ಮಂಗಳೂರು: ಮಿಲಾಗ್ರಿಸ್ (Our Lady of Miracles) ದೇವಾಲಯದಲ್ಲಿ ಇಂದು ಕ್ರೈಸ್ತ ಬಾಂಧವರು ‘ಗರಿಗಳ ಭಾನುವಾರ’ವನ್ನು (Palm Sunday) ಅತ್ಯಂತ ಶ್ರದ್ಧಾಭಕ್ತಿಯಿಂದ ಆಚರಿಸಿದರು.
ನಗರದ ಸಿಲ್ವರ್ ಜೂಬಿಲಿ ಹಾಲ್ನ ವಠಾರದಲ್ಲಿ ಸಮಾವೇಶಗೊಂಡ ನೂರಾರು ಭಕ್ತರು ತಾಳೆ ಎಲೆಗಳನ್ನು ಹಿಡಿದು ಪ್ರಾರ್ಥನೆಯಲ್ಲಿ ಪಾಲ್ಗೊಂಡರು. ಈ ಸಂದರ್ಭದಲ್ಲಿ ವಂದನೀಯ ಫಾ. ಅವಿತ್ ಫಾಯ್ಸ್ ಅವರು ಪ್ರಾರ್ಥನಾ ವಿಧಿಗಳನ್ನು ನೆರವೇರಿಸಿ, ಭಕ್ತರ ಕೈಯಲ್ಲಿದ್ದ ತಾಳೆ ಎಲೆಗಳನ್ನು ಆಶೀರ್ವದಿಸಿದರು.
ನಂತರ ನಡೆದ ಭವ್ಯ ಮೆರವಣಿಗೆಯಲ್ಲಿ ವಂದನೀಯ ಫಾ. ಬೊನವೆಂಚರ್ ನಜರೇತ್, ವಂದನೀಯ ಫಾ. ಆಲ್ವಿನ್ ಸೆರಾವ್, ವಂದನೀಯ ಫಾ. ಜೆರಾಲ್ಡ್ ಪಿಂಟೋ ಹಾಗೂ ವಂದನೀಯ ಫಾ. ಉದಯ ಫರ್ನಾಂಡಿಸ್ ಅವರು ಭಕ್ತಾದಿಗಳೊಂದಿಗೆ ತಾಳೆ ಎಲೆಗಳನ್ನು ಹಿಡಿದು ಹೆಜ್ಜೆ ಹಾಕಿದರು.

ಮೆರವಣಿಗೆಯು ಮುಖ್ಯ ಚರ್ಚ್ ತಲುಪಿದ ಬಳಿಕ, ವಂದನೀಯ ಫಾ. ಉದಯ ಫರ್ನಾಂಡಿಸ್ ಅವರು ಪವಿತ್ರ ಬಲಿಪೂಜೆಯನ್ನು ಅರ್ಪಿಸಿದರು. ಯೇಸು ಕ್ರಿಸ್ತರ ಪೀಡೆ ಮತ್ತು ಮರಣವನ್ನು ಧ್ಯಾನಿಸುತ್ತಾ, ಭಕ್ತರು ಭಕ್ತಿಭಾವದಿಂದ ‘ಪವಿತ್ರ ವಾರ’ಕ್ಕೆ (Holy Week) ಪ್ರವೇಶ ಮಾಡಿದರು.

ದೇವಾಲಯದ ಗಾಯನ ಮಂಡಳಿ ಹಾಗೂ ಸ್ವಯಂಸೇವಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಯೇಸುಕ್ರಿಸ್ತರು ಜೆರುಸಲೆಮ್ ನಗರಕ್ಕೆ ಪ್ರವೇಶಿಸಿದ ಸ್ಮರಣಾರ್ಥವಾಗಿ ನಡೆದ ಈ ಆಚರಣೆಯಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತಾದಿಗಳು ಪಾಲ್ಗೊಂಡು ವಿಜಯದ ಸಂಕೇತವಾದ ತಾಳೆ ಎಲೆಗಳನ್ನು ಮನೆಗೆ ಕೊಂಡೊಯ್ದರು.














