ಮಂಗಳೂರು , ಡಿ. 22: ಕ್ರಿಸ್ಮಸ್ ಪ್ರೀತಿ, ಶಾಂತಿ, ಭರವಸೆಯ ಹಬ್ಬವಾಗಿದೆ. ನಮ್ಮ ರಕ್ಷಣೆಯ ಮೂಲ ತತ್ವವಾಗಿದೆ. ದೇವರು ಮನುಷ್ಯರಾಗಿ ಮನುಷ್ಯರನ್ನು ದೇವರೆಡೆಗೆ ಕೊಂಡೊಯ್ಯುವ ಹಬ್ಬವಾಗಿದ್ದು, ಸಮಾಜದಲ್ಲಿ ಶಾಂತಿ ಸೌಹಾರ್ದತೆಯಿಂದ ಬಾಳಬೇಕಿದೆ ಎಂದು ಉಡುಪಿ ಧರ್ಮಪ್ರಾಂತ್ಯದ ಧರ್ಮಾಧ್ಯಕ್ಷ ಅ|ವಂ|ಡಾ| ಜೆರಾಲ್ಡ್ ಐಸಾಕ್ ಲೋಬೊ ಹೇಳಿದರು.

ಸಂತ ಅಂತೋನಿ ಆಶ್ರಮದಲ್ಲಿ ಸೋಮವಾರ ನಡೆದ ಸೌಹಾರ್ದ ಕ್ರಿಸ್ಮಸ್ ಸಂಭ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಶ್ರೀ ರಾಮಕೃಷ್ಣ ಮಠದ ಶ್ರೀ ಯೋಗೇಶಾನಂದ ಸ್ವಾಮೀಜಿ ಮಾತನಾಡಿ, ಧರ್ಮವನ್ನು ಎಲ್ಲರೂ ಸೇರಿ ಆಚರಿಸಿದರೆ ಪ್ರೀತಿಯ ಸಮಾಜ ನಿರ್ಮಾಣವಾಗುತ್ತದೆ. ಸಂತೋಷ, ಸಮಾನತೆ, ಸೌಹಾರ್ದತೆ ಬೆಳೆಯುತ್ತದೆ. ಇಂತಹ ಸೌಹಾರ್ದ ಆಚರಣೆ ಸಮಾಜವನ್ನು ಒಗ್ಗೂಡಿಸುತ್ತದೆ ಎಂದರು. ಸಾಮಾಜಿಕ ಕಾರ್ಯಕರ್ತ ಜಕಾರಿಯಾ ಜೋಕಟ್ಟೆ ಮಾತನಾಡಿ, ಇಂದಿನ ಸಮಾಜದಲ್ಲಿ ಸೌಹಾರ್ದತೆ ಅಗತ್ಯವಾಗಿದ್ದು, ಇಂತಹ ಆಚರಣೆಗಳು ಅದಕ್ಕೆ ವೇದಿಕೆಯಾಗಿದೆ ಎಂದರು.
ಕಾರ್ಯಕ್ರಮ ಆಯೋಜಕ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಪ್ರಸ್ತಾವಿಸಿದರು. ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್.ವಿ., ಪ್ರಸಾದ್ ನೇತ್ರಾಲಯದ ವ್ಯವಸ್ಥಾಪಕ ನಿರ್ದೇಶಕ ಡಾ| ಕೃಷ್ಣ ಪ್ರಸಾದ್ ಕೂಡ್ಲು, ಸಂತ ಅಂತೋನಿ ಆಶ್ರಮದ ನಿರ್ದೇಶಕ ವಂ| ಜೆ.ಬಿ. ಕ್ರಾಸ್ತಾ, ಪ್ರಮುಖರಾದ ನಾಗೇಂದ್ರ ಕುಮಾರ್, ವಿಶ್ವಾಸ್ ಕುಮಾರ್ ದಾಸ್, ಶಾಲೆಟ್ ಪಿಂಟೊ, ಯೇನೆಪೋಯ ಅಬ್ದುಲ್ ಕುಂಞಿ ಮತ್ತಿತರರು ಉಪಸ್ಥಿತರಿದ್ದರು. ಮಾಜಿ ಮೇಯರ್ ಶಶಿಧರ್ ಹೆಗ್ಡೆ ವಂದಿಸಿದರು. ಲೋಕೇಶ್ ರೈ ನಿರೂಪಿಸಿದರು.