DAKSHINA KANNADAHOMELATEST NEWS

ವೀರ ಯೋಧ ಚಂದ್ರಶೇಖರ ಪೂಜಾರಿ ಅವರಿಗೆ ಪೆರುವಾಯಿಯಲ್ಲಿ ಅಭೂತಪೂರ್ವ ನಾಗರಿಕ ಸನ್ಮಾನ

ವಿಟ್ಲ: ಭಾರತೀಯ ಸೇನೆಯಲ್ಲಿ ಸುದೀರ್ಘ 23 ವರ್ಷಗಳ ಕಾಲ ದೇಶದ ಗಡಿ ಹಾಗೂ ತಾಯ್ನಾಡಿನ ರಕ್ಷಣೆಗಾಗಿ ನಿಷ್ಠೆ, ಶಿಸ್ತು ಮತ್ತು ಸಮರ್ಪಣಾ ಭಾವದಿಂದ ಅಮೂಲ್ಯ ಸೇವೆ ಸಲ್ಲಿಸಿ ಸೇವಾ ನಿವೃತ್ತರಾದ ಪೆರುವಾಯಿಯ ಕಲ್ಲಡ್ಕ ನಿವಾಸಿ, ವೀರ ಯೋಧ ಶ್ರೀ ಚಂದ್ರಶೇಖರ ಪೂಜಾರಿ ಅವರಿಗೆ ಭಾನುವಾರ ಹುಟ್ಟೂರಿನಲ್ಲಿ ಅಭೂತಪೂರ್ವ ಹಾಗೂ ಅದ್ಧೂರಿ ನಾಗರಿಕ ಸ್ವಾಗತ ಕೋರಿ, ಸನ್ಮಾನಿಸಲಾಯಿತು.

ವಿಶ್ವ ಹಿಂದೂ ಪರಿಷತ್ ಬಜರಂಗದಳ ಘಟಕ (ಶ್ರೀ ಕೃಷ್ಣ ಶಾಖೆ, ಪೆರುವಾಯಿ) ಹಾಗೂ ಗ್ರಾಮದ ಸಮಸ್ತ ಸಾರ್ವಜನಿಕರ ಆಶ್ರಯದಲ್ಲಿ ಈ ಅಭಿನಂದನಾ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

10 ಕಿ.ಮೀ. ಭವ್ಯ ವಾಹನ ಜಾಥಾ:ಹಿರಿಯರಾದ ನಿವೃತ್ತ ಶಿಕ್ಷಕ ರಾಮಯ್ಯ ಶೆಟ್ಟಿ ಅವರು ವಾಹನ ಜಾಥಾಕ್ಕೆ ಗೌರವಪೂರ್ವಕವಾಗಿ ಚಾಲನೆ ನೀಡಿದರು. ಕುದ್ದುಪದವು ಯುವಕ ಮಂಡಲದಿಂದ ಪೆರುವಾಯಿ ಕಲ್ಲಡ್ಕದವರೆಗೆ ಸುಮಾರು 10 ಕಿ.ಮೀ. ನಡೆದ ಈ ಬೃಹತ್ ಭವ್ಯ ಮೆರವಣಿಗೆ ಹಾಗೂ ವಾಹನ ಜಾಥಾದಲ್ಲಿ 200ಕ್ಕೂ ಅಧಿಕ ವಾಹನಗಳು ಹಾಗೂ 600ಕ್ಕೂ ಅಧಿಕ ರಾಷ್ಟ್ರಭಕ್ತ ಬಂಧುಗಳು ಭಾಗವಹಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.

ದಾರಿಯುದ್ದಕ್ಕೂ ಸಹಸ್ರಾರು ಸಾರ್ವಜನಿಕರು, ದೇಶಭಕ್ತರು ಹಾಗೂ ಯುವಕರು ಜಾಥಾದಲ್ಲಿ ಪಾಲ್ಗೊಂಡು, ಹೂಮಳೆಗರೆದು, “ಭಾರತ್ ಮಾತಾ ಕೀ ಜೈ” ಘೋಷಣೆಗಳೊಂದಿಗೆ ಯೋಧನಿಗೆ ಜೈಕಾರ ಕೂಗಿ ಗೌರವ ಸಲ್ಲಿಸಿದರು. ಪೆರುವಾಯಿಗೆ ತಲುಪುತ್ತಿದ್ದಂತೆ ಸಾರ್ವಜನಿಕರು ಯೋಧನಿಗೆ ಆರತಿ ಬೆಳಗಿ ಭಾವುಕ ಹಾಗೂ ಹೆಮ್ಮೆಯ ಸ್ವಾಗತ ಕೋರಿದರು.

