ಮಂಗಳೂರು: ಕರಾವಳಿ ಇತಿಹಾಸದಲ್ಲೇ ಅತ್ಯಂತ ಮಹತ್ವದ ದಿನವಾದ ಇಂದು, ಮಂಗಳೂರಿನ ಪಡೀಲ್‌ನಲ್ಲಿರುವ ನೂತನ ಜಿಲ್ಲಾಡಳಿತ ಸಂಕೀರ್ಣ ‘ಪ್ರಜಾ ಸೌಧ’ದಲ್ಲಿ ವಿಶೇಷ ಸಚಿವ ಸಂಪುಟ ಸಭೆ ಯಶಸ್ವಿಯಾಗಿ ಮುಕ್ತಾಯಗೊಂಡ ಬೆನ್ನಲ್ಲೇ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರು ಹಾಗೂ ಮಾಜಿ ಕೇಂದ್ರ ಸಚಿವರಾದ ಶ್ರೀ ಬಿ. ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ

ಬಿಸಿ ರೋಡು ಬಂಟ್ವಾಳ ರಸ್ತೆಯಲ್ಲಿರುವ ಹಿರಿಯ ನಾಯಕರ ನಿವಾಸಕ್ಕೆ ತೆರಳಿದ ಡಿ.ಕೆ. ಶಿವಕುಮಾರ್ ಅವರು, ಪೂಜಾರಿ ಅವರ ಆರೋಗ್ಯ ವಿಚಾರಿಸಿ, ಅವರ ಪಾದ ಮುಟ್ಟಿ ಆಶೀರ್ವಾದ ಪಡೆದರು.

ಟ್ವಿಟರ್‌ನಲ್ಲಿ ಸಂತಸ ಹಂಚಿಕೊಂಡ : ಸಿಎಂ ಈ ಅಪೂರ್ವ ಭೇಟಿಯ ಚಿತ್ರಗಳನ್ನು ತಮ್ಮ ಅಧಿಕೃತ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಹಂಚಿ ಕೊಂಡಿರುವ ಡಿ.ಕೆ. ಶಿವಕುಮಾರ್ ಅವರು, ಭೇಟಿಯ ಕುರಿತು ತೀವ್ರ ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರಿನಲ್ಲಿ ನಡೆದ ಐತಿಹಾಸಿಕ ವಿಶೇಷ ಸಚಿವ ಸಂಪುಟ ಸಭೆಯ ಮಹತ್ವದ ಸಂದರ್ಭದಲ್ಲೇ ಹಿರಿಯರ ಭೇಟಿಯ ಸುಯೋಗ ಒದಗಿಬಂದಿದ್ದು ಅತ್ಯಂತ ಸಂತಸ ತಂದಿದೆ” ಎಂದು ಅವರು ಬರೆದುಕೊಂಡಿದ್ದಾರೆ.

ಪ್ರೇರಣೆಯ ಚಿಲುಮೆ ಪೂಜಾರಿ:
“ಬಿ. ಜನಾರ್ದನ ಪೂಜಾರಿ ಅವರು ಪಕ್ಷಕ್ಕೆ ಹಾಗೂ ಸಮಾಜಕ್ಕೆ ನೀಡಿರುವ ಕೊಡುಗೆ ಅನನ್ಯ. ಅವರ ಶಿಸ್ತು, ಪ್ರಾಮಾಣಿಕತೆ ಮತ್ತು ಬದ್ಧತೆ ನಮ್ಮಂತಹ ಕೋಟ್ಯಂತರ ಕಾಂಗ್ರೆಸ್ ಕಾರ್ಯಕರ್ತರಿಗೆ ಇಂದಿಗೂ ದಾರಿದೀಪವಾಗಿದೆ. ಕರಾವಳಿ ನೆಲದಲ್ಲಿ ಈ ಮಹತ್ವದ ಸಭೆಯ ದಿನವೇ ಅವರ ಮಾರ್ಗದರ್ಶನ ಮತ್ತು ಆಶೀರ್ವಾದ ಲಭಿಸಿರುವುದು ನನ್ನ ಸೌಭಾಗ್ಯ” ಎಂದು ಸಿಎಂ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಹಿರಿಯ ನಾಯಕರ ಜೊತೆ ಕೆಲಕಾಲ ರಾಜಕೀಯ ವಿದ್ಯಮಾನಗಳು ಹಾಗೂ ಕರಾವಳಿಯ ಅಭಿವೃದ್ಧಿ ವಿಷಯಗಳ ಕುರಿತು ಅನೌಪಚಾರಿಕ ಮಾತುಕತೆ ನಡೆಸಿದರು. ಭೇಟಿಯ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಪ್ರಮುಖ ನಾಯಕರು ಉಪಸ್ಥಿತರಿದ್ದರು.
