DAKSHINA KANNADALATEST NEWS

ಶ್ರೀ ಕೃಷ್ಣ ಜನ್ಮಾಷ್ಟಮಿ, ಮೊಂತಿ ಫೆಸ್ಟ್‌ಗೆ ಸ್ಥಳೀಯ ರಜೆ ಘೋಷಿಸಿ: ಜಿಲ್ಲಾಧಿಕಾರಿಗೆ ಶಾಸಕ ವೇದವ್ಯಾಸ ಕಾಮತ್ ಪತ್ರ

ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ಆಚರಿಸಲಾಗುವ ಶ್ರೀ ಕೃಷ್ಣ ಜನ್ಮಾಷ್ಠಮಿ ಮತ್ತು ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ತೆನೆ ಹಬ್ಬದ (ಮೊಂತಿ ಫೆಸ್ಟ್‌) ಪ್ರಯುಕ್ತ ಜಿಲ್ಲೆಗೆ ಸಾರ್ವತ್ರಿಕ ಸ್ಥಳೀಯ ರಜೆ ಘೋಷಿಸುವಂತೆ ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಅವರು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ವಿಶೇಷ ಮನವಿ ಮಾಡಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಶಾಸಕರು, ನಾಡಿನೆಲ್ಲೆಡೆ ಹಬ್ಬಗಳ ಸಂಭ್ರಮ ಆರಂಭವಾಗಿದ್ದು, ಕರಾವಳಿ ಜಿಲ್ಲೆಗಳಲ್ಲಿ ಅಸಂಖ್ಯಾತ ಭಕ್ತರು ಅತ್ಯಂತ ಸಡಗರದಿಂದ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸಲಿದ್ದಾರೆ. ಇದು ಕೇವಲ ಧಾರ್ಮಿಕ ಆಚರಣೆಯಾಗಿರದೇ, ನಮ್ಮ ಭಾರತೀಯ ಸಾಂಸ್ಕೃತಿಕ ಪರಂಪರೆ, ಕುಟುಂಬ ಮೌಲ್ಯಗಳು ಮತ್ತು ನೈತಿಕ ಶಿಕ್ಷಣವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಮಹತ್ವದ ದಿನವಾಗಿದೆ ಎಂದು ತಿಳಿಸಿದ್ದಾರೆ.

ಅದೇ ರೀತಿ, ಕರಾವಳಿ ಭಾಗದಲ್ಲಿ ಕ್ರೈಸ್ತ ಸಮುದಾಯದವರು ಅತ್ಯಂತ ಆಸ್ಥೆಯಿಂದ ಆಚರಿಸುವ ಮರಿಯ ಜಯಂತಿ/ತೆನೆ ಹಬ್ಬವೂ ವಿಶಿಷ್ಟವಾದುದಾಗಿದೆ. ಈ ಹಬ್ಬದ ಆಚರಣೆಗೆ ಸಾರ್ವಜನಿಕರಿಗೆ ಅನುಕೂಲವಾಗುವಂತೆ ರಜೆ ಘೋಷಣೆ ಮಾಡಬೇಕೆಂದು ಕ್ರೈಸ್ತ ಸಮುದಾಯದ ಹಲವಾರು ಮುಖಂಡರು ಹಾಗೂ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಪ್ರಮುಖರು ನನ್ನಲ್ಲಿ ವಿನಂತಿಸಿಕೊಂಡಿದ್ದಾರೆ ಎಂದು ಶಾಸಕರು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಕರಾವಳಿಯ ಈ ಎರಡೂ ಪ್ರಮುಖ ಹಬ್ಬಗಳನ್ನು ಸಾರ್ವಜನಿಕರು ಮತ್ತು ಭಕ್ತಾದಿಗಳು ಕುಟುಂಬ ಸಮೇತರಾಗಿ ಸಡಗರದಿಂದ ಆಚರಿಸಲು ಅನುವಾಗುವಂತೆ, ಜಿಲ್ಲಾಧಿಕಾರಿಗಳು ತಮ್ಮ ವಿವೇಚನಾ ಅಧಿಕಾರದಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಶ್ರೀ ಕೃಷ್ಣ ಜನ್ಮಾಷ್ಠಮಿ ಹಾಗೂ ಕ್ರೈಸ್ತ ಸಮುದಾಯದವರ ಮರಿಯ ಜಯಂತಿ/ತೆನೆ ಹಬ್ಬದ ದಿನದಂದು ಸ್ಥಳೀಯ ರಜೆ ಘೋಷಿಸಬೇಕೆಂದು ಶಾಸಕ ವೇದವ್ಯಾಸ ಕಾಮತ್ ಅವರು ಪ್ರಕಟಣೆಯ ಮೂಲಕ ಆಗ್ರಹಿಸಿದ್ದಾರೆ.

Share News