ಚಿಕ್ಕಮಗಳೂರು: ದತ್ತ ಜಯಂತಿ ಬ್ಯಾನರ್ ತೆರವು ವಿಚಾರವಾಗಿ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.

ಜಿಲ್ಲೆಯ ಕಡೂರು ತಾಲೂಕಿನ ಸಖರಾಯಪಟ್ಟಣದಲ್ಲಿ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ (40) ಅವರನ್ನು ಸಂಜಯ್ ಮತ್ತು ಮಿಥುನ್ ಎಂಬವರು ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಆರೋಪಿಗಳು ಬಜರಂಗದಳ ಕಾರ್ಯಕರ್ತರು ಎನ್ನಲಾಗಿದೆ. ಗಲಾಟೆಯಲ್ಲಿ ಆರೋಪಿ ಸಂಜಯ್ ತಲೆಗೂ ಗಂಭೀರ ಗಾಯವಾಗಿದ್ದು, ಆತನನ್ನು ಚಿಕ್ಕಮಗಳೂರು ಮಲ್ಲೇಗೌಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊಲೆಯಾದ ಗಣೇಶ್ ಸಖರಾಯಪಟ್ಟಣ ಗ್ರಾಮ ಪಂಚಾಯಿತಿ ಸದಸ್ಯರಾಗಿದ್ದರು.
ಬಂಧಿತರನ್ನು ಸಂಜಯ್, ಭೂಷಣ್, ಮಿಥುನ್ ಸೇರಿದಂತೆ 5 ಜನರನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆ ಬಳಿಕ ಸಖರಾಯಪಟ್ಟಣದಲ್ಲಿ ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಹೆಚ್ಚಿಸಲಾಗಿದೆ. ಆರೋಪಿಗಳ ಪತ್ತೆಗೆ ನಾಲ್ಕು ವಿಶೇಷ ತಂಡಗಳನ್ನು ರಚಿಸಲಾಗಿದೆ ಎಂದು ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಆಮ್ಟೆ ತಿಳಿಸಿದ್ದಾರೆ. ಗಲಾಟೆಯಲ್ಲಿ ಶಾಮೀಲಾದ ಇಬ್ಬರು ಈಗಾಗಲೇ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ ಎಂದು ಅವರು ತಿಳಿಸಿದ್ದಾರೆ.
ಕಾಂಗ್ರೆಸ್ ಕಾರ್ಯಕರ್ತ ಗಣೇಶ್ ಗೌಡ ಕಲ್ಮರಡಿ ಮಠದ ಕಿರಿದಾದ ರಸ್ತೆಯಲ್ಲಿ ಕಾರಿನಲ್ಲಿ ತೆರಳುತ್ತಿದ್ದಾಗ ಬೈಕ್ನಲ್ಲಿ ಅಡ್ಡಗಟ್ಟಿದ ಹಂತಕರ ತಂಡ ಅವರ ಮೇಲೆ ಮಚ್ಚಿನಿಂದ ದಾಳಿ ಮಾಡಿದೆ. ನಂತರ ಮಚ್ಚನ್ನು ಅಲ್ಲೇ ಬಿಸಾಡಿ ಹಂತಕರು ತೆರಳಿದ್ದಾರೆ. ಸದ್ಯ ಆ ಮಚ್ಚು ರಸ್ತೆಯಲ್ಲೇ ಬಿದ್ದಿದೆ. ಘಟನೆ ಸಂಬಂಧ ಸಖರಾಯಪಟ್ಟಣ ಪೊಲೀರು ಈವರೆಗೆ ಐವರನ್ನು ವಶಕ್ಕೆ ಪಡೆದಿದ್ದಾರೆ.

