DAKSHINA KANNADAHOMELATEST NEWS

ತುಳು ಭಾಷೆಯನ್ನು ರಾಜ್ಯದ ೨ನೇ ಅಧಿಕೃತ ಭಾಷೆಯಾಗಿಸಲು ಕ್ಯಾಬಿನೆಟ್‌ನಲ್ಲಿ ನಿರ್ಣಯಿಸಿ: ಶಾಸಕ ವೇದವ್ಯಾಸ ಕಾಮತ್ ಆಗ್ರಹ

ಮಂಗಳೂರು: ತುಳು ಭಾಷೆಯನ್ನು ರಾಜ್ಯದ ಎರಡನೇ ಅಧಿಕೃತ ಭಾಷೆಯಾಗಿಸಬೇಕೆಂಬುದು ತುಳುವರ ಒಕ್ಕೊರಲ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಸೆಪ್ಟೆಂಬರ್ 18 ರಂದು ಮಂಗಳೂರಿನಲ್ಲಿ ನಡೆಯಲಿರುವ ರಾಜ್ಯ ಸಚಿವ ಸಂಪುಟ (ಕ್ಯಾಬಿನೆಟ್) ಸಭೆಯಲ್ಲೇ ಸರ್ಕಾರ ಅಂತಿಮ ನಿರ್ಣಯ ಕೈಗೊಳ್ಳಬೇಕು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, “ನಾನು ಶಾಸಕನಾದಾಗಿನಿಂದಲೂ ತುಳು ಭಾಷೆಗೆ ಅಧಿಕೃತ ಸ್ಥಾನಮಾನ ದೊರಕಿಸಿಕೊಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಾ ಬಂದಿದ್ದೇನೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ, ತುಳು ಪರ ಹೋರಾಟಗಾರರೊಂದಿಗೆ ಸೇರಿ ಅನೇಕ ಪೂರಕ ದಾಖಲೆಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗಿತ್ತು. ತುಳು ಲಿಪಿ ಶಾಸನಗಳು, ಸಾವಿರಾರು ವರ್ಷಗಳ ಇತಿಹಾಸವಿರುವ ತಾಳೆ ಓಲೆಗಳು, ಪಾಡ್ದನ, ದೈವಾರಾಧನೆಯ ನುಡಿಗಳು, ತುಳುನಾಡಿನ ಪುರಾತನ ದೇವಸ್ಥಾನ ಹಾಗೂ ದೈವಸ್ಥಾನಗಳಲ್ಲಿ ಬಳಕೆಯಾಗಿರುವ ತುಳು ಭಾಷೆಯ ಸಂಸ್ಕಾರ, ತುಳು ಸಾಹಿತ್ಯ, ತುಳು ಕ್ಯಾಲೆಂಡರ್ ಹಾಗೂ ತುಳು ಪತ್ರಿಕೆಗಳು ಸೇರಿದಂತೆ ಭಾಷೆಯ ಪ್ರಾಚೀನತೆಗೆ ಸಾಕ್ಷಿಯಾದ ಎಲ್ಲ ಪ್ರಮುಖ ದಾಖಲೆಗಳನ್ನು ಒದಗಿಸಲಾಗಿತ್ತು” ಎಂದು ನೆನಪಿಸಿಕೊಂಡಿದ್ದಾರೆ.

“ಅಂದಿನ ಸಚಿವರಾಗಿದ್ದ ಸುನಿಲ್ ಕುಮಾರ್ ಕಾರ್ಕಳ ಅವರು ಈ ಪ್ರಕ್ರಿಯೆಯನ್ನು ವೇಗಗೊಳಿಸಲು ಡಾ. ಮೋಹನ್ ಆಳ್ವ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿದ್ದರು. ತುಳುವರ ದಶಕಗಳ ಹೋರಾಟ ಮತ್ತು ಒತ್ತಾಸೆಗೆ ಅನುಗುಣವಾಗಿ ಬಹುತೇಕ ಎಲ್ಲ ಪ್ರಮುಖ ಕೆಲಸಗಳು ಹಿಂದಿನ ಸರ್ಕಾರದ ಅವಧಿಯಲ್ಲೇ ಪೂರ್ಣಗೊಂಡಿದ್ದು, ಕೇವಲ ಕೊನೆಯ ಹಂತದ ನಿರ್ಧಾರಗಳು ಮಾತ್ರ ಬಾಕಿ ಉಳಿದಿವೆ. ಆದರೆ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಆ ಸಮಿತಿಯ ವರದಿ ಅನುಷ್ಠಾನಕ್ಕೆ ಬಾರದೇ ಇರುವುದು ತೀವ್ರ ಬೇಸರದ ಸಂಗತಿ” ಎಂದು ಶಾಸಕರು ವಿಷಾದ ವ್ಯಕ್ತಪಡಿಸಿದ್ದಾರೆ.

ಮಂಗಳೂರಿನಲ್ಲಿಯೇ ಸಚಿವ ಸಂಪುಟ ಸಭೆ ನಡೆಯುತ್ತಿರುವುದು ತುಳು ಭಾಷೆಗೆ ನ್ಯಾಯ ಒದಗಿಸಲು ಸೂಕ್ತ ಸಂದರ್ಭವಾಗಿದೆ. ಹಾಗಾಗಿ ಸರ್ಕಾರ ಇನ್ನು ವಿಳಂಬ ಮಾಡದೆ, ಸೆಪ್ಟೆಂಬರ್ 18ರ ಮಂಗಳೂರು ಕ್ಯಾಬಿನೆಟ್ ಸಭೆಯಲ್ಲೇ ತುಳುವರ ಸುದೀರ್ಘ ಕನಸನ್ನು ನನಸು ಮಾಡುವ ಅಂತಿಮ ನಿರ್ಣಯವನ್ನು ಕೈಗೊಳ್ಳಬೇಕು ಎಂದು ವೇದವ್ಯಾಸ ಕಾಮತ್ ಅವರು ಸರ್ಕಾರವನ್ನು ಪ್ರಬಲವಾಗಿ ಆಗ್ರಹಿಸಿದ್ದಾರೆ.

Share News