ್ಲಿ ಸತತವಾಗಿ ‘ಎ’ ಶ್ರೇಣಿಯನ್ನು ಕಾಯ್ದುಕೊಂಡು ಬರುತ್ತಿದೆ.
ಪ್ರಾಮಾಣಿಕ ನಿರ್ದೇಶಕ ಮಂಡಳಿ, ಸಕ್ರಿಯ ಸದಸ್ಯರು ಮತ್ತು ದಕ್ಷ ಸಿಬ್ಬಂದಿ ವರ್ಗದ ಸಹಕಾರದಿಂದ ಈ ವಿಶೇಷ ಸಾಧನೆ ಸಾಧ್ಯವಾಗಿದೆ ಎಂದು ಸುದರ್ಶನ್ ಜೈನ್ ಅವರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Share News
Exit mobile version