LATEST NEWS

ದಕ್ಷಿಣ ಕನ್ನಡ ಕೇಟರಿಂಗ್ ಮಾಲಕರ ಸಂಘದ ನೂತನ ಪದಾಧಿಕಾರಿಗಳ ಪದಗ್ರಹಣ:

ಮಂಗಳೂರು: ದಕ್ಷಿಣ ಕನ್ನಡ ಕೇಟರಿಂಗ್ ಮಾಲಕರ ಸಂಘದ (ರಿ.) ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ಇತ್ತೀಚೆಗೆ ನಗರದ ಗ್ರಾಂಡ್ ಸಭಾಭವನದಲ್ಲಿ ಅತ್ಯಂತ ಯಶಸ್ವಿಯಾಗಿ ಜರುಗಿತು. ಕಾರ್ಯಕ್ರಮವನ್ನು ಮುಖ್ಯ ಅತಿಥಿ, ಉದ್ಯಮಿ ಶಶಿಧರ್ ಶೆಟ್ಟಿ ಬರೋಡ ಹಾಗೂ ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು.

ಬಳಿಕ ನಡೆದ ಪದಗ್ರಹಣ ಪ್ರಕ್ರಿಯೆಯಲ್ಲಿ ನಿಕಟಪೂರ್ವ ಅಧ್ಯಕ್ಷರಿಂದ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರ ನಡೆಯಿತು. ಸಂಘದ ನೂತನ ಅಧ್ಯಕ್ಷರಾಗಿ ಹರೀಶ್ ಶೆಟ್ಟಿ, ಕಾರ್ಯದರ್ಶಿಯಾಗಿ ದೇವಿಪ್ರಸಾದ್ ಶೆಟ್ಟಿ ಹಾಗೂ ಕೋಶಾಧಿಕಾರಿಯಾಗಿ ಸಂತೋಷ್ ಮೆನೆಜಸ್ ಅಧಿಕಾರ ಸ್ವೀಕರಿಸಿದರು.

ಕೇಟರಿಂಗ್ ಉದ್ಯಮ ಬದುಕಿನ ದಾರಿ: ಶಶಿಧರ್ ಶೆಟ್ಟಿ ಬರೋಡ:

ಕಾರ್ಯಕ್ರಮದಲ್ಲಿ ಮಾತನಾಡಿದ ಶಶಿಧರ್ ಶೆಟ್ಟಿ ಬರೋಡ ಅವರು, “ಕೇಟರಿಂಗ್ ಉದ್ಯಮವು ಕೇವಲ ಆಹಾರ ಪೂರೈಕೆ ಕ್ಷೇತ್ರವಲ್ಲ, ಬದಲಾಗಿ ಅನೇಕ ಕುಟುಂಬಗಳಿಗೆ ಜೀವನೋಪಾಯ ಕಲ್ಪಿಸುವ ಪ್ರಮುಖ ಉದ್ಯಮವಾಗಿದೆ. ಬಡ ವಿದ್ಯಾರ್ಥಿಗಳಿಗೆ ಉದ್ಯೋಗ ಹಾಗೂ ಬದುಕಿಗೆ ದಾರಿ ತೋರಿಸುವ ಶ್ರೇಷ್ಠ ಕ್ಷೇತ್ರವೂ ಇದಾಗಿದೆ. ತಾವು ಪೋಸ್ಟ್‌ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದ ದಿನಗಳಲ್ಲಿ ಈ ಕ್ಷೇತ್ರಕ್ಕೆ ಕಾಲಿಟ್ಟು, ಪರಿಶ್ರಮದಿಂದ ಇಂದು ನಿತ್ಯ 8 ಲಕ್ಷ ಜನರಿಗೆ ಊಟದ ವ್ಯವಸ್ಥೆ ಮಾಡುವ ಮಟ್ಟಕ್ಕೆ ಬೆಳೆದಿದ್ದೇವೆ. ಮುಂದಿನ ದಿನಗಳಲ್ಲಿ ಮಂಗಳೂರಿನ ಪ್ರವಾಸೋದ್ಯಮ ಬೆಳವಣಿಗೆಯೊಂದಿಗೆ ಕೇಟರಿಂಗ್ ಉದ್ಯಮಕ್ಕೂ ಅತ್ಯುತ್ತಮ ಬೇಡಿಕೆ ಸೃಷ್ಟಿಯಾಗಲಿದೆ” ಎಂದು ಆಶಾಭಾವನೆ ವ್ಯಕ್ತಪಡಿಸಿದರು.

ಅತಿಥಿ ಚಂದ್ರಹಾಸ್ ಶೆಟ್ಟಿ ರಂಗೋಲಿ ಮಾತನಾಡಿ, ಯಾವುದೇ ಸಮಾರಂಭ ವಿಜೃಂಭಣೆಯಿಂದ ಯಶಸ್ವಿಯಾಗಿ ನಡೆಯುವಲ್ಲಿ ಮತ್ತು ಅತಿಥಿ ಸತ್ಕಾರದಲ್ಲಿ ಕೇಟರಿಂಗ್ ಮಾಲಕರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಕಳೆದ 40 ವರ್ಷಗಳಿಂದ ಕೇಟರಿಂಗ್ ಉದ್ಯಮದಲ್ಲಿ ಬಾಣಸಿಗರಾಗಿ ಅನುಪಮ ಸೇವೆ ಸಲ್ಲಿಸಿದ ಹಿರಿಯರಾದ ಚಿಕ್ಕಯ್ಯ ಪೂಜಾರಿ, ಇಬ್ರಾಹಿಂ ಮೋನು ಹಾಗೂ ಲೀನಾ ಲೋಬೊ ಅವರನ್ನು ಆತ್ಮೀಐವಾಗಿ ಸನ್ಮಾನಿಸಲಾಯಿತು. ಪೂಜಾ ಕೇಟರಿಂಗ್ ಮಾಲಕ ಜಯಕೃಷ್ಣ ಕೋಟ್ಯಾನ್ ಅವರನ್ನೂ ಇದೇ ವೇಳೆ ಗೌರವಿಸಲಾಯಿತು.

ವೇದಿಕೆಯಲ್ಲಿ ಭೋಜರಾಜ್ ವಾಮಂಜೂರು, ವಾಲ್ಟರ್ ನಂದಳಿಕೆ, ವೇಣುಗೋಪಾಲ್ ಶೆಟ್ಟಿ, ಸಂಘದ ಗೌರವಾಧ್ಯಕ್ಷ ಸುಧಾಕರ್ ಕಾಮತ್, ಸಂತೋಷ್ ಡಿಸೋಜಾ, ರಾಜೇಶ್ ಕೆ., ಚೆನ್ನಪ್ಪ ಕುಲಾಲ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು.

Share News