ಚರ್ಚ್ ಧರ್ಮಗುರುಗಳಿಂದ ಸನ್ಮಾನ:

ಮೆರವಣಿಗೆಯು ಸಾಗುವ ಹಾದಿಯಲ್ಲಿ ಪೆರುವಾಯಿ ಫಾತಿಮಾ ಮಾತೆಯ ದೇವಾಲಯದ (ಚರ್ಚ್) ವತಿಯಿಂದ ಯೋಧ ಚಂದ್ರಶೇಖರ್ ಅವರಿಗೆ ಆತ್ಮೀಯ ಸನ್ಮಾನ ಸಲ್ಲಿಕೆಯಾಯಿತು. ಚರ್ಚ್ ಬಳಿಯ ರಸ್ತೆಯಲ್ಲಿ ದೇವಾಲಯದ ಧರ್ಮಗುರುಗಳಾದ ವಂ. ಸೈಮನ್ ಡಿಸೋಜಾ ಅವರು ಯೋಧನಿಗೆ ಶಾಲು ಹೊದಿಸಿ, ಹೂಹಾರ ಹಾಕಿ ಗೌರವಿಸುವ ಮೂಲಕ ಸೌಹಾರ್ದತೆ ಮತ್ತು ದೇಶಭಕ್ತಿಯ ಅನನ್ಯ ಸಂದೇಶ ಸಾರಿದರು.ತಮ್ಮ ಸುದೀರ್ಘ ಸೇನಾ ಸೇವಾವಧಿಯಲ್ಲಿ ತೋರಿದ ಉತ್ಕೃಷ್ಟ ಸೇವೆಗಾಗಿ ಎರಡು ಬಾರಿ ಸೇನಾ ಹಿರಿಯ ಅಧಿಕಾರಿಗಳ ಪ್ರಶಂಸಾ ಪತ್ರಕ್ಕೆ ಭಾಜನರಾಗಿದ್ದ ಚಂದ್ರಶೇಖರ ಪೂಜಾರಿ ಸಾಹಸ ಮತ್ತು ದೇಶಸೇವೆಯನ್ನು ಗ್ರಾಮಸ್ಥರು ಅತ್ಯಂತ ಹೆಮ್ಮೆಯಿಂದ ಸ್ಮರಿಸಿದರು.ಕಾರ್ಯಕ್ರಮದಲ್ಲಿ ವಿಶ್ವ ಹಿಂದೂ ಪರಿಷತ್ ಮಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರಧಾನ ಕಾರ್ಯದರ್ಶಿ ಸಚಿನ್‌ ಮೆಲ್ಕಾರ್, ಮಂಗಳೂರು ಗ್ರಾಮಾಂತರ ಜಿಲ್ಲಾ ಬಜರಂಗದಳದ ಸಂಚಾಲಕರಾದ ಲೋಹಿತ್ ಪಣೋಲಿಬೈಲ್‌, ವಿಶ್ವ ಹಿಂದೂ ಪರಿಷತ್ತಿನ ಪ್ರಮುಖರಾದ ಪದ್ಮನಾಭ ಕಟ್ಟೆ, ರಾಧಾಕೃಷ್ಣ ಚೆಲ್ಲಡ್ಕ, ರಾಜೀವ್ ಭಂಡಾರಿ, ದಿವ್ಯ ಶಕ್ತಿ ಯುವಕ ಮಂಡಲದ ಅಧ್ಯಕ್ಷರಾದ ಸತೀಶ್‌ ಪಾಟಾಳಿ ಉಪಸ್ಥಿತರಿದ್ದರು.ಪೆರುವಾಯಿ ಘಟಕದ ವಿಶ್ವ ಹಿಂದೂ ಪರಿಷತ್‌ ಗೌರವಾಧ್ಯಕ್ಷರಾದ ಮಂಜುನಾಥ್ ಆಚಾರ್ಯ, ಅಶ್ವಥನಗರ ಅಧ್ಯಕ್ಷರಾದ ಶೇಖರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ಪೆರುವಾಯಿ, ಸಂಚಾಲಕರಾದ ವಿನೀತ್ ಕಾನ ಪೆರುವಾಯಿ ಸೇರಿದಂತೆ ಪರಿವಾರ ಸಂಘಟನೆಯ ಎಲ್ಲಾ ಪ್ರಮುಖರು, ಪದಾಧಿಕಾರಿಗಳು, ಕಾರ್ಯಕರ್ತರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಗ್ರಾಮದ ನೂರಾರು ದೇಶಭಕ್ತರು ಉಪಸ್ಥಿತರಿದ್ದು, ನಿವೃತ್ತ ಯೋಧನ ಮುಂದಿನ ಸುಖಕರ ಜೀವನಕ್ಕೆ ಶುಭ ಹಾರೈಸಿದರು.

Share News