canaratvnews

ಸತ್ತಾಗ ಎಷ್ಟು ಜನ ದುಃಖಿಸುತ್ತಾರೆ ಎಂದು ತಿಳಿಯಲು ಸಾವಿನ ನಟನೆ ಮಾಡಿದ ನಿವೃತ್ತ ಯೋಧ

ಪಾಟ್ನಾ : ಬಿಹಾರದಲ್ಲಿ ಮಾಜಿ ಸೈನಿಕನೋರ್ವ ತನ್ನ ಸಾವಿನ ನಂತರ ಯಾರು ದುಃಖಿಸುತ್ತಾರೆ ಮತ್ತು ಎಷ್ಟು ಪ್ರೀತಿ ಸಿಗುತ್ತದೆ ಎಂದು ತಿಳಿಯಲು ಶವಪೆಟ್ಟಿಗೆ ಮೇಲೆ ಮಲಗಿ ಸ್ಮಶಾನಕ್ಕೆ ಬಂದ ವಿಚಿತ್ರ ಘಟನೆ ನಡೆದಿದೆ.

ಗಯಾ ಜಿಲ್ಲೆಯ ಗುರಾರು ಬ್ಲಾಕ್‌ನ ಕೊಂಚಿ ಗ್ರಾಮದಲ್ಲಿ ಘಟನೆ ನಡೆದಿದೆ. ವಾಯುಪಡೆಯ ಮಾಜಿ ಸೈನಿಕ ಮೋಹನ್ ಲಾಲ್(74), ಜೀವಂತವಾಗಿರುವಾಗ ತನ್ನದೇ ಅಣಕು ಅಂತ್ಯಕ್ರಿಯೆ ಏರ್ಪಡಿಸಿ ಎಲ್ಲರನ್ನೂ ಆಘಾತಗೊಳಿಸಿದರು. ಈ ಕುರಿತ ವೀಡಿಯೊ ವೈರಲ್ ಆಗಿದೆ.

ಅಲಂಕರಿಸಿದ ಶವಪೆಟ್ಟಿಗೆಯಲ್ಲಿ ತನ್ನನ್ನು ಸ್ಮಶಾನಕ್ಕೆ ಕೊಂಡೊಯ್ಯುವಂತೆ ಮೋಹನ್ ಲಾಲ್ ಕೆಲವರಲ್ಲಿ ಕೇಳಿಕೊಂಡಿದ್ದಾರೆ. ಎಲ್ಲಾ ವಿಧಿ ವಿಧಾನಗಳನ್ನು ಪೂರೈಸುವಂತೆಯೂ ಹೇಳಿದ್ದಾರೆ. ಸ್ಮಶಾನಕ್ಕೆ ಕೊಂಡೊಯ್ಯುವಾಗ ಕೆಲ ಭಾವನಾತ್ಮಕ ಹಾಡುಗಳನ್ನು ನುಡಿಸುವಂತೆಯೂ ಹೇಳಿದ್ದರು.

ಮೋಹನ್ ಲಾಲ್ ಮೃತಪಟ್ಟಿದ್ದಾರೆಂದು ನೂರಾರು ಗ್ರಾಮಸ್ಥರು ವಿಶಿಷ್ಟ ಮೆರವಣಿಗೆಯಲ್ಲಿ ಸೇರಿಕೊಂಡಿದ್ದರು. ಅವರು ಸ್ಮಶಾನಕ್ಕೆ ತಲುಪಿದಾಗ ಎದ್ದು ನಿಂತು ಎಲ್ಲರನ್ನೂ ಆಘಾತಕ್ಕೀಡು ಮಾಡಿದರು. ಅವರ ಸಾಂಕೇತಿಕ ಪ್ರತಿಕೃತಿಯನ್ನು ಸುಡಲಾಯಿತು ಮತ್ತು ಸಾಮೂಹಿಕ ಔತಣಕೂಟವನ್ನು ಕೂಡ ಏರ್ಪಡಿಸಲಾಗಿತ್ತು ಎಂದು ವರದಿಯಾಗಿದೆ.

ಈ ಕುರಿತು ಪ್ರತಿಕ್ರಿಯಿಸಿದ ಮೋಹನ್ ಲಾಲ್, ಅಂತ್ಯಕ್ರಿಯೆಯಲ್ಲಿ ಯಾರು ಭಾಗವಹಿಸುತ್ತಾರೆಂದು ನಾನು ನೋಡಲು ಬಯಸಿದ್ದೆ. ಮೃತಪಟ್ಟ ಬಳಿಕ ಜನರು ಮೃತದೇಹವನ್ನು ಹೊತ್ತೊಯ್ಯುತ್ತಾರೆ. ಆದರೆ ನಾನು ಅದನ್ನು ಸ್ವತಃ ವೀಕ್ಷಿಸಲು ಮತ್ತು ಜನರು ನನಗೆ ಎಷ್ಟು ಗೌರವ ಮತ್ತು ಪ್ರೀತಿಯನ್ನು ನೀಡುತ್ತಾರೆಂದು ತಿಳಿಯಲು ಬಯಸಿದ್ದೆ ಎಂದು ಹೇಳಿದರು.

ಮೋಹನ್ ಲಾಲ್ ಗ್ರಾಮದಲ್ಲಿ ಸಮಾಜಸೇವೆಗೆ ಹೆಸರುವಾಸಿಯಾಗಿದ್ದಾರೆ. ಮಳೆಗಾಲದಲ್ಲಿ ಗ್ರಾಮದಲ್ಲಿ ಮೃತರ ಅಂತ್ಯಕ್ರಿಯೆ ನಡೆಸುವಾಗ ಸಮಸ್ಯೆಯಾಗುತ್ತಿರುವುದನ್ನು ಗಮನಿಸಿದ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಗ್ರಾಮದಲ್ಲಿ ಸುಸಜ್ಜಿತ ಸ್ಮಶಾನವನ್ನು ನಿರ್ಮಿಸಿದ್ದರು.

Share News
Exit mobile version