ವಿಟ್ಲ: ಬಂಟ್ವಾಳ ತಾಲೂಕು ಪೆರುವಾಯಿ ಗ್ರಾಮದ ಸೊಸೈಟಿ ಆವರಣದಿಂದ ಹುಲ್ಲು ಮೇಯಲು ಹೋಗಿದ್ದ ದನ ಕಳ್ಳತನ ಮಾಡಿದ ಆರೋಪದಲ್ಲಿ ಉಳ್ಳಾಲದ ಓರ್ವ ಆರೋಪಿಯನ್ನು ತಿಂಗಳ ಬಳಿಕ ವಿಟ್ಲ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಝುಲ್ಫಾನ್ ಮಾಲಿಕ್ (30) ಬಂಧಿತ ಆರೋಪಿ.
ಘಟನೆ ವಿವರ
18-11-2025 ರಂದು ಬಂಟ್ವಾಳ ತಾಲೂಕು ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಗ್ರಾಮದ ಸೊಸೈಟಿ ಆವರಣದಲ್ಲಿ ಗಣೇಶ ರೈ ಹಾಗೂ ನಾರಾಯಣ ನಾಯ್ಕ ಅವರ 4 ದನಗಳು ಮೇಯುತ್ತಿದ್ದವು. ರಾತ್ರಿ ವೇಳೆ ಅಲ್ಲಿಯೇ ಮಲಗಿದ್ದ ವೇಳೆ ಅವುಗಳನ್ನು ಝುಲ್ಫಾನ್ ಮಾಲಿಕ್ ಸೇರಿ ಇತರರು ಕದ್ದೊಯ್ದಿದ್ದರು. ಈ ಬಗ್ಗೆ ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸದ್ಯ ಪ್ರಕರಣ ಸಂಬಂಧ ಓರ್ವನನ್ನು ಬಂಧಿಸಿದ್ದು, ಉಳಿದವರಿಗಾಗಿ ಶೋಧ ನಡೆಯುತ್ತಿದೆ.
ಸ್ಥಳೀಯರೇ ಮಾಹಿತಿದಾರರು…!
ಪೆರುವಾಯಿ ಆಸುಪಾಸಿನಲ್ಲಿ ಹಲವರು ದನ ಸಾಕುತ್ತಿದ್ದು, ಇದನ್ನು ಗಮನಿಸಿದ ಕೆಲ ಸ್ಥಳೀಯರೇ ದೂರದೂರಿನವರನ್ನು ಕರೆಸಿ ದನಕಳ್ಳತನ ಮಾಡಿಸುತ್ತಿದ್ದಾರೆಂದು ಆರೋಪ ಕೇಳಿಬರುತ್ತಿದೆ. ವಿಟ್ಲ ಆಸುಪಾಸಿನಲ್ಲಿ ಈ ಹಿಂದೆಯೂ ಇಂತಹದ್ದೇ ಪ್ರಕರಣಗಳು ಮರುಕಳಿಸುವುದ್ದರಿಂದ ಇದರ ಬಗ್ಗೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸುತ್ತಿದ್ದಾರೆ. ಸ್ಥಳೀಯರ ಬೆಂಬಲವಿಲ್ಲದೇ ದೂರದ ಊರಿನ ಆರೋಪಿಗಳು ಇಲ್ಲಿ ಬಂದು ದನ ಕದಿಯುವುದು ಅಸಾಧ್ಯ. ಆದುದರಿಂದ ಕಳ್ಳರ ಮಾಹಿತಿದಾರರನ್ನು ಪತ್ತೆಹಚ್ಚುವಂತೆ ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ.