ರಾಯ್ಪುರ್: ಆದಿವಾಸಿಗಳನ್ನು ಮತಾಂತರಗೊಳಿಸಿ, ಅವರನ್ನು ಕಳ್ಳಸಾಗಣೆ ಮಾಡಲಾಗುತ್ತಿದೆ ಎಂಬ ಆರೋಪದಲ್ಲಿ ಬಂಧಿತರಾಗಿದ್ದ ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಎನ್‌ಐಎ ಕೋರ್ಟ್ ಷರತ್ತುಬದ್ಧ ಜಾಮೀನು ನೀಡಿದೆ.
ಶುಕ್ರವಾರ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಧೀಶ (ಎನ್ಐಎ ನ್ಯಾಯಾಲಯ) ಸಿರಾಜುದ್ದೀನ್ ಖುರೇಷಿ, ತಮ್ಮ ತೀರ್ಪನ್ನು ಕಾಯ್ದಿರಿಸಿದ್ದರು.ಶನಿವಾರ ತೀರ್ಪು ಪ್ರಕಟಿಸಿದ ರಾಷ್ಟ್ರೀಯ ತನಿಖಾ ದಳ ನ್ಯಾಯಾಲಯ, ಕೇರಳದ ಇಬ್ಬರು ಕ್ರೈಸ್ತ ಸನ್ಯಾಸಿನಿಯರಿಗೆ ಹಾಗೂ ಛತ್ತೀಸ್ ಗಢದ ಓರ್ವ ಆದಿವಾಸಿ ಯುವಕನಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದೆ.
ಆರೋಪಿಗಳಿಗೆ ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ ನ್ಯಾಯಾಲಯ, 50,000 ರೂ. ಮೌಲ್ಯದ ನಗದು ಬಾಂಡ್, ತಮ್ಮ ಪಾಸ್ ಪೋರ್ಟ್ ಗಳನ್ನು ಶರಣಾಗಿಸಬೇಕು ಹಾಗೂ ವಿದೇಶಕ್ಕೆ ತೆರಳಲು ನ್ಯಾಯಾಲಯದ ಅನುಮತಿ ಪಡೆಯಬೇಕು ಎಂಬ ಷರತ್ತುಗಳನ್ನು ವಿಧಿಸಿದೆ. ಶುಕ್ರವಾರ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ್ದ ತೀರ್ಪು ಪ್ರಕಟಿಸಿದ ನ್ಯಾಯಾಲಯ, ಆರೋಪಿಗಳನ್ನು ಪೊಲೀಸರ ವಶದಲ್ಲಿರಿಸಿಕೊಳ್ಳಬೇಕಾದ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಕೆಲವು ನಿರ್ಬಂಧಗಳನ್ನು ವಿಧಿಸಿ ಅವರಿಗೆ ಜಾಮೀನು ಮಂಜೂರು ಮಾಡಿತು.
ಸನ್ಯಾಸಿನಿಯರ ಬಿಡುಗಡೆಯಾಗುತ್ತಿದ್ದಂತೆ ಗಳಗಳನೇ ಅತ್ತ ಸಂತ್ರಸ್ತೆ
ಇದರ ಬೆನ್ನಿಗೇ, ಅಚ್ಚರಿಯ ಬೆಳವಣಿಗೆಯೊಂದರಲ್ಲಿ ನಮ್ಮನ್ನು ಬಲವಂತವಾಗಿ ಮತಾಂತರಗೊಳಿಸಲಾಗುತ್ತಿದೆ ಎಂಬುದು ಕಟ್ಟು ಕತೆ ಎಂದು ಸಂತ್ರಸ್ತ ಬಾಲಕಿಯರೇ ಆರೋಪಿಸಿರುವ ಘಟನೆ ನಡೆದಿದೆ. ಕ್ರೈಸ್ತ ಸನ್ಯಾಸಿನಿಯರು ನಾರಾಯಣಪುರ್‌ನ ಆದಿವಾಸಿ ಬಾಲಕಿಯರನ್ನು ಬಲವಂತವಾಗಿ ಮತಾಂತರಗೊಳಿಸಿ, ಅವರನ್ನು ಕಳ್ಳಸಾಗಣೆ ಮಾಡುತ್ತಿದ್ದಾರೆ ಎಂಬ ಆರೋಪದ ಮೇಲೆ ಜುಲೈ 25ರಂದು ದುರ್ಗ್ ರೈಲ್ವೆ ನಿಲ್ದಾಣದಿಂದ ಅವರನ್ನು ಬಂಧಿಸಲಾಗಿತ್ತು.
