ಚಿತ್ರದುರ್ಗ, ಜು.25:“ಶಿಕ್ಷಕರ ಕೊರತೆ ಇರುವ ಸರ್ಕಾರಿ ಶಾಲೆಗಳನ್ನು ನಗರ ಪ್ರದೇಶದ ಅತ್ಯುತ್ತಮ ಖಾಸಗಿ ಶಾಲೆಗಳು ದತ್ತು ಪಡೆದು ಶಿಕ್ಷಕರನ್ನು ನಿಯೋಜಿಸಿ, ತಮ್ಮ ಶಾಲೆಗಳ ಗುಣಮಟ್ಟದ ಶಿಕ್ಷಣವನ್ನು ಗ್ರಾಮೀಣ ಭಾಗದ ಮಕ್ಕಳಿಗೆ ನೀಡಬೇಕು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.


ಹಿರಿಯೂರಿನ ವೇದಾವತಿ ವಿಜ್ಞಾನ ಕಾಲೇಜು ಕ್ರೀಡಾಂಗಣದಲ್ಲಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಶನಿವಾರ ಪ್ರತಿಕ್ರಿಯೆ ನೀಡಿದರು.
ಸರ್ಕಾರಿ ಶಾಲೆಗಳನ್ನು ಖಾಸಗಿ ಶಾಲೆಗಳು ದತ್ತು ತೆಗೆದುಕೊಳ್ಳಬೇಕು ಎನ್ನುವ ಬಗ್ಗೆ ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಕೇಳಿದಾಗ, “ಖಾಸಗಿ ಶಾಲೆಗಳು ಇದರ ಬಗ್ಗೆ ನನ್ನ ಬಳಿ ಹೇಳಲಿ ಆ ನಂತರ ನಾನು ಪ್ರತಿಕ್ರಿಯೆ ನೀಡುತ್ತೇನೆ. ಇದು ನನಗೂ ಅವರಿಗೂ ಇರುವ ಒಪ್ಪಂದ. ಖಾಸಗಿ ಶಾಲೆಗಳು ಎಂದರೆ ಎಲ್ಲಾ ಶಾಲೆಗಳು ದತ್ತು ತೆಗೆದುಕೊಳ್ಳುವುದಲ್ಲ. ಇದಕ್ಕೆ ಕೆಲವು ಮಾನದಂಡಗಳಿವೆ. ಅತ್ಯುತ್ತಮ ಶಾಲೆಗಳು ಗ್ರಾಮೀಣ ಭಾಗದ ಶಾಲೆಗಳನ್ನು ತಮ್ಮ ಶಾಲೆಗಳ ಮಟ್ಟಕ್ಕೆ ಕೊಂಡೊಯ್ಯಲು ದತ್ತು ತೆಗೆದುಕೊಳ್ಳುವುದು. ಸಿಎಸ್ ಆರ್ ಹಣವನ್ನು ಹೀಗೆ ಖರ್ಚು ಮಾಡಿದರೆ ಪ್ರಾಥಮಿಕ ಶಿಕ್ಷಣ ಬಲಗೊಳ್ಳುತ್ತದೆ. ಹಳ್ಳಿ ಮಕ್ಕಳು ನಗರಗಳಿಗೆ ಶಿಕ್ಷಣಕ್ಕಾಗಿ ವಲಸೆ ಬರುವುದು ತಪ್ಪಬೇಕು. ಅವರಿಗೂ ಬೆಂಗಳೂರು ಮಟ್ಟದ ಶಿಕ್ಷಣ ದೊರೆಯಬೇಕು ಎಂಬುದು ನನ್ನ ಅಭಿಲಾಷೆ. ಸರ್ಕಾರ 1.40 ಲಕ್ಷ ರೂಪಾಯಿಯನ್ನು ಒಂದು ಮಗುವಿನ ಮೇಲೆ ಖರ್ಚು ಮಾಡುತ್ತಿದೆ. ಆದರೂ ಸಹ ಗುಣಮಟ್ಟದ ಶಿಕ್ಷಣ ನೀಡಲು ತೊಡಕಾಗುತ್ತಿದೆ. ಅದಕ್ಕಾಗಿ ನಾನು ಖಾಸಗಿ ಅವರ ಬಳಿ ಮಾತುಕತೆ ನಡೆಸಿದ್ದೇನೆ” ಎಂದು ತಿಳಿಸಿದರು.