ತಮಗೆ ಬಂದ ದೂರನ್ನು ಆಧರಿಸಿ ತ್ವರಿತವಾಗಿ ಕ್ರಮ ಕೈಗೊಂಡಿದ್ದ ಸರಕಾರಿ ರೈಲ್ವೆ ಪೊಲೀಸರು, ಪ್ರೀತಿ ಮೇರಿ, ವಂದನಾ ಫ್ರಾನ್ಸಿಸ್ ಹಾಗೂ ಅವರೊಂದಿಗಿದ್ದ ಸ್ಥಳೀಯ ಯುವಕ ಸುಕಮನ್ ಮಾಂಡವಿ ಎಂಬುವವರನ್ನು ಬಂಧಿಸಿತ್ತು. ಕ್ರೈಸ್ತ ಸನ್ಯಾಸಿನಿಯರಾದ ಪ್ರೀತಿ ಮೇರಿ ಹಾಗೂ ವಂದನಾ ಫ್ರಾನ್ಸಿಸ್ ಅವರಿಗೆ ಜಾಮೀನು ಮಂಜೂರಾಗುತ್ತಿದ್ದಂತೆಯೇ ಮಾಧ್ಯಮಗಳೆದುರು ಗದ್ಗದಿತರಾದ ಸಂತ್ರಸ್ತೆ ಎಂದು ಹೇಳಲಾಗಿದ್ದ ಬಾಲಕಿ ಸುಕನ್ಮತಿ ಮಾಂಡವಿ, “ನಾವು ನಮ್ಮ ಕೆಲಸಕ್ಕಾಗಿ ಆಗ್ರಾಗೆ ತೆರಳುತ್ತಿದ್ದೆವು.
ಆಗ ಜ್ಯೋತಿ ಶರ್ಮ ನಾವು ಧಾರ್ಮಿಕ ಮತಾಂತರ ಮಾಡುತ್ತಿದ್ದೇವೆ ಹಾಗೂ ಮಾನವ ಕಳ್ಳ ಸಾಗಣೆ ಮಾಡುತ್ತಿದ್ದೇವೆ ಎಂದು ಆರೋಪಿಸಿದರು. ಈ ಆರೋಪಗಳು ಸುಳ್ಳು. ನಾವು ಬಾಲ್ಯದಿಂದಲೂ ಪ್ರಾರ್ಥನೆಗೆ ಹಾಜರಾಗುತ್ತಿದ್ದೇವೆ. ಆಕೆ ಏನು ಹೇಳುತ್ತಿದ್ದಾರೆ ಅದು ಸುಳ್ಳು” ಎಂದು ತಮ್ಮ ವಿರುದ್ಧದ ಆರೋಪಗಳನ್ನು ಅಲ್ಲಗಳೆದರು.
ಈ ಕುರಿತು ಪ್ರತಿಕ್ರಿಯಿಸಿದ ವಕೀಲ ಅಮೃತೊ ದಾಸ್, “ಸಂತ್ರಸ್ತರನ್ನು ಮನೆಗೆ ಕಳಿಸಲಾಯಿತು. ಪ್ರಾಸಿಕ್ಯೂಷನ್ ಅವರನ್ನು ವಶಕ್ಕೂ ಕೇಳಲಿಲ್ಲ. ಇದರ ಬೆನ್ನಿಗೇ ಸತ್ಯ ಹೊರ ಬರಲಿದೆ” ಎಂದು ತಿಳಿಸಿದ್ದಾರೆ.